ಗೇರುಸೊಪ್ಪ ಮಹಿಮೆ ಗ್ರಾಮದ ಗೋಳು ಹೇಳುವವರಿಲ್ಲ ಕೇಳುವವರಿಲ್ಲ…!! ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಳ್ಳದ ಕಂಟಕ: ಶಾಲೆಯನ್ನೇ ಬಿಟ್ಟ ವಿದ್ಯಾರ್ಥಿಗಳು|

ವರದಿ: ಸುಚಿತ್ರಾ ನಾಯ್ಕ, ಹೊನ್ನಾವರ

ಜಿಲ್ಲಾ ಸುದ್ದಿಗಳು

ಹೊನ್ನಾವರ:

CHETAN KENDULI

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಹಿಮೆ ಗ್ರಾಮದಲ್ಲಿ ಕಳೆದ 50 ದಶಕದಿಂದ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಬಹುತೇಕ ಅರಣ್ಯ ವನ್ನು ಹೊಂದಿರುವ ಈ ಗ್ರಾಮವು ಹೊನ್ನಾವರ ನಗರದಿಂದ 48 ಕಿಲೋಮೀಟರ್ ದೂರದಲ್ಲಿರುವ ಉಪ್ಪೋಣಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಬರುತ್ತದೆ. ಈ ಗ್ರಾಮದಲ್ಲಿ 1200 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ.

ಉತ್ತರ ಕನ್ನಡ ಜಿಲ್ಲೆ ಗುಡ್ಡಗಾಡು ಪ್ರದೇಶವನ್ನೇ ಹೆಚ್ಚು ಹೊಂದಿದ ಜಿಲ್ಲೆಯಾಗಿದೆ. ಹೀಗಾಗಿ ಇಲ್ಲಿನ ಜನರು ತಮ್ಮ ಊರುಗಳಿಂದ ನಗರ ಪ್ರದೇಶಕ್ಕೆ ಬರಬೇಕು ಎಂದರೆ ಹರಸಾಹಸವನ್ನೇ ಪಡಬೇಕು. ಇಲ್ಲಿನ ಹಲವು ಗ್ರಾಮಗಳಿಗೆ ಇಂದಿನವರೆಗೂ ಮೂಲ ಸೌಕರ್ಯಗಳು ಮರೀಚಿಕೆಯಾಗೇ ಉಳಿದಿದೆ.

ಮಹಿಮೆ ಗ್ರಾಮದಲ್ಲಿ 42 ವಿದ್ಯಾರ್ಥಿಗಳು ಹೊನ್ನಾವರದ ವಿವಿಧ ಶಾಲಾ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿದ್ದು ಇವರೆಲ್ಲರೂ ಪ್ರತಿ ದಿನ ಶಾಲೆ,ಕಾಲೇಜಿಗೆ ತೆರಳಲು ಮುಂಜಾನೆ ಐದು ಘಂಟೆಗೆ ಹೊರಡುತ್ತಾರೆ. ಮಹಿಮೆ ಗ್ರಾಮಕ್ಕೆ ರಸ್ತೆ ಹಾಗೂ ಸೇತುವೆ ಇಲ್ಲದ ಕಾರಣ ಪ್ರತಿ ವಿದ್ಯಾರ್ಥಿಗಳು ಎಂಟು ಕಿಲೋಮೀಟರ್ ನೆಡೆದುಕೊಂಡು ಬರಬೇಕು. ಹಳ್ಳದಲ್ಲಿ ಜೀವ ಕೈಯಲ್ಲಿ ಹಿಡಿದು ಸಾಗುವ ವಿದ್ಯಾರ್ಥಿಗಳು -ಶಾಲೆಗೆ ಹೋಗಲಾಗದೇ ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿದ್ದಾರೆ. ಮಹಿಮೆ ಗ್ರಾಮದ ಮಕ್ಕಳು ಮಳೆಗಾಲದಲ್ಲಿ ನೆರೆ ಬರುವುದರಿಂದ ಹಳ್ಳ ದಾಟುವುದು ಕಷ್ಟ ಸಾಧ್ಯ. ಹೀಗಾಗಿ ಹೆಚ್ಚು ನೀರಿದ್ದ ದಿನ ಶಾಲೆ,ಕಾಲೇಜುಗಳಿಗೆ ತೆರಳಲಾಗುವುದಿಲ್ಲಿ.

ಮಳೆಗಾಲದಿಂದ ಆರು ತಿಂಗಳು ಈ ಗ್ರಾಮಕ್ಕೆ ಹೊರ ಊರಿನ ಸಂಪರ್ಕ ಸಹ ಕಡಿತವಾಗುತ್ತದೆ. ಹೀಗಾಗಿ ಆರು ತಿಂಗಳು ಕಾಳು,ಕಡಿ ಸಂಗ್ರಹಿಸಿಕೊಳ್ಳಬೇಕು. ಈ ನಡುವೆ ರೋಗಿಗಳು, ಗರ್ಭಿಣಿಯರು ಇದ್ದರೆ ಅವರನ್ನು ನೆಂಟರ ಮನೆಯಲ್ಲಿ ಇರಿಸಿ ಕಾಪಾಡಬೇಕು. ಎಷ್ಟೋ ಬಾರಿ ಅಂಬುಲೆನ್ಸ್ ಸಹ ಈ ಭಾಗದಲ್ಲಿ ಬರಲಾಗದೇ ಜೋಳಿಗೆಯಲ್ಲಿ ರೋಗಿಗಳನ್ನು ಸಾಗಿಸಿದ ಉದಾಹರಣೆಗಳಿವೆ. ಇನ್ನು ಅಲ್ಪ ನೀರು ಇಳಿದರೆ ಊರಿನ ಜನ ದಡದ ಎರಡುಕಡೆ ಹಗ್ಗ ಹಾಕಿ ಮಕ್ಕಳನ್ನು ದಾಟಿಸುತ್ತಾರೆ. ಇವೆಲ್ಲಾ ಸಂಕಟವನ್ನು ಅನುಭವಿಸಿ ಎಂಟು ಕಿಲೋಮೀಟರ್ ದುರ್ಗಮ ಹಾದಿಯಲ್ಲಿ ಸಾಗಿ ಹೆದ್ದಾರಿಯಲ್ಲಿ ನಿಂತು ಬಸ್ ಏರಿ ಹೋಗುವುದರಲ್ಲಿ ಶಾಲೆ,ಕಾಲೇಜಿನ ಸಮಯ ಪ್ರಾರಂಭವಾಗಿರುತ್ತದೆ. ಇನ್ನು ಶಾಲೆ,ಕಾಲೇಜು ಮುಗಿಸಿ ಮರಳಿ ಮನೆಗೆ ತೆರಳುವುದು ರಾತ್ರಿ ಏಳನ್ನು ದಾಟುತ್ತದೆ. 

ಮನವಿಯನ್ನು ಸಲ್ಲಿಸಿ ಸುಸ್ತಾದ ಗ್ರಾಮಸ್ಥರು:

ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಸ್ತೆ ಹಾಗೂ ಕಿರು ಸೇತುವೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ. ಆದರೇ ಇದಕ್ಕೆ ಕಿವಿ ಕೊಡದ ರಾಜಕೀಯ ಇಚ್ಛಾಶಕ್ತಿಗಳು ಸಮಸ್ಯೆ ಬಗೆಹರಿಸುವ ಕೆಲಸಕ್ಕೆ ಮಾತ್ರ ಕೈ ಹಾಕಿಲ್ಲ. ಹೀಗಾಗಿ ಶಾಲೆಗೆ ಹೋಗುವ ತಮ್ಮ ಮಕ್ಕಳು ಮರಳಿ ಬರುವ ನಿರೀಕ್ಷೆಯನ್ನೇ ಕಳೆದುಕೊಂಡಿರುವ ಇಲ್ಲಿನ ಜನರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಹ ಹಿಂದುಮುಂದು ನೋಡುತಿದ್ದು , ಹೀಗೆಯೇ ಪರಿಸ್ಥಿತಿ ಮುಂದುವರೆದರೆ ಮತ್ತಷ್ಟು ವಿದ್ಯಾರ್ಥಿಗಳು ಶಾಲೆ ಬಿಡುವ ಅನಿವಾರ್ಯತೆ ಎದುರಾಗಲಿದೆ. ಹಿಂದಿನ ಮುಖ್ಯಮಂತ್ರಿ ಜಗದೀಶ್ ಶಟ್ಟರ್ ರಿಂದ ಹಿಡಿದು ಇಂದಿನ ಮುಖ್ಯಮಂತ್ರಿ ಬೊಮ್ಮಾಯಿ ರವರಿಗೆ ಸಹ ತಮ್ಮೂರಿನ ಸಮಸ್ಯೆ ಕುರಿತು ಇಲ್ಲಿನ ಜನ ಮನವಿ ಸಲ್ಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಶಾಸಕ ಸುನೀಲ್ ನಾಯ್ಕ ರವರಿಗೆ ಮನವಿ ಮಾಡಿ ಸುಸ್ತಾದ ಗ್ರಾಮಸ್ಥರು. 

ಮಹಿಮೆ ಶಾಲೆಗೆ ಶಿಕ್ಷಕರ ಕೊರತೆ-ಒಲ್ಲೆ ಎನ್ನುತ್ತಾರೆ ಶಿಕ್ಷಕರು:

ವಿದ್ಯಾರ್ಥಿಗಳ ಸಮಸ್ಯೆ ಕುರಿತು ಕಳೆದ ವರ್ಷಮಾಧ್ಯಮದಲ್ಲಿ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು ಕುದ್ದು ಗ್ರಾಮಕ್ಕೆ ಆಗಮಿಸಿ ಇಲ್ಲಿನ ಸಮಸ್ಯೆ ಯನ್ನು ಆಲಿಸಿದ್ದರು. ಇದಲ್ಲದೇ ವಿಧಾನ ಸಭೆಯಲ್ಲಿ ಕೂಡ ಪ್ರತಿದ್ವನಿಸಿ ವಾಯುವ್ಯ ಸಾರಿಗೆಯಿಂದ ವಿದ್ಯಾರ್ಥಿಗಳಿಗೆ ಶಾಲಾ,ಕಾಲೇಜಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಿದ್ದರು. ಆದರೇ ಈ ಮಳೆಗಾಲದಲ್ಲಿ ಹೆಚ್ಚು ಮಳೆಯಾದ್ದರಿಂದ ಬಸ್ ಸಂಚಾರ ಸಹ ನಿಲ್ಲಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತೆ ಸಮಸ್ಯೆ ಎದುರಾಗಿದೆ. 

ಮಹಿಮೆ ಗ್ರಾಮ ಜಿಲ್ಲೆಯಲ್ಲೇ ಅತೀ ದೊಡ್ಡ ಗ್ರಾಮಪಂಚಾಯ್ತಿಯನ್ನು ಹೊಂದಿದೆ. ಹೀಗಾಗಿ ಈ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯು ಸಹ ಇದೆ.ಆದರೇ ಇರುವ ಮಕ್ಕಳ ಸಂಖ್ಯೆಗೆ ಇಬ್ಬರು ಮಾತ್ರ ಶಿಕ್ಷಕರಿದ್ದಾರೆ. 86 ಕ್ಕೂ ಹೆಚ್ಚು ಜನ ಮಕ್ಕಳಿದ್ದರೂ ಇಲ್ಲಿಗೆ ಹೊಸದಾಗಿ ವರ್ಗಾವಣೆ ಗೊಳ್ಳುವ ಶಿಕ್ಷಕರು ಇಲ್ಲಿಗೆ ಬರಲು ನಿರಾಕರಿಸುತ್ತಾರೆ. ಒಂದುವೇಳೆ ವರ್ಗವಾಗಿ ಬಂದರೂ ರಾಜಕೀಯ ಒತ್ತಡ ಬಳಸಿ ಬೇರೆಡೆ ವರ್ಗ ಮಾಡಿಸಿಕೊಂಡು ಹೋಗುತ್ತಾರೆ. ಹೀಗಾಗಿ ಇಲ್ಲಿ ಶಿಕ್ಷಕರ ಕೊರತೆ ಹಲವು ವರ್ಷಗಳಿಂದ ಹಾಗೆಯೇ ಇದೆ. ಇಬ್ಬರು ಶಿಕ್ಷಕರು ಮಾತ್ರ ಇರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಹ ಕಷ್ಟಸಾಧ್ಯವಾಗಿದೆ.

ತೆರಳಲಾಗದೇ ಶಾಲೆ ಬಿಟ್ಟ ಆರು ಜನ ವಿಧ್ಯಾರ್ಥಿಗಳು!

ಪ್ರತಿ ದಿನ ಹಳ್ಳ ದಾಟಿ ಎಂಟು ಕಿಲೋಮೀಟರ್ ನಡೆಯುವುದು ವಿದ್ಯಾರ್ಥಿಗಳಿಗೆ ಕಷ್ಟಸಾಧ್ಯ. ಇನ್ನು ಈ ಭಾಗದಿಂದ ಬಾಲಕಿಯರೇ ಹೆಚ್ಚು ಶಾಲೆ,ಕಾಲೇಜಿಗೆ ತೆರಳುವುದರಿಂದ ಸಮಸ್ಯೆ ಹೆಚ್ಚಾಗಿದ್ದು ಹಳ್ಳ ದಾಟಲು ಹೆದರಿ ಆರು ಜನ ವಿದ್ಯಾರ್ಥಿಗಳು ಏಳನೇ ತರಗತಿ ನಂತರ ವಿದ್ಯಾಭಾಸವನ್ನು ನಿಲ್ಲಿಸಿ ಮನೆಯಲ್ಲಿದ್ದಾರೆ.

ಹೊನ್ನಾವರ-ಭಟ್ಕಳ ಶಾಸಕ ಸುನಿಲ್ ನಾಯ್ಕ ಹೇಳೋದೇನು?

ಈ ಕ್ಷೇತ್ರವನ್ನು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಪ್ರತಿನಿಧಿಸುತ್ತಾರೆ. ಮಹಿಮೆ ಹಳ್ಳಕ್ಕೆ ₹75,00000 ಅನುದಾನದಲ್ಲಿ ಸೇತುವೆ ನಿರ್ಮಾಣಕ್ಕೆ ಹಣ ಮಂಜೂರಾಗಿದೆ. ಇವುಗಳು ಇದುವರೆಗೂ ಮಹಿಮೆ ಗ್ರಾಮದಲ್ಲಿ ಆದ ಅಭಿವೃದ್ಧಿ ಕಾಮಗಾರಿಗಳು. ಈಗ ಬೇಟಿ ನೀಡಿದ ಸೇತುವೆ ಕೂಡ ಅನುಮೋದನೆ ಹಂತದಲ್ಲಿದೆ. ಮಹಿಮೆ ಗ್ರಾಮಕ್ಕೆ ಹಲವು ಅಭಿವೃದ್ಧಿಗಳನ್ನು ಮಾಡಲಾಗುತ್ತಿದೆ. ಶಾಲೆಗೆ ಹೆಚ್ಚುವರಿ ಕೊಠಡಿ ,ಶಾಲೆ ಕಟ್ಟಡ ಮೇಲ್ಛವಣಿ ದುರಸ್ತಿ, ಮಹಿಷಾಸುರ ಮರ್ದಿನಿ ದೇವಸ್ಥಾನದಿಂದ ಕನ್ಯಾ ಹಳ್ಳೇರ ಮನೆ ವರೆಗೆ ರಸ್ತೆ ಕಾಮಗಾರಿ ಮಂಜೂರಾಗಿದೆ. ಕೋವಿಡ್ ಕಾರಣದಿಂದ ಸಮಯ ತೆಗೆದುಕೊಳ್ಳುತ್ತಿದೆ. ಹಿಂದ ಕಾಂಗ್ರೆಸ್ ಜನಪ್ರತಿನಿಧಿಗಳು ಶಾಸಕರಾಗಿದ್ದಾಗ ಈ ಗ್ರಾಮ ಅಭಿವೃದ್ಧಿಯಲ್ಲಿ ಸೊನ್ನೆಯಾಗಿತ್ತು. ಇನ್ನೇನು ಸೇತುವೆ ಆಗಲಿದೆ ಎಂದು ತಿಳಿದ ಕೆಲ ಕಾಂಗ್ರೆಸ್ ನಾಯಕರು ಸ್ಥಳೀಯರ ದಿಕ್ಕು ತಪ್ಪಿಸುಲ ಮೂಲಕ ರಾಜಕೀಯ ದೊಂಬರಾಟ ನಡೆಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

Be the first to comment

Leave a Reply

Your email address will not be published.


*