ಜಿಲ್ಲಾ ಸುದ್ದಿಗಳು
ಭಟ್ಕಳ:
ಕಾರ್ಮಿಕ ಇಲಾಖೆ ಕಚೇರಿಯಲ್ಲಿ 2015 ರಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ವಿವಿಧ ರೀತಿಯ ಧನ ಸಾಯದ ಅರ್ಜಿಗಳಿಗೆ ಇದುವರೆಗೂ ಧನಸಹಾಯ ಮಂಜೂರ್ ಆಗಿರುವುದಿಲ್ಲ. ಅರ್ಜಿಗಳು ನಿರೀಕ್ಷಕರ ಕಚೇರಿಯಿಂದ ಅಧಿಕಾರಿ ಕಚೇರಿಗೆ ಅಧಿಕಾರಿ ಕಚೇರಿಯಿಂದ ನಿರೀಕ್ಷಕರ ಕಛೇರಿಗೆ ಸ್ಥಳಾಂತರ ಆಗುವುದರಲ್ಲಿ ಕಾಲಹರಣ ವಾಗಿರುತ್ತದೆ. ಮತ್ತು ಹಿರಿಯ ತನದಿಂದ (ಸೀನಿಯರಿಟಿ) ಮೂಲಕ ಅರ್ಜಿಗಳು ವಿಲೇವಾರಿಯಾಗದೆ ಕಾರ್ಮಿಕರಿಗೆ ಅನ್ಯಾಯವಾಗಿದೆ. ಕಳೆದ ಏಳು ವರ್ಷದಿಂದ ಕಾರ್ಮಿಕರು ಈ ಸಮಸ್ಯೆಗೆ ಸಿಲುಕಿದ್ದಾರೆ. ಇದಕ್ಕೆಲ್ಲ ಕಾರಣ ಇಲಾಖೆಯ ಆಂತರಿಕ ವ್ಯವಸ್ಥೆಯೇ ಕಾರಣ. ಈ ಹಿಂದೆ 2007 ರಿಂದ ರಾಜ್ಯದ ಎಲ್ಲಾ ಕಾರ್ಮಿಕ ನಿರೀಕ್ಷಕರು ನಿರೀಕ್ಷಕರ ಕಚೇರಿಯಲ್ಲಿ ಪ್ರತಿಯೊಂದು ದಾಖಲೆಯನ್ನು ಹಿರಿಯ ತನದಿಂದ ವಿಲೇವಾರಿ ಮಾಡುತ್ತಿದ್ದರು. ಅದರಂತೆ ಇಲಾಖೆಯ ಆವಕ ಮತ್ತು ಜಾವಕ (ಇನ್ವರ್ಡ್ ಔಟ್ವಾಡ್) ರಿಜಿಸ್ಟರ್ ಅನ್ನು ಸರಿಯಾಗಿ ನ್ಯಾಯಬದ್ಧವಾಗಿ ದಾಖಲಿಸುತ್ತಿದ್ದರು. ಈ ಅವಸ್ಥೆಯಲ್ಲಿ ಕಾರ್ಮಿಕರಿಗೆ ಸರಿಯಾದ ನ್ಯಾಯ ಸಿಗುತ್ತಿತ್ತು. ಆನಂತರ 2015ರಿಂದ ರಾಜ್ಯಾದ್ಯಂತ ಕಾರ್ಮಿಕ ನಿರೀಕ್ಷಕರು ವರ್ಗಾವಣೆಯಾದರು.
ಒಬ್ಬ ನಿರೀಕ್ಷಕ ನಾಲ್ಕೈದು ನಿರೀಕ್ಷಕರ ಕಛೇರಿಗೆ ಸೇವೆ ಸಲ್ಲಿಸುವಂತೆ ಆಯ್ತು. ಅದರಲ್ಲಿ ರಾಜ್ಯದಲ್ಲಿಯೇ ವಿಶೇಷ ಅನ್ನುವಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ 11 ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಕೇವಲ ಒಬ್ಬ ನಿರೀಕ್ಷಕ ಸೇವೆ ಸಲ್ಲಿಸುವ ವ್ಯವಸ್ಥೆ. ಕೇವಲ ಒಬ್ಬ ನಿರೀಕ್ಷಕ 11 ನಿರೀಕ್ಷಕರ ಕಚೇರಿಯಲ್ಲಿ ಸೇವೆಸಲ್ಲಿಸುವ ವ್ಯವಸ್ಥೆ ಆದರೆ ಅರ್ಜಿಗಳು ಹೇಗೆ ವಿಲೇವಾರಿ ಆದೀತು? ಈ ಬಗ್ಗೆ ಸರಕಾರ ಆಗಲಿ ಕಾರ್ಮಿಕ ಇಲಾಖೆ ಆಗಲಿ ಗಮನಹರಿಸಲಿಲ್ಲ. ನಿರೀಕ್ಷಕರ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಿಂದ ನೇಮಕಗೊಂಡ ಡಾಟಾ ಎಂಟ್ರಿ ಆಪರೇಟರ್ ಮಾತ್ರ ಇರುತ್ತಾರೆ.
ಅರ್ಜಿ ವಿಲೇವಾರಿಯಲ್ಲಿ ಲೋಪದೋಷ ಆದರೆ ಅಥವಾ ಸಿಬ್ಬಂದಿಯಿಂದ ಕಾರ್ಮಿಕರಿಗೆ ಅನ್ಯಾಯವಾದರೆ ಕಾರ್ಮಿಕರಿಂದ ಅಥವಾ ಸಂಘಟಕರಿಂದ ಮಂಡಳಿಗೆ ಅಥವಾ ಇಲಾಖೆಗೆ ದೂರು ಹೋಗುತ್ತದೆ. ಈ ದೂರು ನಾಯ ಬದ್ಧವಾಗಿದ್ದರೆ ಕ್ರಮ ಕೈಗೊಳ್ಳುವುದು ಕೇವಲ ಡಾಟಾ ಎಂಟ್ರಿ ಆಪರೇಟರುಗಳಿಗೆ. ಆನಂತರ ಏಜೆನ್ಸಿಯಿಂದ ಡಾಟಾ ಎಂಟ್ರಿ ಆಪರೇಟರ್ ಬದಲಾಯಿಸಲಾಗುತ್ತದೆ.
ನಂತರ ಹೊಸದಾಗಿ ಡಾಟಾ ಎಂಟ್ರಿ ಆಪರೇಟರ್ ಆ ಕಚೇರಿಯಲ್ಲಿ ಕೆಲಸ ಮಾಡುವಾಗ ಕೆಲಸ ಕಲಿಯಲಿಕ್ಕೆ ಆತನಿಗೆ ಕನಿಷ್ಠ ನಾಲ್ಕೈದು ತಿಂಗಳು ಬೇಕಾಗುತ್ತದೆ. ಈ ನಾಲ್ಕೈದು ತಿಂಗಳ ವ್ಯವಸ್ಥೆಯಲ್ಲಿ ಹಲವಾರು ಏಜೆಂಟರು ಆತನಿಗೆ ಹಲವಾರು ರೀತಿಯ ಸಲಹೆ ಸೂಚನೆಗಳು ಸಹಕಾರಗಳು ನೀಡುತ್ತಾ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಈ ಒಂದು ಬದಲಾವಣೆಯಿಂದ ನೈಜ ಕಾರ್ಮಿಕರಿಗೆ ಅನ್ಯಾಯವಾಗುತ್ತ ಬಂದಿದೆ.
ಈ ವಿಷಯವಾಗಿ ರಾಷ್ಟ್ರೀಕೃತ ಕಾರ್ಮಿಕ ಸಂಘಟನೆಗಳು (ಎ.ಐ.ಟಿ.ಯು.ಸಿ) ಹಲವಾರು ಬಾರಿ ಕಾರ್ಮಿಕ ಇಲಾಖೆಗೆ ರಾಜ್ಯ ಸರ್ಕಾರಕ್ಕೆ ದೂರು ನೀಡುತ್ತಾ ಮನವಿ ಸಲ್ಲಿಸುತ್ತಾ ಹೋರಾಟ ಮಾಡುತ್ತಾ ಬಂದಿರುತ್ತದೆ. ಆದರೂ ಸಹ ರಾಜ್ಯಾದ್ಯಂತ ಎಲ್ಲಾ ತಾಲ್ಲೂಕು ನಿರೀಕ್ಷಕರ ಕಚೇರಿಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಛೇರಿಯಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಕರ ಕಚೇರಿಯಲ್ಲಿ ಅರ್ಜಿಗಳು ವಿಲೇವಾರಿಯಾಗದೆ ಫಲಾನುಭವಿಗೆ ಧನಸಹಾಯ ಮಂಜೂರಾಗದೇ ಬಾಕಿ ಉಳಿದಿರುತ್ತದೆ. ಅತಿ ವಿಶೇಷವಾಗಿ ಪಿಂಚಣಿ ಅರ್ಜಿ ಸಲ್ಲಿಸಿರುವ ಕಾರ್ಮಿಕ ಫಲಾನುಭವಿಗಳು ಕಳೆದ ಐದಾರು ವರ್ಷದಿಂದ ಪಿಂಚಣಿಗೆ ಅರ್ಜಿ ಸಲ್ಲಿಸಿ ಪಿಂಚಣಿ ಪಡೆಯಲಾಗದೆ ವಂಚಿತರಾಗಿದ್ದಾರೆ. ಅದರಂತೆ 2019 ರಿಂದ ಸೇವಾಸಿಂಧು ಮೂಲಕ ಆನ್ಲೈನ್ನಲ್ಲಿ ಸಲ್ಲಿಸಿರುವ ಅರ್ಜಿದಾರರು ಸಹ ಪಿಂಚಣಿ ಸಹಾಯಧನ ಪಡೆಯಲಾಗದೆ ವಂಚಿತರಾಗಿದ್ದಾರೆ. ಇವೆಲ್ಲ ಪ್ರಕ್ರಿಯೆಗಳು ಕೇವಲ ಒಂದೆರಡು ತಾಲೂಕು ಒಂದೆರಡು ಜಿಲ್ಲೆಯಲ್ಲ. ರಾಜ್ಯಾದ್ಯಂತ ಈ ಸಮಸ್ಯೆ ಇದೆ. ಮಾನ್ಯ ಕಾರ್ಮಿಕ ಸಚಿವರು ಶಿವರಾಮ್ ಹೆಬ್ಬಾರ್ ಸರ್ ಅವರು ಎರಡನೇ ಬಾರಿಗೆ ಕಾರ್ಮಿಕ ಸಚಿವರಾಗಿ ಒಂದು ವಿಶೇಷವಾದ ಕಾರ್ಮಿಕ ಅದಾಲತ್ ಎಂಬ ಒಂದು ತಿಂಗಳ ಕಾರ್ಯಕ್ರಮ ಕೈಗೊಂಡಿದ್ದಾರೆ. ಇದು ರಾಜ್ಯದಲ್ಲಿಯೇ ಮಾದರಿ. ಈ ಕಾರ್ಯಕ್ರಮದಡಿಯಲ್ಲಿ ಅತಿ ವಿಶೇಷವಾಗಿ ಪಿಂಚಣಿ ಅರ್ಜಿದಾರರು ಅರ್ಜಿ ಸಲ್ಲಿಸಿದ ದಿನಾಂಕದಿಂದ ಇಲ್ಲಿಯವರೆಗೆ ತನಗೆ ಸಲ್ಲಬೇಕಾದ ಒಟ್ಟು ಪಿಂಚಣಿ ಮೊತ್ತವನ್ನು (ನೀಡಿ ಗಂಟಾಗಿ) ಆತನ ಖಾತೆಗೆ ಜಮಾ ಆಗಬೇಕು. ಆನಂತರ ಪ್ರತಿ ತಿಂಗಳಂತೆ ಆತನಿಗೆ ಪಿಂಚಣಿ ಸಿಗಬೇಕು. ಕೇವಲ ಕಾರ್ಮಿಕ ಅದಾಲತ್ ಕಾರ್ಯಕ್ರಮದಿಂದ ಅರ್ಜಿ ವಿಲೇವಾರಿ ಆದ ಪಿಂಚಣಿದಾರರಿಗೆ ಇಲ್ಲಿಂದ ಪಿಂಚಣಿ ಮಂಜೂರು ಆದರೆ ಆತನಿಗೆ ಸಂಪೂರ್ಣ ಅನ್ಯಾಯವಾಗುತ್ತದೆ.
ಐದಾರು ವರ್ಷದಿಂದ ಅರ್ಜಿ ಇಟ್ಟುಕೊಂಡಿರುವುದು ಕಾರ್ಮಿಕ ಇಲಾಖೆ ಮತ್ತು ಸಿಬ್ಬಂದಿಯ ತಪ್ಪು.
ಈ ತಪ್ಪು ಮತ್ತು ಈ ನಡವಳಿಕೆಗೆ ಈ ಅವಸ್ಥೆಗೆ ಕಾರ್ಮಿಕ ಜವಾಬ್ದಾರ ಅಲ್ಲ.ದಯವಿಟ್ಟು ಈ ವಿಷಯವನ್ನು ಮಾನ್ಯ ಕಾರ್ಮಿಕ ಸಚಿವರು ಮತ್ತು ಮಾನ್ಯ ಕಾರ್ಮಿಕ ಮಂಡಳಿಯ ಕಾರ್ಯದರ್ಶಿಯವರು ಗಮನಹರಿಸಿ ನೈಜ ಕಾರ್ಮಿಕರಿಗೆ ಸಿಗುವಂತೆ ಮಾಡಬೇಕಾಗಿ ಜಿ.ಎನ್. ರೇವಣಕರ್ (ಎ.ಐ.ಟಿ.ಯು.ಸಿ) ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎನ್.ರೇವಣಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Be the first to comment