ರಾಜ್ಯ ಸುದ್ದಿಗಳು
ದೇವನಹಳ್ಳಿ:
ಕೋವಿಡ್-೧೯ ಹಿನ್ನಲೆಯಲ್ಲಿ ಕೆಲ ವಸತಿ ಶಾಲೆಗಳು ಕೊರೊನಾ ಪರೀಕ್ಷಾ ಕೇಂದ್ರ ಮತ್ತು ಕೋವಿಡ್ ಕೇಂದ್ರವನ್ನಾಗಿ ಮಾಡಲಾಗಿತ್ತು. ಇದೀಗ ೨೦೨೧-೨೨ನೇ ಶೈಕ್ಷಣಿಕ ಸಾಲಿನಲ್ಲಿ ಕೋವಿಡ್ ಕೇಂದ್ರಗಳಾಗಿದ್ದ ವಸತಿ ಶಾಲೆಗಳು ಸುರಕ್ಷತಾ ಕೇಂದ್ರಗಳಾಗಿ ಮಾರ್ಪಾಡಾಗಿವೆ.
೨೦೨೦-೨೧ನೇ ಸಾಲಿನಲ್ಲಿ ಕೋವಿಡ್-೧೯ರ ಕಾರಣದಿಂದಾಗಿ ಭೌತಿಕವಾಗಿ ಮುಖಾಮುಖಿಯಾಗಿ ಶಾಲೆಗಳನ್ನು ನಿರಂತರವಾಗಿ ನಡೆಸಲು ಸಾಧ್ಯವಾಗಿರಲಿಲ್ಲ. ಸೋಂಕು ಹರಡುವುದನ್ನು ಕಡಿಮೆ ಮಾಡುವ ಸಲುವಾಗಿ ವಸತಿ ಶಾಲೆಗಳನ್ನು ಬಳಸಿಕೊಳ್ಳಲಾಗಿತ್ತು. ಇದೀಗ ಸೋಂಕು ಕಡಿಮೆಯಾಗಿ ಶಾಲೆ ಪ್ರಾರಂಭಿಸುವ ಸಲುವಾಗಿ ಸರಕಾರ ೯ ಮತ್ತು ೧೦ನೇ ತರಗತಿಗಳು ಶಾಲೆಯಲ್ಲಿ ಪ್ರಾರಂಭಿಸಲು ಅನುಮತಿ ನೀಡಿರುವ ಹಿನ್ನಲೆಯಲ್ಲಿ ಕೋವಿಡ್ ಸೆಂಟರ್‌ಗಳಾಗಿದ್ದ ಶಾಲೆಗಳನ್ನು ಸುರಕ್ಷತಾ ಕ್ರಮಗಳನ್ನು ಪಾಲಿಸಿಕೊಂಡು ಸುರಕ್ಷತಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯಕ್ತ ಕಚೇರಿಯಿಂದ ಪ್ರೌಢ ಶಾಲೆ ಪ್ರಾರಂಭಕ್ಕೆ ರಾಜ್ಯದಲ್ಲಿನ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿನ ೯ ಮತ್ತು ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಬೋಧನಾ ತರಗತಿಗಳನ್ನು ನಡೆಸಲು ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಮಾಡಲಾಗುತ್ತಿದೆ. ಈಗಾಗಲೇ ವಸತಿ ಶಾಲೆಗಳ ವಿದ್ಯಾರ್ಥಿಗಳು ಕೋವಿಡ್ ನೆಗಟಿವ್ ವರದಿ ಮತ್ತು ಪೋಷಕರ ಒಪ್ಪಿಗೆ ಪತ್ರವನ್ನು ಪಡೆದುಕೊಂಡು ವಸತಿ ಶಾಲೆಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದಾರೆ.
ಪ್ರಸ್ತುತ ವರ್ಷದಲ್ಲಿ ಶಾಲಾರಂಭಕ್ಕೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಇಲಾಖೆಯ ಕೋವಿಡ್-೧೯ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಆ.೨೩ರಿಂದ ರಾಜ್ಯದಾದ್ಯಂತ ಸೋಂಕಿನ ಪ್ರಮಾಣ ಶೇ೨ರಷ್ಟು ಕಡಿಮೆ ಇರುವ ಜಿಲ್ಲೆಗಳಲ್ಲಿ ೯ನೇ ಮತ್ತು ೧೦ನೇ ತರಗತಿಗಳನ್ನು ತಂಡೋಪತಂಡವಾಗಿ ಪ್ರಾರಂಭಿಸಿ ದಿನದ ಅರ್ಧ ದಿನ ಎಲ್ಲಾ ಸರಕಾರಿ ಅನುದಾನಿತ, ಅನುದಾನ ರಹಿತ ಶಾಲೆಗಳನ್ನು ತೆರೆಯಲು ಮುಂದಾಗಿದ್ದು, ೧ ರಿಂದ ೮ನೇ ತರಗತಿ ಮಕ್ಕಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ.
ದೇವನಹಳ್ಳಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು, ಈ ಹಿಂದೆ ಕೋವಿಡ್ ಸೆಂಟರ್ ಆಗಿದ್ದ ಕುಂದಾಣ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಮಕ್ಕಳು ಶೇ.೯೦ರಷ್ಟು ಹಾಜರಾಗಿದ್ದು, ಸರಕಾರದ ಎಸ್‌ಒಪಿ ಸುತ್ತೋಲೆಯಂತೆ ಶಾಲೆಗಳು ನಡೆಯುತ್ತಿದೆ. ಶಾಲೆಯನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸರ್ ಮಾಡಿ, ಮಕ್ಕಳಿಗೆ ವಿಶೇಷ ಕೋವಿಡ್ ಉಪನ್ಯಾಸವನ್ನು ಸಹ ಶಿಕ್ಷಕರು ಮಾಡುತ್ತಿದ್ದು, ಪ್ರತಿ ವಿದ್ಯಾರ್ಥಿಯನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ತಂಡಗಳನ್ನು ರಚಿಸಿ ಶಾಲೆಯನ್ನು ನಡೆಸಲಾಗುತ್ತಿದೆ.
ಕುಂದಾಣ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಪಿ.ವೆಂಕಟೇಶ್ ಮಾತನಾಡಿ, ಕೊರೊನಾ ೨ನೇ ಅಲೆಯಲ್ಲಿ ಕುಂದಾಣ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಉಪಯೋಗಿಸಿಕೊಳ್ಳಲಾಗಿತ್ತು. ಇದೀಗ ಎಲ್ಲಾ ರೀತಿಯಲ್ಲಿ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವುದರ ಮೂಲಕ ಮಕ್ಕಳು ಮತ್ತು ಶಿಕ್ಷಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿ ಕೊಠಡಿಗೆ ೨೫ ವಿಧ್ಯಾರ್ಥಿಗಳಂತೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಉಪಯೋಗಿಸುವಂತೆ ಸಲಹೆ ಸೂಚನೆಯನ್ನು ಸಹ ನೀಡಲಾಗಿದೆ. ಶಾಲೆಯು ಸುರಕ್ಷಿತವಾಗಿದ್ದು, ಯಾವುದೇ ಆತಂಕವನ್ನು ಪಡುವಾಗಿಲ್ಲ. ಮಕ್ಕಳು ಸಹ ಕೋವಿಡ್ ನಿಯಮ ಪಾಲನೆಯಲ್ಲಿ ಶಿಸ್ತು-ಸಂಯಮ ಪಾಲನೆಯಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ಹೇಳಿದರು.
ವರದಿ: ಹೈದರ್‌ಸಾಬ್, ಕುಂದಾಣ
Be the first to comment