ಜಿಲ್ಲಾ ಸುದ್ದಿಗಳು
ಹೊನ್ನಾವರ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗ ಎಸ್. ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ, ಅಧ್ಯಕ್ಷರ ಸಮಕ್ಷಮದಲ್ಲಿ ಗ್ರಾಮ ಪಂಚಾಯತ ಕುಂದು ಕೊರತೆ ಹಾಗೂ ಪ್ರಗತಿ ಪರಿಶೀಲನಾ ಸಭೆ ಹೊನ್ನಾವರ ತಾಲೂಕಾ ಪಂಚಾಯತ ಸಬಾಭವನದಲ್ಲಿ ನಡೆಯಿತು.ಸಭೆಯಲ್ಲಿ ಉಪಸ್ಥಿತರಿದ್ದ ಹಳದಿಪುರ ಗ್ರಾಮ ಪಂಚಾಯತ ಅಧ್ಯಕ್ಷರಾದ ಅಜಿತ್ ಮುಕುಂದ ನಾಯ್ಕ ಹಳದಿಪುರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ್ ನಿಂದ ಮಂಜೂರಾದ ಬಾವಿ ಇದ್ದು ಅಲ್ಲಿನ ಪರಿಶಿಷ್ಟ ಜಾತಿಯವರಿಗೆ ನೀರು ನೀಡಲು ಜಾಗದ ಮಾಲಿಕರು ಆಕ್ಷೇಪ ವ್ಯಕ್ತಪಡಿಸಿದರು.. ಈ ಬಗ್ಗೆ ಜಿಲ್ಲಾ ಪಂಚಾಯತಕ್ಕೆ ಪತ್ರದ ಮೂಲಕ ಸಮಸ್ಯೆ ಪರಿಹರಿಸಲು ಕೊರಿಕೊಂಡಿದ್ದೇವೆ. ಆದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದರು.
ಜಿ. ಜಿ. ಶಂಕರರವರು ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಮನೆಗಳಲ್ಲಿ ಜನ ಸಂಖ್ಯೆ ಹೆಚ್ಚಾದಾಗ ಬೇರೆ ಮನೆಗಳನ್ನು ಕಟ್ಟಿ ಕೊಳ್ಳುತ್ತಾರೆ. ನೂತನ ಮನೆಕಟ್ಟಲು ಆ ಜಾಗವನ್ನು ಎನ್ ಎ ಮಾಡಬೇಕಾಗಿದೆ. ಎನ್ ಎ ಮಾಡುವಾಗ ರಸ್ತೆ ಇನ್ನಿತರ ನಿಯಮಾವಳಿ ಪಾಲನೆ ಮಾಡಬೇಕಿದೆ. ಕೆಲವರ ಮನೆ ಕಟ್ಟುವ ಜಾಗಕ್ಕೆ ರಸ್ತೆ ಸಂಪರ್ಕವಿಲ್ಲ ಒಂಬತ್ತು ಇಲಾಖೆಯ ಅನುಮತಿ ಬೇರೆ ಬೇಕು. ಇದು ಬಡವರಿಗೆ ಕಷ್ಟವಾಗಿದೆ. ಸರ್ಕಾರದ ಅನುದಾನದಿಂದ ನಿರ್ಮಿಸಲಾದ ಮನೆಗಳಿಗೆ ಮಾತ್ರ ಮನೆ ನಂಬರ್ ಸಿಗುತ್ತದೆ. ತಮ್ಮ ಜಾಗದಲ್ಲಿ ಸ್ವಂತ ಹಣದಿಂದ ಮನೆ ನಿರ್ಮಿಸಿಕೊಂಡವರಿಗೆ ಈ ವರೆಗೆ ಮನೆ ನಂಬರ್ ಸಿಗುತ್ತಿಲ್ಲ. ಸರ್ಕಾರದ ನಿಯಮಾನುಸಾರ ನಂಬರ್ ಇಲ್ಲದ ಮನೆಗೆ ನೀರು ಹಾಗೂ ವಿದ್ಯುತ್ ಸೌಲಭ್ಯ ನೀಡಲು ಆಗುವುದಿಲ್ಲ. ನೀರು ಇಲ್ಲದೆ ಮನುಷ್ಯನ ಜೀವನ ಕಷ್ಟ ಹಾಗೆ ವಿದ್ಯುತ್ ಇಲ್ಲದೆ ಮಕ್ಕಳು ದೀಪದ ಬೆಳಕಲ್ಲಿ ಓದಬೇಕಾಗುತ್ತದೆ ಎಂದರು. ಜಿಲ್ಲೆಯಲ್ಲಿ ೭೫% ಜನ ಅತಿಕ್ರಮಣ ಜಾಗದಲ್ಲಿ ಮನೆ ನಿರ್ಮಿಸಿದ್ದಾರೆ. ೨೫% ಜಾಗದಲ್ಲಿ ವಾಸಿಸುವ ಜನರನ್ನು ದೊಡ್ಡ ದೊಡ್ಡ ಯೋಜನೆಗಳನ್ನು ತರುವುದರ ಮೂಲಕ ಗುಳೆ ಎಬ್ಬಿಸುತ್ತಿದ್ದಾರೆ ಎಂದರು.
ಕರ್ಕಿ ಪಂಚಾಯತ ವ್ಯಾಪ್ತಿಯಲ್ಲಿ ಗದ್ದೆಗಳಿಗೆ ನೀರು ನುಗ್ಗುತ್ತಿದ್ದು ಚೆಕ್ ಡ್ಯಾಂ, ತಡೆಗೋಡೆ ನಿರ್ಮಾಣ ಮಾಡಿಕೊಡುವಂತೆ ಕೋರಿದರು. ಇನ್ನೂ ಗ್ರಾಮ ಪಂಚಾಯತ ಸಿಬ್ಬಂದಿಗಳನ್ನು ಚೆಕ್ ಪೋಸ್ಟ್ ಗೆ ನಿಯೋಜನೆ ಮಾಡಿದ ಬಗ್ಗೆ ಆಕ್ಷೇಪ ವ್ಯಕ್ತವಾಯಿತು.ಸಭೆಯ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡಿ ಅನಿವಾರ್ಯ ಕಾರಣದಿಂದಾಗಿ ಗ್ರಾಮ ಪಂಚಾಯತ್ ಸಿಬ್ಬಂದಿಗಳನ್ನು ಬೇರೆ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಇನ್ನೂ ಗ್ರಾಮ ಪಂಚಾಯತ ವಾಟರ್ ಮೇನ್ ಗಳನ್ನು ನಿಯೋಜನೆ ಮಾಡದಂತೆ ತಿಳಿಸುತ್ತೇನೆ. ಗ್ರಾಮ ಪಂಚಾಯತಗಳಿಗೆ ಮಂಜೂರಾಗಿರುವ ಶೌಚಾಲಯಗಳು ಇನ್ನು ಪೂರ್ಣಗೊಂಡಿಲ್ಲ ಮತ್ತೆ ಬೇಡಿಕೆ ಇದ್ದಲ್ಲಿ ಶೌಚಾಲಯಗಳನ್ನು ಪೂರೈಕೆ ಮಾಡಲಾಗುವುದು ಅಕ್ಟೋಬರ್ ೨ ರೊಳಗಾಗಿ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಎಲ್ಲಾ ಕಾಮಗಾರಿಯನ್ನು ಪೂರ್ತಿ ಗೊಳಿಸುವಲ್ಲಿ ಗಮನಹರಿಸಬೇಕಿದೆ ಎಂದರು.ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
Be the first to comment