ಜಿಲ್ಲಾ ಸುದ್ದಿಗಳು
ಹೊನ್ನಾವರ
ಗುಣವಂತೆಯ ಕೃಷ್ಣ ಭಂಡಾರಿಯವರು ಯಕ್ಷಗಾನ ಕಲಾವಿದರಾಗಿ,ಭಾಗವತರಾಗಿ ಕಲಾಸಕ್ತರ ಪಾಲಿನ ಗುರುವಾಗಿ ಸಂಪೂರ್ಣ ಯಕ್ಷ ರಂಗಕ್ಕೆ ತಮ್ಮನ್ನು ತಾವು ಮುಡಿಪಾಗಿಟ್ಟವರು. ಧೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳಲಾಗದೆ ಶನಿವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
1961 ರ ಸುಬ್ಬಿ ಮತ್ತು ಮಂಜು ಭಂಡಾರಿಯವರ ಪಂಚಮ ಪುತ್ರನಾಗಿ ಜನಿಸಿದ್ದರು. ಇವರ ಅಜ್ಜ ವೆಂಕಪ್ಪ ಭಂಡಾರಿಯವರು ಯಕ್ಷಗಾನ ಕಲಾವಿದರಾಗಿದ್ದು ತೆಂಕು ಹಾಗೂ ಬಡಗು ತಿಟ್ಟಿನಲ್ಲಿ ಸಾಕಷ್ಟು ಹೆಸರು ಮಾಡಿದ್ದರು ಅದಲ್ಲದೆ ಇವರ ತಂದೆ ಮಂಜು ಭಂಡಾರಿಯವರು ಖ್ಯಾತ ಮದ್ದಲೆಗಾರರಾಗಿದ್ದರು. ಆರ್ಥಿಕವಾಗಿ ಬಡವರಿದ್ದೂ ಕಲೆಯಲ್ಲಿ ಶ್ರೀಮಂತರಾಗಿದ್ದ ಇವರು ಅಣ್ಣ ವೆಂಕಪ್ಪ ಭಂಡಾರಿ ಸಹಾಯದಿಂದ ‘ಕಡಲತೀರದ ಭಾರ್ಗವ’ ಎಂದೇ ಹೆಸರಾದ ಶಿವರಾಮಕಾರಂತರ ಗರಡಿಯಲ್ಲಿ ಪಳಗುವ ಅದೃಷ್ಟವನ್ನು ಪಡೆದುಕೊಂಡಿದ್ದರು. ಶಾಲೆಯಲ್ಲಿ ಓದುವಾಗ ಐದನೇ ತರಗತಿಯಲ್ಲಿಯೇ ‘ಗುಣವತಿ ಪರಿಣಯ’ ಎನ್ನುವ ಪ್ರಸಂಗವನ್ನು ಯಶಸ್ವಿಯಾಗಿ ಪ್ರದರ್ಶಿಸಿ ತಾನೊಬ್ಬ ಜನ್ಮಜಾತ ಪ್ರತಿಭೆ ಎನ್ನುವುದನ್ನು ನಿರೂಪಿಸಿದ್ದರು.
ಯಕ್ಷ ರಂಗದಲ್ಲಿಯೇ ಮುಂದೆ ಹೆಸರು ಮಾಡಿದ ಅವರು ಪೌರಾಣಿಕ ಪ್ರಸಂಗವನ್ನು ರಂಗದಲ್ಲಿ ಕಟ್ಟಿಕೊಡುವಲ್ಲಿ ಇಂದಿಗೂ ಗಟ್ಟಿಯಾದ ನೆಲೆಯನ್ನು ಹೊಂದಿರುವ ಇಡಗುಂಜಿ ಮೇಳದಲ್ಲಿ ಯಕ್ಷೋಕದ ಪಯಣ ಆರಂಭಿಸಿ ಉತ್ತರ ಪ್ರದೇಶ,ತಮಿಳುನಾಡು, ಮುಂಬೈ, ರಾಷ್ಟ್ರದ ಉದ್ದಗಲಕ್ಕೂ ಸಂಚರಿಸಿ ತಮ್ಮ ಕಂಚಿನ ಕಂಠದ ಭಾಗವತಿಕೆಯಿಂದ ಜನರನ್ನು ಕುಣಿಸಿದ್ದಾರೆ.ಬದುಕಿನ ಇಳಿಸಂಜೆಯಲ್ಲಿ ತೀವೃ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಂಡರೂ ಫಲಕಾರಿಯಾಗದೆ , ಮನೆಗೆ ಮರಳಿ ಆರೋಗ್ಯವನ್ನು ಗಳಿಸುವ ಪ್ರಯತ್ನದಲ್ಲಿದ್ದಾಗ ಕಲಾವಿದರು, ಕಲಾಭಿಮಾನಿಗಳು ಬೇಟಿ ನೀಡಿ ಧೈರ್ಯ ತುಂಬಿದ್ದರು. ಹೀಗೆ ಬೇಟಿ ನೀಡಿದ್ದವರಲ್ಲಿ ಮಾಜಿ ಶಾಸಕರಾದ ಮಂಕಾಳವೈದ್ಯರೂ ಒಬ್ಬರಾಗಿದ್ದಾರೆ. ಆಗ ಕೃಷ್ಣ ಭಂಡಾರಿಯವರ ನೆರವಿಗೆ ಹಣವನ್ನೂ ನೀಡಲು ಮುಂದಾಗಿದ್ದರು ಅದನ್ನು ತೆಗೆದುಕೊಳ್ಳಲು ಸ್ವಾಭಿಮಾನಿ ಕೃಷ್ಣ ಭಂಡಾರಿಯವರು ಹಿಂದೇಟು ಹಾಕಿದ್ದರು. ಆಗ ನನ್ನಿಂದ ಏನು ಸಹಾಯವಾಗಬೇಕು ಎಂದು ಕೇಳಿದಾಗ ಕುಳಿತುಕೊಳ್ಳಲು ಸಾಧ್ಯವಾಗದ ಅವರಿಗೆ ರೇಲಿಂಗ್ ಬೆಡ್(ಪೋಲಾರ್ ಕಾಟ್) ಬೇಕಿತ್ತು ಎಂದಾಗ ತಕ್ಷಣ ಅವರ ಕಷ್ಟಕ್ಕೆ ಸ್ಪಂದಿಸಿದ ಅವರು ಒಂದೇ ವಾರದಲ್ಲಿ ಬೆಡ್ ತರಿಸಿಕೊಟ್ಟಿದ್ದರು.
ಮಡದಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುವ ಅವರಿಗೆ ಶಿಷ್ಯವೃಂದವು ತೀವೃ ಸಂತಾಪ ಸೂಚಿಸಿದ್ದಾರೆ. ಭಟ್ಕಳ ಕ್ಷೇತ್ರದ ಶಾಸಕ ಸುನೀಲ್ ನಾಯ್ಕರವರು , ಮಾಜಿ ಶಾಸಕ ಮಂಕಾಳವೈದ್ಯ, ತಾಲೂಕಾ ಪಂಚಾಯತ್ ಮಾಜಿ ಸದಸ್ಯ ಗಣಪಯ್ಯ ಕನ್ಯಾ ಗೌಡ,ಕೆಳಗಿನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮಪ್ಪ ಜಿ ಗೌಡ, ಇಡಗುಂಜಿ ಮೇಳದ ಸಂಚಾಲಕರಾದ ಶಿವಾನಂದ ಹೆಗಡೆ ಕೆರೆಮನೆ, ಒಕ್ಕಲಿಗರ ಯಕ್ಷಗಾನ ಬಳಗದ ಅಧ್ಯಕ್ಷ ರಾಮ್ ಗೌಡ ಸೇರಿದಂತೆ ಹಲವರು ತೀವ್ರ ಸಂತಾಪ ಸೂಚಿಸಿದ್ದಾರೆ.
Be the first to comment