ಜಿಲ್ಲಾ ಸುದ್ದಿಗಳು
ಭಟ್ಕಳ:
ಭಟ್ಕಳ ತಾಲೂಕಿನಲ್ಲಿ ಕೋವಿಡ್ ಎರಡನೇ ಅಲೆಯು ಗಂಭೀರ ಪರಿಣಾಮ ಬೀರಿದಂತಹ ಸಂದರ್ಭದಲ್ಲಿ, ಸೋಂಕಿತರ ಸಾವಿನ ಸಂಖ್ಯೆಯೂ ದಿನದಿಂದ ದಿನಕ್ಕೆ ಏರುತ್ತಲೇ ಇತ್ತು. ಒಂದು ಕಡೆ ಸಾವಿಗೀಡಾದ ವ್ಯಕ್ತಿಯ ಮನೆಯವರು ಹಾಗೂ ಸಂಬಂಧಿಕರು ಸಾವಿನ ದುಃಖದಲ್ಲಿ ಮುಳುಗಿರುವುದಲ್ಲದೆ, ಕೋವಿಡ್ ಸೋಂಕಿನ ತೀವ್ರತೆಯ ಭಯದಿಂದ ಮೃತವ್ಯಕ್ತಿಯ ಶವಸಂಸ್ಕಾರ ಮಾಡಲು ಹಿಂಜರಿದು, ಶವ ಸಂಸ್ಕಾರ ಮಾಡಲು ಬೇರೆಯವರ ಅಥವಾ ತಾಲೂಕಾಡಳಿತದ ಸಹಾಯಕ್ಕಾಗಿ ನಿರೀಕ್ಷಿಸುತ್ತಿರುವ ಸ್ಥಿತಿ ಎದುರಾಗಿತ್ತು. ಇಂತಹ ಒಂದು ಕೆಟ್ಟ ಭಯದ ವಾತಾವರಣ ಎದುರಾಗಿರುವ ಸಂದರ್ಭದಲ್ಲಿ ಸಮಾಜ ಸೇವಕರಾದ ಆಸರಕೇರಿಯ ಶ್ರೀಕಾಂತ ನಾಯ್ಕ (ಮಾಜಿ ಸೈನಿಕರು), ಪಾಂಡುರಂಗ ನಾಯ್ಕ, ಈಶ್ವರ ಎನ್ ನಾಯ್ಕ, ಈಶ್ವರ್ ಕೆ ನಾಯ್ಕ, ವಿವೇಕ ನಾಯ್ಕ ಜಾಲಿ, ಅರುಣ್ ನಾಯ್ಕ ಚೌಥನಿ, ದಾಸ ನಾಯ್ಕ ಶಿರಾಲಿ, ಶ್ರೀನಿವಾಸ ನಾಯ್ಕ ಹನುಮಾನ್ ನಗರ ಇವರುಗಳು ತಂಡವನ್ನು ರಚಿಸಿಕೊಂಡು, ಕೋವಿಡ್ ಸೋಂಕಿನ ಭಯದ ನಡುವೆಯೂ, ಭಟ್ಕಳ ನಗರ ಭಾಗದಲ್ಲಿರುವ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಕೋವಿಡ್ ಸೋಂಕಿತರು ಮೃತರಾದರೂ ಸಹ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ತಮ್ಮ ತಂಡದೊಂದಿಗೆ ಆಗಮಿಸಿ,ಕೋವಿಡ್ ನಿಯಮಾವಳಿ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ಶವ ಸಂಸ್ಕಾರ ಮಾಡಿಕೊಂಡು ಬಂದಿರುತ್ತಾರೆ. ಈಗಾಗಲೇ ಭಟ್ಕಳ ತಾಲೂಕಿನ 15ಕ್ಕೂ ಹೆಚ್ಚಿನ ಕೋವಿಡ್ ಸೋಂಕಿತರ ಶವಸಂಸ್ಕಾರ ಮಾಡಿರುವುದಲ್ಲದೆ ಇವರ ಧೈರ್ಯ ಹಾಗೂ ಸಾಮಾಜಿಕ ಸೇವೆಯನ್ನು ಗಮನಿಸಿ ಭಟ್ಕಳದ ಸಾರ್ವಜನಿಕರು, ಮಾಧ್ಯಮದವರು ಹಾಗೂ ಸಂಘಸಂಸ್ಥೆಗಳು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ. ತಮ್ಮ ಜೀವಭಯದ ನಡುವೆಯು ಇವರ ಧೈರ್ಯದಿಂದ ಕೂಡಿದ ಈ ಸಾಮಾಜಿಕ ಕಾರ್ಯವು ಮುಂದಿನ ದಿನಗಳಲ್ಲಿ ಮೃತ ಸೋಂಕಿತರ ಮನೆಯ ಸದಸ್ಯರು ಸಹ ಶವ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡಿರುವುದಲ್ಲದೇ, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಶಂಸೆಗೆ ಪಾತ್ರವಾಗುವ ಮೂಲಕ ತಾಲೂಕಿನ ಇತರರಿಗೂ ಕೋವಿಡ್ ನ ಮುಂಜಾಗ್ರತಾ ಕ್ರಮವನ್ನು ಅನುಸರಿಕೊಂಡು ಯಾರೂ ಬೇಕಾದರೂ ಶವ ಸಂಸ್ಕಾರ ಮಾಡಬಹುದು ಎಂಬ ಪ್ರೇರಣೆ ನೀಡಿದರ ಪರಿಣಾಮವಾಗಿ ಇಂದು ತಾಲೂಕಿನ ಮೂಲೆ ಮೂಲೆಯಲ್ಲೂ ಯುವಕರು ಹಾಗೂ ಸಂಘಸಂಸ್ಥೆಗಳು ಕೋವಿಡ್ ಸೋಂಕಿತ ವ್ಯಕ್ತಿಯ ಶವ ಸಂಸ್ಕಾರಕ್ಕೆ ಸಜ್ಜಾಗುವಂತೆ ಮಾಡಿದೆ.
ಹೀಗೆ ಸೇವಾಯೆ ಧರ್ಮ, ಸೇವಾ ಹಿ ಸಂಘಟನೆ ಎಂಬ ಸಾಮಾಜಿಕ ಕಳಕಳಿಯೊಂದಿಗೆ ಕೋವಿಡ್ ಸೋಂಕಿತರ ಶವಸಂಸ್ಕಾರದಲ್ಲಿ ಪಾಲ್ಗೊಂಡ ಸದಸ್ಯರನ್ನು ಭಟ್ಕಳ ತಾಲ್ಲೂಕು ಆಡಳಿತದ ವತಿಯಿಂದ ಗುರುತಿಸಿ, 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಭಟ್ಕಳ ತಾಲೂಕು ಕ್ರೀಡಾಂಗಣದಲ್ಲಿ ಭಟ್ಕಳ ಶಾಸಕರು ತಾಲೂಕ ಆಡಳಿತದ ಪರವಾಗಿ ಸನ್ಮಾನಿಸಿ, ಅಭಿನಂದನಾ ಪತ್ರಗಳನ್ನು ನೀಡಿದರು.
Be the first to comment