ರಾಜ್ಯ ಸುದ್ದಿ
ಕುಮಟಾ: ತಾಲೂಕಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ವಿಪರೀತ ಗಾಳಿ ಮಳೆಗೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲ ಭಾಗದ ಮೇಲ್ಛಾವಣಿ ಮುರಿದು ಬಿದ್ದಿದ್ದು, ಶೀಘ್ರದಲ್ಲೇ ದುರಸ್ತಿಗೊಳಿಸುವಂತೆ ಒತ್ತಾಯಿಸಿ, ಎಬಿವಿಪಿ ಕುಮಟಾ ಘಟಕದ ವತಿಯಿಂದ ತಹಸೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.ಬಹಳ ವರ್ಷ ಹಳೆಯದಾದ ಪ್ರಥಮ ದರ್ಜೆ ಕಾಲೇಜಿನ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಇದರಿಂದ ಸಾಕಷ್ಟು ನಷ್ಟ ಉಂಟಾಗಿದೆ. ಅಲ್ಲದೇ, ಕಟ್ಟಡದ ಸಾಕಷ್ಟು ಭಾಗಗಳಿಗೆ ಹಾನಿಯಾಗಿದ್ದು, ಕೋವಿಡ್ -19 ಪ್ರಯುಕ್ತ ಕಾಲೇಜಿಗೆ ವಿದ್ಯಾರ್ಥಿಗಳು ಆಗಮಿಸದ ಕಾರಣ ಕುಸಿತದಿಂದ ಸಂಭವಿಸುವ ಭಾರಿ ಅನಾಹುತ ತಪ್ಪಿದೆ. ಕಳೆದ 3-4 ವರ್ಷಗಳ ಹಿಂದೆಯೇ ಈ ಕಾಲೇಜಿಗೆ ಸಂಬಂಧಿಸಿದಂತೆ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ ಎಂಬುದು ಬೇಸರದ ಸಂಗತಿ.
ಈಗಿರುವ ಹಳೆಯ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೂ ಸುರಕ್ಷಿತವಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಕಟ್ಟಡದ ಸಮಸ್ಯೆ ಕಾಡುತ್ತಿದ್ದು, ಭಯದ ವಾತಾವರಣ ನಿರ್ಮಾಣಗೊಂಡಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಇಲಾಖೆ ಶೀಘ್ರದಲ್ಲೇ ಈಗಿರುವ ಕಟ್ಟಡವನ್ನು ತರ್ತಾಗಿ ದುರಸ್ತಿಗೊಳಿಸಬೇಕು ಹಾಗೂ ಕಾಮಗಾರಿ ಪ್ರಗತಿಯಲ್ಲಿರುವ ನೂತನ ಕಟ್ಟಡವನ್ನು ತ್ವರಿತವಾಗಿ ನಿರ್ಮಿಸಿ, ಕಾಲೇಜಿಗೆ ಹಸ್ತಾಂತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಮನವಿ ಸಲ್ಲಿಕೆಯಲ್ಲಿ ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಗಜೇಂದ್ರ ಹರಿಕಾಂತ, ಪ್ರಮುಖರಾದ ಕಾರ್ತೀಕ ನಾಯ್ಕ, ಸಂದೇಶ ನಾಯ್ಕ, ಕಾರ್ಯಕರ್ತರಾದ ವೀರೇಂದ್ರ ಗುನಗಾ, ಶ್ರೀರಾಮ ಸೇರಿದಂತೆ ಇತರರು ಇದ್ದರು.
Be the first to comment