ಪಾಂಡುರಂಗಪುರ ಗ್ರಾಮಕ್ಕೆ ಸಿಗದ ಚರಂಡಿ, ವಿದ್ಯುತ್ ಭಾಗ್ಯ! -ರಸ್ತೆ, ಚರಂಡಿ, ವಿದ್ಯುತ್ ಸೌಕರ್ಯ ವಂಚಿತ ಗ್ರಾಮ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು ದೇವನಹಳ್ಳಿ

ತಾಲೂಕಿನ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ಪಾಂಡುರಂಗಪುರ ಗ್ರಾಮದಲ್ಲಿ ಇವತ್ತಿಗೂ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕವಿಲ್ಲದೆ ಸುಮಾರು ೩೫ ಕುಟುಂಬಗಳು ಜೀವನ ನಡೆಸುತ್ತಿರುವುದು ಕಂಡುಬಂದಿರುತ್ತದೆ.

ಕಳೆದ ಬಾರಿ ಇದೇ ಗ್ರಾಮಕ್ಕೆ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಗ್ರಾಪಂಗೆ ಮನವಿ ಮಾಡಲಾಗಿತ್ತು. ಸಮುದಾಯ ಶೌಚಾಲಯವನ್ನು ನಿರ್ಮಿಸಿದ ಫಲವಾಗಿ ಪಾಂಡುರಂಗಪುರ ಗ್ರಾಮದ ೧೦ಕ್ಕೂ ಹೆಚ್ಚು ಶೌಚಾಲಯ ರಹಿತ ಮನೆಗಳವರು ಸಮುದಾಯ ಶೌಚಾಲಯವನ್ನು ಬಳಸಿಕೊಳ್ಳಲು ಅನುಕೂಲವಾಯಿತು. ಈ ಹಿಂದೆ ಇದೇ ಗ್ರಾಮಕ್ಕೆ ಶಾಸಕ ಎಲ್.ಎನ್.ನಾರಾಯಣಸ್ವಾಮಿ ನೇತೃತ್ವದಲ್ಲಿ ಹಕ್ಕುಪತ್ರ ವಿತರಣೆಯೂ ಸಹ ಆಗಿತ್ತು. ಇದೀಗ ಈ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರಸ್ತೆ, ಚರಂಡಿ, ವಿದ್ಯುತ್ ಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

CHETAN KENDULI

ರಾಷ್ಟ್ರೀಯ ಹೆದ್ದಾರಿ ೨೦೭ರ ಲಕ್ಷ್ಮೀಪುರ ಮತ್ತು ಸೋಲೂರು ಗೇಟ್ ಮಧ್ಯೆ ಇರುವ ಈ ಚಿಕ್ಕ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ ವರ್ಷ ಕಳೆದರೂ ಮನೆಗಳಿಗೆ ಬೆಳಕು ಭಾಗ್ಯವೇ ಇಲ್ಲದಂತಾಗಿದೆ. ಗ್ರಾಮಕ್ಕೆ ಹೋಗುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ವರ್ಷದ ಹಿಂದೆ ಬೆಸ್ಕಾಂನವರು ಈ ಗ್ರಾಮಕ್ಕೆ ಬಂದು ವಿದ್ಯುತ್ ಮೀಟರ್ ಅಳವಡಿಸಿ ಹೋಗಿದ್ದಾರೆ. ಆದರೆ, ವಿದ್ಯುತ್ ಸಂಪರ್ಕ ಮಾತ್ರ ನೀಡಿರುವುದಿಲ್ಲ. ಮೀಟರ್ ಅಳವಡಿಸಲು ೧೫೦೦ರೂ.ಗಳನ್ನು ಸಹ ಪಡೆದುಕೊಂಡಿರುತ್ತಾರೆ. ಉಳಿದಂತೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾದರೆ ಪ್ರತ್ಯೇಕವಾಗಿ ಹಣ ಪಾವತಿಸಬೇಕೆಂದು ಹೇಳಿದ್ದಾರೆ ಎಂದು ಗ್ರಾಮದ ಕುಟುಂಬಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

*ರಸ್ತೆ ದುರಸ್ಥಿಗೆ ಆಗ್ರಹ*: ಗ್ರಾಮಕ್ಕೆ ಹೋಗುವ ರಸ್ತೆಯು ಹದಗೆಟ್ಟಿದ್ದು, ರಸ್ತೆಯಲ್ಲಿ ಯಾವುದೇ ವಾಹನಗಳು ಹೋಗಲು ಕಷ್ಟವಾಗುತ್ತಿದೆ. ಮಳೆ ಬಂತೆಂದರೆ, ಈ ರಸ್ತೆಯಲ್ಲಿ ಓಡಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದ ರಸ್ತೆಗೆ ಡಾಂಬರೀಕರಣ ಭಾಗ್ಯ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

*ಚರಂಡಿ ಇಲ್ಲದೆ ಅಸ್ವಚ್ಛತೆ*: ಗ್ರಾಮದಲ್ಲಿ ೩೫ ಮನೆಗಳಿದ್ದು, ಮನೆಗಳಿಂದ ಹೊರಬರುವ ಕೊಳಚೆ ನೀರು ಹಾದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ, ನೀರು ಒಂದು ಕಡೆ ನಿಲ್ಲುವಂತೆ ಆಗುತ್ತಿದೆ. ಮನೆಗಳ ಮುಂದೆ ಚರಂಡಿ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಎಲ್ಲೆಂದರಲ್ಲಿ ಕಸ, ಅಸ್ವಚ್ಛತೆ ನಿರ್ಮಾಣವಾಗಿದ್ದು, ಗ್ರಾಪಂನವರು ಇತ್ತ ಗಮನಹರಿಸಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

– ಅನಿತಾ | ಗೃಹಿಣಿ, ಪಾಂಡುರಂಗಪುರ
ಬೆಸ್ಕಾಂನಿಂದ ಮನೆಗಳಿಗೆ ವಿದ್ಯುತ್ ಮೀಟರ್ ಅಳವಡಿಸಿ ಹೋಗಿ ಒಂದು ವರ್ಷ ಕಳೆದಿದೆ. ಇದುವರೆಗೂ ವಿದ್ಯುತ್ ಸಂಪರ್ಕ ನೀಡಿಲ್ಲ. ಚರಂಡಿಗಳಿಲ್ಲದೆ ರಸ್ತೆಗೆ ನೀರು ಹರಿಯುತ್ತದೆ. ಮಳೆ ಬಂದರೆ ಮನೆಗಳ ಇಕ್ಕೆಲಗಳಲ್ಲಿ ನೀರು ನಿಲ್ಲುತ್ತದೆ. ಗ್ರಾಮಕ್ಕೆ ಬರುವ ರಸ್ತೆ ದುರಸ್ಥಿ ಕಂಡಿಲ್ಲ. ಕೂಡಲೇ ಅಧಿಕಾರಿಗಳು ಸವಲತ್ತು ಕಲ್ಪಿಸಿಕೊಡಬೇಕು.

– ಮಂಗಳ ನಾರಾಯಣಸ್ವಾಮಿ | ಅಧ್ಯಕ್ಷರು, ವಿಶ್ವನಾಥಪುರ ಗ್ರಾಪಂ
ಚರಂಡಿ ಕಾಮಗಾರಿಗಾಗಿ ಕ್ರಿಯಾಯೋಜನೆ ರೂಪಿಸಲಾಗಿತ್ತು. ಇದೀಗ ೧೫ನೇ ಹಣಕಾಸಿನ ಯೋಜನೆಯಡಿಯಲ್ಲಿ ೨ಲಕ್ಷ ರೂ. ಬಿಡುಗಡೆಯಾಗಿದೆ. ಆದಷ್ಟು ಶೀಘ್ರವಾಗಿ ಚರಂಡಿ ಕಾಮಗಾರಿ ಕೈಗೆತ್ತಿಕೊಂಡು ಚರಂಡಿ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ. ಕಾಂಕ್ರೀಟ್ ರಸ್ತೆಗೆ ಶಾಸಕರ ಅನುದಾನದಲ್ಲಿ ೧೦ಲಕ್ಷ ನೀಡುವ ಭರವಸೆ ನೀಡಿದ್ದರು. ಅದು ಬಂದ ನಂತರ ರಸ್ತೆ ಕಾಮಗಾರಿ ನಡೆಸಲಾಗುತ್ತದೆ.

Be the first to comment

Leave a Reply

Your email address will not be published.


*