ಜಿಲ್ಲಾ ಸುದ್ದಿಗಳು
ಕುಮಟಾ
29-08-21ನೃತ್ಯಾಭಿನಯದಲ್ಲಿ ಎಲ್ಲರನ್ನೂ ಮೋಡಿ ಮಾಡುವ ಮೂರು ವರ್ಷದ ಈ ಪುಟ್ಟ ಬಾಲಕಿಯು ತನ್ನ ಕ್ಲಾಸಿಕಲ್ ನೃತ್ಯದ ಮೂಲಕ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಸೃಷ್ಟಿಸಿ, ಜಿಲ್ಲೆ ಹಾಗೂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.
ಈ ಪುಟ್ಟ ಬಾಲಕಿಯ ಹೆಸರು ಆದ್ಯಾ ಪ್ರಕಾಶ ನಾಯಕ. ಮೂಲತಃ ಉಡುಪಿಯ ಹೆಬ್ರಿ ನಿವಾಸಿಯಾದ ಆದ್ಯಾ ಪ್ರಕಾಶ ನಾಯಕ, 2021 ರಲ್ಲಿ ನಡೆದ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನ ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ ಎಂಬ ಆನ್‌ಲೈನ್ ಸ್ಪರ್ಧೆಯಲ್ಲಿ ವಿವಿಧ ರಾಷ್ಟ್ರಗಳಿಂದ ಭಾಗವಹಿಸಿದ್ದ 1294 ಸ್ಪರ್ಧಿಗಳಲ್ಲಿ ಈಕೆಯು ಕ್ಲಾಸಿಕಲ್ ಡ್ಯಾನ್ಸ್ ವಿಭಾಗದಲ್ಲಿ ಹೆಚ್ಚು ಸಮಯದವರೆಗೆ ನೃತ್ಯ ಪ್ರದರ್ಶನ ಮಾಡುವ ಮೂಲಕ ತನ್ನ ಹೆಸರನ್ನು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗುವಂತೆ ಮಾಡಿದ್ದಾಳೆ.ಕುಮಟಾದ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ನಾಯಕ ಹೆಬ್ರಿ ಮತ್ತು ಸ್ಮಿತಾ ಪ್ರಕಾಶ ನಾಯಕ ದಂಪತಿಯ ಪುತ್ರಿಯಾದ ಆದ್ಯಾ, ಒಂದು ವರ್ಷದ ಮಗುವಿರುವಾಗಲೇ ನೃತ್ಯ ಮತ್ತು ಅಭಿನಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಳು. ಪ್ರಪ್ರಥಮ ಬಾರಿಗೆ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಅಂತರಾಷ್ಟ್ರೀಯ ಆನ್‌ಲೈನ್ ಸ್ಪರ್ಧೆಯಲ್ಲಿ ನೃತ್ಯ ಕಿಂಕಿಣಿ ಸೆಮಿ ಕ್ಲಾಸಿಕಲ್ ನೃತ್ಯ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ, ರಾಜ್ಯ ಮಟ್ಟದ ಛದ್ಮವೇಷ ಸ್ಪರ್ಧೆ-2020 ರಲ್ಲಿ ವಿಶೇಷ ಬಹುಮಾನ, 2020 ರ ಲವ್ ಇಂಡಿಯಾ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಕಲಾವತಿ ನಾಟ್ಯ ಕಲಾಕೇಂದ್ರ ನಡೆಸಿದ ಸೈಲಿ ಬೇಬಿ ಕಾಂಪಿಟೇಷನ್ 2020 ರಲ್ಲಿ ತೃತೀಯ ಸ್ಥಾನ, ದಿವ್ಯಮ ರಾಯ್ ಇಂಡಿಯನ್ ಕ್ಲಾಸಿಕಲ್ ಸಂಸ್ಥೆ ವತಿಯಿಂದ ನಡೆದ 2020 ರ ಛದ್ಮವೇಷ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕೀರ್ತಿ ಈ ಪುಟಾಣಿ ಬಾಲಕಿಯದ್ದಾಗಿದೆ.
ಅಲ್ಲದೇ, ಸ್ಥಳೀಯ ಮಟ್ಟದ ಅನೇಕ ಸ್ಪರ್ಧೆಗಳಲ್ಲೂ ಭಾಗವಹಿಸಿ ಬಹುಮಾನ ಪಡೆದು, ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಇನ್ನು ಈ ಪುಟ್ಟ ಬಾಲಕಿ ಆದ್ಯಾ ಮಾಡೆಲಿಂಗ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು , ಈಗಾಗಲೇ ಬೆಂಗಳೂರಿನ ಬಾಂಬೋ ಮತ್ತು ಕ್ಲಾಸಿಕ್ ವೊಟನ್ ಫರ್ನಿಚರ್ ಜಾಹೀರಾತಿನಲ್ಲಿ ಬಾಲ ರೂಪದರ್ಶಿಯಾಗಿ ನಟಿಸಿರುವ ಭಾವಚಿತ್ರ ಪ್ರಕಟವಾಗಿದೆ.
ಈಕೆಯು ಭರತನಾಟ್ಯದ ಹಸ್ತ ಮುದ್ರಿಕೆಗಳನ್ನು ಅಭಿನಯಿಸಿ ತೋರಿಸುತ್ತಾಳೆ. ಗಣಿತ ಗಣೇಶ ಸರಸ್ವತಿ ಮತ್ತು ನಟರಾಜನ ಶ್ಲೋಕಗಳನ್ನು ಹೇಳುವ ಜೊತೆಗೆ ತನ್ನದೇ ಶೈಲಿಯಲ್ಲಿ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆಯುವ ಈ ಪುಟ್ಟ ಬಾಲಕಿಯ ನೃತ್ಯಾಭಿನಯದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂಬುದು ಎಲ್ಲರ ಆಶಯವಾಗಿದೆ.
Be the first to comment