ರಾಜ್ಯ ಸುದ್ದಿಗಳು
ದೇವನಹಳ್ಳಿ
ಅಮೂಲ್ಯವಾದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ವರ್ಗ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದಾರೆ. ಕಳ್ಳ ಸಾಗಾಣಿಕೆದಾರರ, ಮರಗಳ್ಳರ, ವೀರಪ್ಪನ್ ನಂತಹ ದಂತಚೋರರ ಜತೆ ಕೆಚ್ಚೆದೆಯಿಂದ ಹೋರಾಡಿ ನೈಸರ್ಗಿಕ ಸಂಪತ್ತನ್ನು ಉಳಿಸಲು ತಮ್ಮ ಜೀವನವನ್ನೇ ಇವರು ತ್ಯಾಗ ಮಾಡಿದ್ದಾರೆ ಅವರೆಲ್ಲರ ಜೀವನ ಇಲಾಖೆಯ ಸಿಬ್ಬಂದಿಗೆ ಆದರ್ಶವಾಗಬೇಕು. ನಾವೆಲ್ಲರೂ ಅರಣ್ಯ ಸಿಬ್ಬಂದಿಯ ರಕ್ಷಣೆಗಾಗಿ ನಿಲ್ಲಬೇಕಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್ ಹೇಳಿದರು.
ತಾಲೂಕಿನ ಸಾವಕನಹಳ್ಳಿ ಗೇಟ್ ನಲ್ಲಿರುವ ಅರಣ್ಯ ಇಲಾಖೆಯ ಆವರಣದಲ್ಲಿ ಶನಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಭಾಗೀಯ ಪ್ರಾದೇಶಿಕ ಕಚೇರಿಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಾದ ಅರಣ್ಯ ಸಿಬ್ಬಂದಿಗೆ ನಮನ ಸಲ್ಲಿಸಿ ಅವರು ಮಾತನಾಡಿದರು. ಅರಣ್ಯ ಇಲಾಖೆಯ ಸಿಬ್ಬಂದಿ ಸಮಯಚಿತ್ತ ಹಾಗೂ ಅನ್ಯೋನ್ಯತೆಯಿಂದ ಕೆಲಸ ಮಾಡುವ ಮೂಲಕ ದೇಶದ ಅನರ್ಘ್ಯ ಸಂಪತ್ತಾದ ಅರಣ್ಯ ಸಂರಕ್ಷಣೆಯನ್ನು ಮಾಡಬೇಕು. ಸೇವೆಯಲ್ಲಿದ್ದಾಗ ಅಗತ್ಯ ವಸ್ತು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಕಾಡಿನಲ್ಲಿ ಪ್ರಯಾಣ ಮಾಡಬೇಕು. ಕಾಡು ಪ್ರಾಣಿಗಳ ದಾಳಿಗಳಿಂದ ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು. ತಮ್ಮ ಜೀವದ ಜೊತೆಗೆ ಉಳಿದ ಅಧಿಕಾರಿ ಮತ್ತು ಸಿಬ್ಬಂದಿಯ ಜೀವ ರಕ್ಷಣೆ ಮಾಡುವ ಮೂಲಕ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ತೊಂದರೆಗಳನ್ನು ಅರಿತು ಸಮಯ ಪ್ರಜ್ಞೆಯಿಂದ ಕೆಲಸ ಮಾಡಿದಾಗ ಮಾತ್ರ ಮುಂದಾಗುವ ಅನಾಹುತಗಳನ್ನು ತಡೆಯಬಹುದು ಎಂದು ಸಿಬ್ಬಂದಿಗೆ ತಿಳಿ ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ಮಾತನಾಡಿ, ಕರ್ತವ್ಯದಲ್ಲಿದ್ದಾಗ ದುಷ್ಕರ್ಮಿಗಳ ಕೃತ್ಯಕ್ಕೆ ಜೀವ ಕಳೆದುಕೊಂಡ ಸೈನಿಕರು ಮತ್ತು ಪೊಲೀಸರನ್ನು ನೆನಪಿಸಿಕೊಳ್ಳುವಂತೆಯೇ, ಅಮೂಲ್ಯ ಅರಣ್ಯ ಸಂಪತ್ತನ್ನು ರಕ್ಷಿಸುವ ಕಾಯಕದಲ್ಲಿ ನಿರತರಾಗಿದ್ದಾಗ ಹುತಾತ್ಮರಾದ ಅರಣ್ಯ ಇಲಾಖೆ ಸಿಬ್ಬಂದಿಯ ಬಲಿದಾನವನ್ನು ದೇಶ ಸ್ಮರಿಸಿಕೊಳ್ಳುತ್ತಿದೆ. ಮನುಕುಲದ ಅಭಿವೃದ್ಧಿಗೆ ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಯೂ ಅತಿಮುಖ್ಯ. ಅಮೂಲ್ಯ ವೃಕ್ಷ ಸಂಪತ್ತಿಗೆ ಕೊಡಲಿ ಇಡುವ, ಕಾಡುಪ್ರಾಣಿಗಳಿಗೆ ಗುಂಡಿಕ್ಕುವ ದುಷ್ಕರ್ಮಿಗಳನ್ನು ತಡೆಯಲು ಅರಣ್ಯ ಇಲಾಖೆ ಸಿಬ್ಬಂದಿ ಪಡುವ ಕಷ್ಟ ಸಾಮಾನ್ಯವಾದದ್ದಲ್ಲ. ದುರ್ಗಮ ಅರಣ್ಯದಲ್ಲಿ ಕಾಡು ಪ್ರಾಣಿಗಳ ಮತ್ತು ಬೇಟೆಗಾರರ ದಾಳಿಯ ಭಯದ ನಡುವೆ ಪರಿಶೀಲನೆ ನಡೆಸುತ್ತಾ ಕೆಲಸ ಮಾಡುವುದು ಬಲು ಅಪಾಯಕಾರಿ. ಎಷ್ಟೋ ಸಂದರ್ಭಗಳಲ್ಲಿ ಕಾಡುಗಳ್ಳರ ದಾಳಿಗೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದೆಷ್ಟೋ ಅರಣ್ಯ ರಕ್ಷಕರ ಕುಟುಂಬಗಳ ಕಣ್ಣೀರು ಓ ಮಣ್ಣಿನಲ್ಲಿ ಇಂಗಿ ಹೋಗಿವೆ ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಲ್.ಆರ್. ಸುಬ್ಬರಾವ್ ಮಾತನಾಡಿ, ಅರಣ್ಯ ಹುತಾತ್ಮರ ದಿನಾಚರಣೆಯ ಹಿಂದೆ ಇರುವ ಎರಡು ಘಟನೆಗಳು ಇಂದಿಗೂ ಎಲ್ಲರ ಮನಕಲಕುತ್ತವೆ. ಕಾಡುಗಳ್ಳ ವೀರಪ್ಪನ್ ನನ್ನು ಹಿಡಿಯಲು ಹೋಗಿದ್ದ ಪಿ.ಶ್ರೀನಿವಾಸ್ ಅವರು, ತುಂಬಾ ವಿಶ್ವಾಸದಲ್ಲಿದ್ದರು. ಕಾರ್ಯಾಚರಣೆಯಲ್ಲಿ ಭಾಗವಹಿಸಲೆಂದೆ ಮಲೆಮಹದೇಶ್ವರ ಬೆಟ್ಟಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಅಲ್ಲಿನ ಜನರೊಂದಿಗೆ ಬೆರೆಯುತ್ತಿದ್ದ ಅವರು ಎಲ್ಲರ ಸ್ನೇಹ, ಗೌರವ ಸಂಪಾದಿಸಿದ್ದರು. ಆದರೆ, ತಾನು ಶರಣಾಗುವುದಾಗಿ ಶ್ರೀನಿವಾಸ್ ಅವರನ್ನು ನಂಬಿಸಿದ್ದ ವೀರಪ್ಪನ್, ಅವರನ್ನು ತನ್ನ ಬಳಿಗೆ ಕರೆಸಿಕೊಂಡು ಅವರ ತಲೆಯನ್ನು ಕತ್ತರಿಸಿದ್ದ. ಅವರ ತಲೆ ಸಿಕ್ಕಿದ್ದು, ಮೂರು ವರ್ಷಗಳ ಬಳಿಕ ಈ ಭೀಕರ ಘಟನೆ ಇಂದಿಗೂ ಹಸಿಯಾಗಿದೆ ಎಂದರು.
ಹುತಾತ್ಮ ಶ್ರೀನಿವಾಸ್ ಅವರಿಗೆ ಕೀರ್ತಿಚಕ್ರ ಬಿರುದು ನೀಡಿ ಗೌರವಿಸಿದರು. ಹುತಾತ್ಮರ ನೆನಪಿಗಾಗಿ ಸಸಿಗಳನ್ನು ನೆಟ್ಟು ನೀರೆರೆದರು. ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ, ಗೌರವ ವಂದನೆ ಸಲ್ಲಿಸಿದರು. ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ಡಿ.ವೈಎಸ್ಪಿ ಜಯರಾಂ, ಸರ್ಕಲ್ ಇನ್ ಸ್ಪೆಕ್ಟರ್ ಮರಳುಸಿದ್ದಪ್ಪ, ವಲಯ ಅರಣ್ಯ ಸಂರಕ್ಷಾಧಿಕಾರಿಗಳಾದ ಕೆ.ಪಿ.ಧನಲಕ್ಷ್ಮೀ, ವಿ.ಮುನಿರಾಜು, ಪುಷ್ಪಲತಾ, ಲಷ್ಕರ್ ನಾಯರ್, ಹಾಜರಿದ್ದರು.
Be the first to comment