ತೈಲಗೆರೆ ಗಣಿಗಾರಿಕೆ ಪ್ರದೇಶಕ್ಕೆ ಜೆಡಿಒ ಡಾ.ಲಕ್ಷ್ಮಮ್ಮ ಭೇಟಿ ಪರಿಶೀಲನೆ ಗಣಿಗಾರಿಕೆ ನಡೆಯದಂತೆ ಸ್ಥಳೀಯರ ಮತ್ತು ರೈತರ ಪ್ರತಿಭಟನೆ ಸರಕಾರದಿಂದಲೇ ಅನುಮತಿ | ಗಣಿಬಾತಿತ ಪ್ರದೇಶಕ್ಕೆ ಅನುದಾನ ಬಳಕೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಗಣಿಗಾರಿಕೆ ನಡೆಯುವ ಪ್ರದೇಶಕ್ಕೆ ಸ್ಥಳೀಯರು ಮತ್ತು ರೈತರು ಏಕಾಏಕೀ ದಾಳಿ ನಡೆಸಿ ಗಣಿಗಾರಿಕೆಯನ್ನು ನಡೆಸಬಾರದೆಂದು ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.ಗಣಿಗಾರಿಕೆಯ ಪ್ರದೇಶದಲ್ಲಿ ರೈತರು ಪ್ರತಿಭಟನೆಯನ್ನು ನಡೆಸುತ್ತಿರುವ ಸುದ್ದಿಯಾಗುತ್ತಿದ್ದಂತೆ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಂಟಿ ಆಯುಕ್ತೆ ಡಾ.ಲಕ್ಷ್ಮಮ್ಮ ಭೇಟಿ ನೀಡಿ ಗಣಿಗಾರಿಕೆ ನಡೆಯುವ ಪ್ರದೇಶದ ಸ್ಥಳ ಪರಿಶೀಲನೆ ನಡೆಸಿದರು.

CHETAN KENDULI

ಸುತ್ತಮುತ್ತಲಿನ ರೈತರು ಬೆಳೆದ ಬೆಳೆಗಳಿಗೆ ಧೂಳು, ಅಂತರ್ಜಲ ಹೀಗೆ ಹಲವು ತೊಂದರೆಯಾಗುತ್ತಿದೆ. ಇದರಿಂದ ನಷ್ಟವನ್ನು ಅನುಭವಿಸುತ್ತಿದ್ದೇವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಗಣಿಗಾರಿಕೆ ನಡೆಸಬಾರದು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.
ಕೆಲ ಕಾಲ ರೈತರು ಮತ್ತು ಗಣಿ (ಕ್ರಷರ್ ಮಾಲೀಕರು) ಮತ್ತು ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಮತ್ತು ವಿಜಯಪುರ ವೃತ್ತ ನಿರೀಕ್ಷಕ ಟಿ.ಶ್ರೀನಿವಾಸ್ ಭೇಟಿ ನೀಡಿ, ಗಣಿಗಾರಿಕೆಗೆ ಸಂಬಂಧಿಸಿದಂತೆ ಪದೇ ಪದೇ ನಡೆಯುತ್ತಿರುವುದಕ್ಕೆ ತೆರೆ ಎಳೆಯಬೇಕೆಂದು ಸಭೆ ಕರೆಯುವ ಸಲಹೆ ನೀಡಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಂಟಿ ಆಯುಕ್ತರಾದ ಡಾ.ಲಕ್ಷ್ಮಮ್ಮ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ತೈಲಗೆರೆ ಸರ್ವೆ ನಂ.೧೧೦ರಲ್ಲಿ ೫೫ಎಕರೆ ೧೬ಗುಂಟೆ ಜಾಗದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದು, ಸರಕಾರದಲ್ಲಿ ೧೪ ಲೀಸ್ ಮತ್ತು ಮುದ್ದನಾಯಕನಹಳ್ಳಿ ಸರ್ವೆ ನಂ.೧೧೨ರಲ್ಲಿ ೨ ಲೀಸ್ ಅನುಮತಿಯನ್ನು ನೀಡಲಾಗಿದ್ದು, ಈ ಎಲ್ಲಾ ಲೀಸ್‌ಗಳು ಕೂಡ ಲೀಗಲ್ ಆಗಿದ್ದು, ಗಣಿಗಾರಿಕೆ ನಡೆಸಲು ಅನುಮತಿಯನ್ನು ಸರಕಾರದ ಹಂತದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ನೀಡಲಾಗಿದೆ.

ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದ ಸುತ್ತಲು ಫೆನ್ಸಿಂಗ್ ಅಳವಡಿಸಿದ್ದು, ಅಲ್ಲಲ್ಲಿ ನಾಮಫಲಕವನ್ನು ಸಹ ಹಾಕಿಸಲಾಗಿದೆ. ಅಲ್ಲಲ್ಲಿ ಹಾಕಿರುವ ನಾಮಫಲಕವನ್ನು ಒಂದೇ ಕಡೆ ಇರಿಸಲು ಸೂಚನೆ ನೀಡಲಾಗಿದೆ. ಗಣಿಗಾರಿಕೆ ಪ್ರದೇಶದಿಂದ ಸುತ್ತಮುತ್ತಲ ರೈತರಿಗೆ ತೊಂದರೆಯಾಗುತ್ತಿದ್ದರೆ ಅಥವಾ ನಷ್ಟವಾಗಿದ್ದರೆ ರೈತರಿಂದ ತಾಂತ್ರಿಕ ವರದಿಯನ್ನು ಪಡೆದುಕೊಂಡು ಪರಿಶೀಲಿಸಲಾಗುತ್ತದೆ. ಲೀಸ್ ನೀಡಿದ್ದರಿಂದ ಸರಕಾರಕ್ಕೆ ರಾಜಧನ ಕಳೆದ ವರ್ಷ ೧೧ಕೋಟಿ ೫೦ಲಕ್ಷ ಮತ್ತು ಪ್ರಸ್ತತ ವರ್ಷ ೨ಕೋಟಿ ೭೦ಲಕ್ಷ ರೂ. ರಾಜಧನ ಬಂದಿದೆ. ಡಿಸ್ಟ್ರಿಕ್ಟ್ ಮಿನರಲ್ ಫೌಂಡೇಷನ್ ಟ್ರಸ್ಟ್ ಮೂಲಕ ಪ್ರತಿ ಟನ್‌ಗೆ ಇಂತಿಷ್ಟು ಹಣ ಕಟ್ಟುವಂತೆ ಮಾಡಲಾಗುತ್ತಿದೆ. ಅದನ್ನು ಕಟ್ಟುತ್ತಿದ್ದಾರೆ. ಕಳೆದ ವರ್ಷ ೧೬ಲಕ್ಷ ಈ ವರ್ಷ ೫ಲಕ್ಷ ರೂ. ಬಂದಿರುತ್ತದೆ. ಈ ಅನುದಾನವನ್ನು ಗಣಿಬಾದಿತ ಪ್ರದೇಶದ ಅಭಿವೃದ್ಧಿಗೆ ಬಳಸಲಾಗುತ್ತಿದೆ. ನಿಯಮವನ್ನು ಉಲ್ಲಂಘನೆ ಮಾಡದಂತೆ ಈಗಾಗಲೇ ಸಾಕಷ್ಟು ಸೂಚನೆ ನೀಡಿದ್ದು, ಯಾವುದೇ ರೀತಿಯ ಉಲ್ಲಂಘನೆ ಕಂಡುಬಂದಿರುವುದಿಲ್ಲ ಎಂದು ಹೇಳಿದರು.

ಕಲ್ಲುಗಣಿಗಾರಿಕೆ ಮತ್ತು ಕ್ರಷರ್‌ಗಳ ಮಾಲೀಕರ ರಾಜ್ಯ ಘಟಕದ ಕಾರ್ಯದರ್ಶಿ ಕಿರಣ್ ಜೈನ್ ಮಾತನಾಡಿ, ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಸ್ಪೋಟಕ ಬಳಸಲಾಗುತ್ತಿದೆ. ತಾಂತ್ರಿಕ ತಜ್ಞರನ್ನು ನೇಮಿಸಿ ಸ್ಪೋಟಿಸಲಾಗುತ್ತಿದೆ. ಸ್ಪೋಟಿಸುವ ಮುನ್ನಾ ಹಲವಾರು ಬಾರಿ ಸೂಚನೆ ನೀಡಿ ಸ್ಪೋಟಿಸುವ ಕಾರ್ಯವಾಗುತ್ತಿದೆ. ರೈತರಿಗೆ, ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬಹಳ ನಿಗಾ ವಹಿಸಲಾಗುತ್ತಿದೆ. ಸರಕಾರದಿಂದ ಪ್ರತಿಯೊಂದು ಅನುಮತಿಯನ್ನು ಅಧಿಕೃತವಾಗಿ ಪಡೆದುಕೊಂಡು ಮಾಡಲಾಗುತ್ತಿದೆ. ಕೇಂದ್ರ ಸರಕಾರದ ಸಂಸ್ಥೆಯಿಂದ ಅಧಿಕೃತವಾಗಿ ೪ ವರ್ಷದ ಹಿಂದೆಯೇ ಅನುಮತಿ ಪಡೆದು ಸ್ಪೋಟಕಗಳನ್ನು ಬಳಸಲಾಗುತ್ತಿದೆ. ಗಣಿಗಾರಿಕೆ ನಡೆಸಲು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅನಧಿಕೃತವಾಗಿ ಯಾವುದೇ ರೀತಿಯಲ್ಲಿ ನಡೆಸುತ್ತಿಲ್ಲ. ೧೦ ಜನರಿಗೆ ತೊಂದರೆಯಾದರೆ ಸಾವಿರ ಜನರಿಗೆ ತೊಂದರೆಯಾಗುತ್ತದೆ. ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡೇ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ಈ ವೇಳೆಯಲ್ಲಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ರೇಣುಕ, ಭೂ ವಿಜ್ಞಾನಿಗಳಾದ ವಿಕ್ರಮ್, ಮೂರ್ತಿ, ಎಇಇ ರಾಜಶೇಖರ್, ತಾಲೂಕು ಸಹಾಯಕಿ ಸವಿತಾ, ವಿಶ್ವನಾಥಪುರ ಪೊಲೀಸ್ ಠಾಣೆಯ ಪಿಎಸ್‌ಐ ವೆಂಕಟೇಶ್, ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿ, ಆರ್‌ಐ ಚಿದಾನಂದ್, ಕ್ರಷರ್ ಮಾಲೀಕರು, ಸಿಬ್ಬಂದಿಗಳು, ರೈತ ಮುಖಂಡರು, ಸ್ಥಳೀಯರು ಇತರರು ಇದ್ದರು.

Be the first to comment

Leave a Reply

Your email address will not be published.


*