ಅಪ್ರಕಟಿತ ಶಿಲಾ ಶಾಸನಗಳ ದಾಖಲೆಗೆ ಮುಂದಾಗಬೇಕಿದೆ ಪುರಾತತ್ವ ಇಲಾಖೆ

ವರದಿ: ಹೈದರ್‌ಸಾಬ್, ಕುಂದಾಣ

ರಾಜ್ಯ ಸುದ್ದಿ

CHETAN KENDULI

ಬಿ.ಎಲ್.ರೈಸ್ ಕಾಲದಲ್ಲಿ ೮೧ ಶಾಸನಗಳ ದಾಖಲು | ೫೦ಕ್ಕೂ ಹೆಚ್ಚು ಅಪ್ರಕಟಿತ ಶಿಲಾ ಶಾಸನಗಳು ಪತ್ತೆ | ದಾಖಲು ಮರೀಚಿಕೆದೇವನಹಳ್ಳಿ: ಶತಮಾನಗಳ ಹಿಂದೆ ರಾಜ ಮಹಾರಾಜರು ತಮ್ಮ ಆಡಳಿತಾವಧಿಯಲ್ಲಿ ಸಾಕಷ್ಟು ಶಿಲಾ ಶಾಸನಗಳ ಮೂಲಕ ಇತಿಹಾಸವನ್ನು ಬರೆದಿರುವುದು ಸಾಕಷ್ಟು ದೊರೆತಿವೆ.

ಶಾಸನ ಪಿತಾಮಹ ಡಾ.ಬಿ.ಎಲ್.ರೈಸ್ ಅವರ ಕಾಲದಲ್ಲಿ ದೇವನಹಳ್ಳಿ ತಾಲೂಕಿನಲ್ಲಿ ಚಿಕ್ಕಜಾಲ ಹೋಬಳಿ ಸೇರಿದಂತೆ ಹಲವು ಶಿಲಾ ಶಾಸನಗಳನ್ನು ಪತ್ತೆ ಹಚ್ಚಿ ಎಫಿಗ್ರಾಫಿಯಲ್ಲಿ ೮೧ ಶಾಸನಗಳನ್ನು ದಾಖಲು ಮಾಡಿರುತ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ರಾಜ-ಮಹಾರಾಜರು, ಗಂಗರು, ನೊಳಂಬರು, ಚೋಳರು, ಪಾಳೇಗಾರರು, ನವ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪೂರ್ವಜರಾದ ಆವತಿ ನಾಡಪ್ರಭುಗಳ ಆಳ್ವಿಕೆ ಕಾಲದ ಸಾಕಷ್ಟು ಅಪ್ರಕಟಿತ ಶಿಲಾ ಶಾಸನ, ವೀರಗಲ್ಲು ಶಾಸನ, ತಮಿಳು, ಹಳಗನ್ನಡ, ಸಂಸ್ಕೃತ ಗ್ರಂಥ ಲಿಪಿ ಶಾಸನಗಳು ಇತ್ತಿಚೆಗಷ್ಟೇ ದೇವನಹಳ್ಳಿ ತಾಲೂಕಿನಾದ್ಯಂತ ಸುಮಾರು ೫೦ಹೆಚ್ಚು ಪತ್ತೆಯಾಗಿದ್ದು, ಪುರಾತತ್ವ ಇಲಾಖೆ ದಾಖಲು ಮಾಡುವಲ್ಲಿ ವಿಫಲವಾಗಿದೆ.

ಎಲ್ಲೆಲ್ಲಿ ಅಪ್ರಕಟಿತ ಶಾಸನಗಳ ಪತ್ತೆ?ದೇವನಹಳ್ಳಿ ತಾಲೂಕಿನ ಉಗನವಾಡಿ, ಕಾರಹಳ್ಳಿ, ಯಂಬ್ರಹಳ್ಳಿ, ವೆಂಕಟಗಿರಿಕೋಟೆ, ಸಾದಹಳ್ಳಿ, ಚಿಕ್ಕಸಣ್ಣೆ, ಪಿ.ರಂಗನಾಥಪುರ, ಚಿಕ್ಕತತ್ತಮಂಗಲ, ಹಳಿಯೂರು, ಯಲಿಯೂರು, ಲಿಂಗಧೀರಗೊಲ್ಲಹಳ್ಳಿ, ಕುಂದಾಣ ಬೆಟ್ಟ, ದಿಬ್ಬಗಿರಿ, ಅತ್ತಿಬೆಲೆ, ದೇವನಹಳ್ಳಿ ಪಟ್ಟಣ, ಸೋಲೂರು, ನಲ್ಲೂರು, ಚೆನ್ನಹಳ್ಳಿ, ಜೊನ್ನಹಳ್ಳಿ, ವಿಜಯಪುರ ಸಮೀಪ, ಹುರಳಗುರ್ಕಿ, ಕೊಯಿರ ವೀರಗಲ್ಲು, ಬನ್ನಿಮಂಗಲ ಕೆರೆಯ ತೂಬಿನ ಶಾಸನ, ಆವತಿ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ಕನ್ನಡ, ಸಂಸ್ಕೃತ, ಹಳೆಗನ್ನಡ, ತಮಿಳು ಗ್ರಂಥ ಲಿಪಿಯುಳ್ಳ ಅಪ್ರಕಟಿತ ಶಾಸನಗಳು ಪತ್ತೆಯಾಗಿರುತ್ತದೆ.

ಶಾಸನಗಳ ದಾಖಲಿಗೆ ಇತಿಹಾಸಕಾರರ ಒತ್ತಾಯ!ಸುಮಾರು ೩ ವರ್ಷಗಳಿಂದ ದೇವನಹಳ್ಳಿ ತಾಲೂಕಿನಾದ್ಯಂತ ಶಿಲಾ ಶಾಸನಗಳ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇತಿಹಾಸಕಾರ ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಿಟ್ಟಸಂದ್ರ ಗುರುಸಿದ್ದಯ್ಯ.ಬಿ.ಜಿ ಗ್ರಾಮಸ್ಥರ ಸಹಕಾರದಲ್ಲಿ ಹಲವು ಶಾಸನಗಳನ್ನು ಪತ್ತೆ ಹಚ್ಚಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ದೊರೆತಿರುವ ಶಾಸನಗಳು ಅಪ್ರಕಟಿತವಾಗಿದ್ದು, ಅದ ಪಾಠವನ್ನು ಪುರಾತತ್ವ ಇಲಾಖೆ ದಾಖಲು ಮಾಡುವುದರ ಜತೆಗೆ ಅಸುರಕ್ಷಿತವಾಗಿರುವ ಶಾಸನಗಳನ್ನು ಸಂರಕ್ಷಿಸಬೇಕೆಂಬುವುದು ಇತಿಹಾಸಕಾರರ ಒತ್ತಾಸೆಯಾಗಿದೆ.

ಇತಿಹಾಸ ಸಂಶೋಧಕ ಬಿಟ್ಟಸಂದ್ರ ಗುರುಸಿದ್ಧಯ್ಯ.ಬಿ.ಜಿ. ಮಾತನಾಡಿ, ನಮ್ಮ ನಾಡಿನ ರಾಜ-ಮಹಾರಾಜರ ಆಳ್ವಿಕೆಯ ಇತಿಹಾಸ ತಿಳಿಯಲು ಆಗಿನ ಕಾಲದಲ್ಲಿ ಶಿಲೆಯ ಮೂಲಕ ತಮ್ಮ ಕಾಲಾವಧಿಯ ಚಿತ್ರಣವನ್ನು ಬರೆದಿದ್ದಾರೆ. ಅದನ್ನು ಮುಂದಿನ ಯುವ ಪೀಳಿಗೆಗೆ ತಿಳಿಸುವ ಪ್ರಯತ್ನವನ್ನು ಪುರಾತತ್ವ ಇಲಾಖೆ ಮಾಡಬೇಕು. ತಾಲೂಕಿನಲ್ಲಿ ಹೆಚ್ಚು ಶಿಲಾ ಶಾಸನಗಳು, ವೀರಗಲ್ಲು ಶಾಸನಗಳು, ವೀರಗಲ್ಲು-ಮಾಸ್ತಿಗಲ್ಲು, ದೊರೆಯುತ್ತಿದ್ದು, ಇದುವರೆಗೆ ಸುಮಾರು ೫೦ಕ್ಕೂ ಹೆಚ್ಚು ದೊರೆತಿರುವುದರ ಅಧ್ಯಯನ ನಡೆಸಿ ದಾಖಲು ಮಾಡಬೇಕು ಎಂದು ಹೇಳಿದರು.ಮಾನವ ಹಕ್ಕುಗಳ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಡಿ.ಕೆ.ಮಹೇಂದ್ರ ಕುಮಾರ್ ಮಾತನಾಡಿ, ಅಪ್ರಕಟಿತ ಶಿಲಾ ಶಾಸನಗಳು ಲಭ್ಯವಾಗುತ್ತಿದ್ದರೂ ಸಹ ದಾಖಲು ಮಾಡದೆ ಕಣ್ಮುಚ್ಚಿ ಕುಳಿತಿರುವ ಪುರಾತತ್ವ ಇಲಾಖೆ ಶಾಸನಗಳ ಸಂರಕ್ಷಣೆಗೆ ಮುಂದಾಗಬೇಕು. ಮುಂದಿನ ಪೀಳಿಗೆಗೆ ಇತಿಹಾವನ್ನು ತಿಳಿಯಲು ಇದರ ಅನಿವಾರ್ಯತೆ ಹೆಚ್ಚು ಇರುತ್ತದೆ. ಈಗಲಾದರೂ ಎಚ್ಚೆತ್ತುಗೊಂಡು ತಾಲೂಕಿನಲ್ಲಿ ಪತ್ತೆಯಾಗಿರುವ ಶಾಸನಗಳನ್ನು ಅಧ್ಯಯನ ನಡೆಸಿ ಸಮಗ್ರ ಮಾಹಿತಿ ದಾಖಲು ಮಾಡುವಂತೆ ಆಗಬೇಕು ಎಂದು ಆಗ್ರಹಿಸಿದರು.

Be the first to comment

Leave a Reply

Your email address will not be published.


*