ಜಿಲ್ಲಾ ಸುದ್ದಿಗಳು
ದೇವನಹಳ್ಳಿ:
ಸರಕಾರಿ ಹುದ್ದೆಯಲ್ಲಿರುವ ಗುಮಸ್ಥನಿಂದ ಹಿಡಿದು ಮೇಲಾಧಿಕಾರಿಗಳವರೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಾಮಾಣಿಕ ಮತ್ತು ಬದ್ಧತೆಯಿಂದ ಕರ್ತವ್ಯ ಸಲ್ಲಿಸುವಂತೆ ಆಗಬೇಕು ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮಾಹಾಂತೇಶ ಮುರುಗೋಡ ಸಿಬ್ಬಂದಿಗಳಿಗೆ ಕಿವಿ ಮಾತು ಹೇಳಿದರು.
ದೇವನಹಳ್ಳಿ ತಾಲೂಕಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ತೋಟಗಾರಿಕಾ ಇಲಾಖೆ ಕಚೇರಿಯಲ್ಲಿ ವರ್ಗಾವಣೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ತೋಟಗಾರಿಕಾ ಇಲಾಖೆ ಸಿಬ್ಬಂದಿಗಳಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಸರಕಾರಿ ಹುದ್ದೆಯಲ್ಲಿ ವರ್ಗಾವಣೆ ಎಂಬುವುದು ಸಹಜ ಪ್ರಕ್ರಿಯೆಯಾಗಿದೆ. ಇಲಾಖೆಯಲ್ಲಿ ಅನುಷ್ಠಾನಗೊಂಡಂತಹ ಸರಕಾರದ ಯೋಜನೆಗಳನ್ನು ಪ್ರತಿ ಫಲಾನುಭವಿಗಳಿಗೆ ತಲುಪಿಸುವ ಪ್ರಯತ್ನ ಮಾಡಬೇಕಾಗುತ್ತದೆ. ಸಿಬ್ಬಂದಿಗಳಿಂದ ಮೇಲಾಧಿಕಾರಿಗಳು ಸಹ ಸಾಕಷ್ಟು ಕಲಿತುಕೊಳ್ಳುತ್ತಾರೆ. ಎಲ್ಲೇ ಹೋದರೂ ಶಾಂತ ಸ್ವಭಾವವನ್ನು ಇಟ್ಟುಕೊಂಡಿರಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದರೆ ಯಾವುದೇ ಕಷ್ಟ ಕೆಲಸಗಳು ಸರಾಗವಾಗಿ ಆಗುತ್ತದೆ. ನನ್ನ ಅವಧಿಯಲ್ಲಿ ಎಲ್ಲರ ಸಹಕಾರ ಮತ್ತು ಅಭಿಪ್ರಾಯಗಳನ್ನು ಪಡೆದುಕೊಂಡು ಯೋಜನೆಗಳ ಅನುಷ್ಠಾನಕ್ಕೆ ಸೇವೆ ಸಲ್ಲಿಸಲಾಗಿದೆ. ವೈಯಕ್ತಿಕ ಕಾರಣದಿಂದಾಗಿ ವರ್ಗಾವಣೆ ಬಯಸಿದ್ದೇನೆ.
ಇಲ್ಲಿಗೆ ಬಂದು ೨ ವರ್ಷದ ಸೇವಾ ಅನುಭವ ತೃಪ್ತಿ ತಂದಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಜಿಪಂ ಅಡಿಯಲ್ಲಿ ಮೊಟ್ಟ ಮೊದಲು ಕೆಲಸ ಮಾಡಿದ್ದೇನೆ. ಮೊದಲು ಬಂದಾಗ ಹೇಗೆ ಸೇವೆ ಸಲ್ಲಿಸಬೇಕೆಂಬ ಭಾವನೆ ಇತ್ತು. ಬಂದ ನಂತರ ಎಲ್ಲರನ್ನು ಕೇಳಿ ಸ್ಕೀಂಗಳ ಬಗ್ಗೆ ತಿಳಿದು ಯಾವ ರೀತಿ ಅದನ್ನು ಅನುಷ್ಠಾನಗೊಳಿಸಬೇಕು ಮತ್ತು ಯಶಸ್ವಿಗೊಳಿಸಬೇಕೆಂಬ ಪರಿಕಲ್ಪನೆ ಸಿಕ್ಕಿದೆ. ಜಿಪಂ ಸಿಇಒ, ಜಿಲ್ಲಾಧಿಕಾರಿಗಳು ವಿಶಾಲ ಹೃದಯವಂತಿಕೆಯನ್ನು ಹೊಂದಿದ್ದಾರೆ. ನಮ್ಮ ಜಿಲ್ಲೆ ಪ್ರಥಮವಾಗಿರಬೇಕೆಂಬ ಹಂಬಲ ಹೆಚ್ಚು ಇದೆ. ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಾರೆ ಅವರಿಗೆ ನಾನು ಅಭಾರಿಯಾಗಿರುತ್ತೇನೆ. ಸಹಕಾರ ನೀಡಿದ ಪ್ರತಿಯೊಬ್ಬ ಸಿಬ್ಬಂದಿಗೂ ಅಭಿನಂದಿಸುತ್ತೇನೆ ಎಂದರು.
ಈ ವೇಳೆಯಲ್ಲಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಹೊಸಕೋಟೆ ಪ್ರಶಾಂತ, ದೊಡ್ಡಬಳ್ಳಾಪುರ ಶ್ರೀನಿವಾಸ್, ದೇವನಹಳ್ಳಿ ಮಂಜುಳಾ, ನೆಲಮಂಗಲ ಸುಬ್ರಮಣಿ, ಎಡಿಎಚ್(ಎಚ್‌ಕ್ಯೂಎ) ರಾಜೇಂದ್ರ, ಎಡಿಎಚ್(ಎನ್‌ಎಚ್‌ಎಂ) ಕಾಂತರಾಜು, ಎಡಿಎಚ್(ಟಿಎ) ಎಲ್.ಆರ್.ಕೋಕಿಲಾ, ಸುಪರ್ಡೆಂಟ್ ಸುರೇಶ್, ಎಫ್‌ಡಿಎ ವೆಂಕಟೇಶ್ ಹಾಗೂ ಸಿಬ್ಬಂದಿಗಳು ಇದ್ದರು.
Be the first to comment