ರಾಜ್ಯ ಸುದ್ದಿಗಳು
ದೇವನಹಳ್ಳಿ
ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಶೈಕ್ಷಣಿಕ ಪರಿಕರಗಳನ್ನು ವಿತರಿಸುವುದರ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡುತ್ತಿರುವ ದೇವನಹಳ್ಳಿ ಜೈಭಾರತ್ ಡಿಸಿಐಸಿ ಮತ್ತು ಸುಮಂಗಲಿ ಸೇವಾಶ್ರಮ ಸೇವೆ ಶ್ಲಾಘನೀಯವಾದದ್ದು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎಚ್.ಎಂ.ರವಿಕುಮರ್ ತಿಳಿಸಿದರು. ದೇವನಹಳ್ಳಿ ತಾಲೂಕಿನ ಶ್ಯಾನಪ್ಪನಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ದೇವನಹಳ್ಳಿ ಜೈಭಾರತ್ ಡಿಸಿಐಸಿ ಮತ್ತು ಸುಮಂಗಲಿ ಸೇವಾಶ್ರಮ ವತಿಯಿಂದ ಉಚಿತ ನೋಟ್ ಪುಸ್ತಕ ಮತ್ತು ಪೆನ್ಸಿಲ್ ವಿತರಣಾ ಕಾರ್ಯಕ್ರಮ ಮತ್ತು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪ್ರತಿ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಲು ದೇಶಕ್ಕಾಗಿ ಮಡಿದ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಪಾಲಿಸಬೇಕು. ಅವರ ಜೀವನ ಚರಿತ್ರೆಗಳನ್ನು ತಿಳಿದುಕೊಳ್ಳಬೇಕು. ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಮಕ್ಕಳು ಸಮಾಜದ ಕಣ್ಣುಗಳಿದ್ದಂತೆ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗುತ್ತಾರೆ. ಮಕ್ಕಳನ್ನು ಸರಿ-ತಪ್ಪುಗಳ ಅರಿವು ಮೂಡಿಸುವ ಕಾರ್ಯ ಶಿಕ್ಷಕರು ಶಾಲೆಯಲ್ಲಿ ಮಾಡುತ್ತಾರೆ. ಸಮಾಜದಲ್ಲಿ ಬದುಕು ಹೇಗೆ ನಡೆಸಬೇಕೆಂಬುವುದರ ಪರಿಕಲ್ಪನೆಯನ್ನು ಶಾಲಾ ಹಂತದಲ್ಲಿಯೇ ಶಿಕ್ಷಕರು ಮಾಡುತ್ತಾರೆ. ಮಕ್ಕಳು ಸಂಘ-ಸಂಸ್ಥೆಗಳಿಂದ ನೀಡಿರುವ ಶೈಕ್ಷಣಿಕ ಪರಿಕರಗಳನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು. ಶಿಕ್ಷಕರು ಹೇಳಿಕೊಡುವುದನ್ನು ಗಮನದಲ್ಲಿಟ್ಟುಕೊಂಡು ಮುಂದೆ ಸಾಗಬೇಕು. ಮಕ್ಕಳು ತಮ್ಮ ಗುರಿಯನ್ನು ತಲುಪಲು ಪೋಷಕರು ಅವರಿಗೆ ಬೆನ್ನೆಲುಬಾಗಿ ಪ್ರೋತ್ಸಾಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ ವ್ಯವಸ್ಥಾಪಕ ಬಿಜ್ಜವಾರ ಸುಬ್ರಮಣಿ ನೇತೃತ್ವದಲ್ಲಿ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಣೆ ಮಾಡಲಾಯಿತು. ಈ ವೇಳೆಯಲ್ಲಿ ದೇವನಹಳ್ಳಿ ತಾಲೂಕು ಕಸಪ ಅಧ್ಯಕ್ಷ ಆರ್.ಕೆ.ನಂಜೇಗೌಡ, ಕೊಯಿರ ಗ್ರಾಪಂ ಅಧ್ಯಕ್ಷ ಆನಂದ್‌ಗೌಡ, ಮುಖಂಡರಾದ ಕೆಂಪಣ್ಣ, ನೆರಗನಹಳ್ಳಿ ಶ್ರೀನಿವಾಸ್, ಶಾಲಾ ಮುಖ್ಯ ಶಿಕ್ಷಕ ರವೀಂದ್ರ, ಶಾಲಾ ಶಿಕ್ಷಕರು, ಮಕ್ಕಳು ಇದ್ದರು.
Be the first to comment