ಯಾವ ಮಾಹಿತಿಯನ್ನೂ ನೀಡುತ್ತಿಲ್ಲ ಇಲಾಖೆ | ಬೃಹತ್ ಯೋಜನೆಯಲ್ಲಿ ಭಾರೀ ಹಣ ಪೋಲಾಗುವ ಭೀತಿ, ಗ್ರಾಮಸ್ಥರ ಆರೋಪ 32 ಕೋಟಿ ರು. ಖಾರ್ಲೆಂಡ್ ಕಾಮಗಾರಿ ಅಸಮರ್ಪಕ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಕುಮಟಾ

ತಾಲ್ಲೂಕಿನ ಲುಕ್ಕೇರಿಯಿಂದ ಮೊಸಳೆಸಾಲದವರೆಗಿನ 7.8 ಕಿಲೋಮೀಟರ್ ಖಾರ್ಲೇಂಡ್ ರಸ್ತೆ ನಿರ್ಮಾಣ ಅವೈಜ್ಞಾನಿಕತೆಯಿಂದ ಕೂಡಿದೆ. ಇದರಿಂದ ಅನುದಾನ ಸಂಪೂರ್ಣ ಪೋಲಾಗಲಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.2020-21ರ ವಿಶ್ವಬ್ಯಾಂಕ್ ನ ರಾಷ್ಟ್ರೀಯ ಚಂಡಮಾರುತ ಉಪಶಮನ (ಎನ್.ಸಿ.ಆರ್.ಎಂ.ಪಿ) ಯೋಜನೆಯಡಿ ಈ ಕಾಮಗಾರಿ ನಿರ್ಮಿಸಲಾಗುತ್ತಿದೆ. ರಾಮಕೃಷ್ಣ ಹೆಗಡೆ ಅವರ ಸಮಯದಲ್ಲಿ ಮಾಡಿದ ಖಾರ್ಲೆಂಡ್ ಇದು. ಇಲ್ಲಿನ ರಸ್ತೆ ಅಭಿವೃಧ್ಧಿಯಾದರೆ ಮೊಸಳೆಸಾಲದ ಜನರು ಕಡಿಮೆ ಸಮಯದಲ್ಲಿ ಮಾಸೂರು, ಲುಕ್ಕೇರಿ, ಕುಮಟಾ ಭಾಗಗಳಿಗೆ ತೆರಳಬಹುದು. ಗಜನಿ ಕೆಲಸಕ್ಕೆ ನಿತ್ಯ ಓಡಾಡುವವರಿಗೂ ತುಂಬಾ ಅನುಕೂಲ. ಅಘನಾಶಿನಿ ಮುಖ್ಯ ರಸ್ತೆಯಲ್ಲಿ ಹೋದರೆ 15 ಕಿ.ಮೀ. ಅಂತರವಿದೆ. ಈ ಮಾರ್ಗ ಕೇವಲ 7.8 ಕಿ.ಮೀ. ಇದೆ. ಇದಕ್ಕಿಂತ ಮುಖ್ಯವಾಗಿ ಗಜನಿ ಭೂಮಿಯನ್ನು ರಕ್ಷಣೆ ಮಾಡುವುದಾಗಿದೆ.

CHETAN KENDULI

ಈ ಬಗ್ಗೆ ಮಾತನಾಡಿದ ಅಖಿಲ ಭಾರತ ಕಾಂಗ್ರೆಸ್ ಸೇವಾದಳ ದಕ್ಷಿಣ ವಲಯದ ಕಾರ್ಯಕಾರಿಣಿ ಸಮಿತಿ ಸದಸ್ಯ ಹಾಗೂ ಜಿಲ್ಲಾಧ್ಯಕ್ಷ ಆರ್.ಎಚ್.ನಾಯ್ಕ ಅವರು ಈ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ಅತ್ಯಂತ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಎಂಜಿನಿಯರ್ ಗಳು ಕೂಡ ಸರಿಯಾಗಿ ಚಿಂತನೆ ನಡೆಸದೆ ತಪ್ಪಾಗಿ ಕೆಲಸ ಮಾಡಿದ್ದಾರೆ. ಅನುದಾನ ಗಮನಿಸಿದರೆ ಪ್ರತಿ ಕಿಲೋಮೀಟರ್ ರಸ್ತೆಗೂ 4 ಕೋಟಿ ರು.ಗಳಷ್ಟು ಹಣ ಸಿಗುತ್ತಿದೆ. ಬಂಡ್ ಮತ್ತು ಕಾಂಕ್ರೀಟ್ ರಸ್ತೆ ಎರಡನ್ನೂ ಅತ್ಯಂತ ಸುಸಜ್ಜಿತವಾಗಿ ಮಾಡಲು ಅವಕಾಶವಿದೆ. ಆದರೆ, ಈಗ ಇವರು ಕಾಂಕ್ರೀಟ್ ಹಾಕದೆ ಬಂಡ್ ನಿರ್ಮಿಸುತ್ತಿದ್ದು ಕನಿಷ್ಠ ಮೂರು ವರ್ಷಗಳಲ್ಲಿ ಇದು ಹಾಳಾಗಲಿದೆ ಎಂದು ಅಸಮಾಧಾನ ಹೊರಹಾಕಿದರು.ಮಳೆಗಾಲದಲ್ಲಿ ತೀವ್ರ ಪ್ರವಾಹ ಉಂಟಾಗುವ ಕಾರಣ ಸದ್ಯ ಐದು ಅಡಿ ಎತ್ತರವಿರುವ ಈ ರಸ್ತೆಯನ್ನು ಇನ್ನೂ ನಾಲ್ಕು ಅಡಿ ಎತ್ತರ ಮಾಡಿದರೆ ಮಾತ್ರ ಪ್ರಯೋಜನ. ಘಜನಿ ಭೂಮಿ ಸೇರಿದಂತೆ ಸುಮಾರು ನಾಲ್ಕು ಸಾವಿರ ಎಕರೆ ಕೃಷಿ ಪ್ರದೇಶ ಈ ಭಾಗದಲ್ಲಿದೆ. ಮೀನು ಬೆಳೆಯಲು ಅತ್ಯಂತ ಪ್ರಶಸ್ತ ಸ್ಥಳವೂ ಹೌದು. ಕಾಮಗಾರಿ ವೈಜ್ಞಾನಿಕವಾಗಿ ನಡೆದರೆ ಮಾತ್ರ ಈ ಪ್ರದೇಶಗಳಿಗೆ ಅನುಕೂಲವಾಗುತ್ತದೆ. ಇಲ್ಲವಾದರೂ ಯೋಜನೆಯೂ ಅರ್ಥಕಳೆದಕೊಳ್ಳುತ್ತದೆ. ಅನುದಾನ ನೀರಲ್ಲಿ ಹೋಮ ಮಾಡಿದಂತಾಗುತ್ತದೆ ಎಂದು ತಿಳಿಸಿದರು.

ಜೇಬಿಯನ್ ತಂತ್ರಜ್ಞಾನ ಉತ್ತಮವಾದುದಲ್ಲ.
ವಿವಿಧ ಜಾತಿಯ ಮೀನುಗಳು, ವಿಶೇಷ ತಳಿಯ ಭತ್ತ, ಏಡಿ ಮುಂತಾದವುಗಳನ್ನು ಬೆಳೆಯುವ ಇಲ್ಲಿಯ ಗಜನಿ ಪ್ರದೇಶವು ರಾಜ್ಯದಲ್ಲೇ ಅತ್ಯಂತ ವಿಸ್ತಾರ, ವಿಶೇಷತೆ ಹೊಂದಿದೆ. ಆದರೆ, ಅಲ್ಲಲ್ಲಿ ಬಂಡ್ ಗಳು ಒಡೆದು ನೀರು ನುಗ್ಗುವುದು ಸಹಜ ಎಂಬಂತಾಗಿಬಿಟ್ಟಿದೆ. ಇದನ್ನು ತಡೆಯಲು ಕೈಗೊಂಡಿರುವ ಈ ಯೋಜನೆಗೆ ಜೇಬಿಯನ್ ತಂತ್ರಜ್ಞಾನ ಬಳಸಿರುವುದು ಸೂಕ್ತ ಎನಿಸುತ್ತಿಲ್ಲ. ತಾಲ್ಲೂಕಿನಲ್ಲಿ ಹಲವು ಕಡೆ ಈ ತಂತ್ರಜ್ಞಾನ ಬಳಸಿ ಮಾಡಿದ ಕಾಮಗಾರಿಗಳು ಫಲಕಾರಿಯಾಗದೆ ವ್ಯರ್ಥವಾಗಿದೆ ಎಂಬುದು ಆರ್.ಎಚ್.ಅವರ ವಾದವಾಗಿದೆ.ಎಸ್ಟಿಮೇಟ್ ನಲ್ಲಿ ಏನಿದೆ, ಇದಕ್ಕೆ ಎಷ್ಟು ಪ್ರಮಾಣದಲ್ಲಿ ಮಣ್ಣು ಬಳಕೆ ಮಾಡಲಾಗಿದೆ ಎಂಬುದರ ಬಗ್ಗೆ ಸಂಬಂಧಿಸಿದ ಇಲಾಖೆಯವರ ಬಳಿ ಮಾಹಿತಿ ಕೇಳಿದ್ದೆ. ಮೂರು ತಿಂಗಳಾದರೂ ಯಾವುದೇ ಮಾಹಿತಿ ಕೊಟ್ಟಿಲ್ಲ. ಶಾಸಕ ದಿನಕರ ಶೆಟ್ಟಿ ಅವರು ಮುತುವರ್ಜಿವಹಿಸಿ ಸುಸಜ್ಜಿತ ಖಾರ್ಲೆಂಡ್ ನಿರ್ಮಾಣ ಮಾಡಿಸಬೇಕು.– ಆರ್.ಎಚ್.ನಾಯ್ಕ, ಅಖಿಲ ಭಾರತ ಕಾಂಗ್ರೆಸ್ ಸೇವಾದಳ ದಕ್ಷಿಣ ವಲಯದ ಕಾರ್ಯಕಾರಿಣಿ ಸಮಿತಿ ಸದಸ್ಯ.

Be the first to comment

Leave a Reply

Your email address will not be published.


*