ಜಿಲ್ಲಾ ಸುದ್ದಿಗಳು
ದೇವನಹಳ್ಳಿ:
ಪ್ರತಿ ಗ್ರಾಪಂ ಸದಸ್ಯರು ಒಗ್ಗಟ್ಟಿನಿಂದ ಪಕ್ಷಾತೀತವಾಗಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಸಮಗ್ರ ಅಭಿವೃದ್ಧಿಗೊಳಿಸುವ ಪ್ರಯತ್ನ ಮಾಡಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಗಂಗವಾರ ಚೌಡಪ್ಪನಹಳ್ಳಿ ಗ್ರಾಪಂ ಆವರಣದಲ್ಲಿ 2021-22ನೇ ಸಾಲಿನ ಮೊದಲನೇ ಹಂತದ ಗ್ರಾಮ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಪಂ ಸದಸ್ಯರು ತಮ್ಮ ವಾರ್ಡುಗಳಲ್ಲಿನ ಸಮಸ್ಯೆಗಳನ್ನು ಅಧ್ಯಕ್ಷರೊಂದಿಗೆ ಚರ್ಚಿಸಿ, ಸೂಕ್ತ ಪರಿಹಾರವನ್ನು ಒದಗಿಸಿಕೊಳ್ಳಬೇಕು. ಬೇರೆ ಕಡೆ ರಸ್ತೆ ಕಾಮಗಾರಿಯಾದರೆ, ನಮ್ಮ ರಸ್ತೆ ಆಗಿಲ್ಲ ಎಂಬ ಭಾವನೆ ಬಿಡಬೇಕು. ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ವಿಚಾರದಲ್ಲಿ ಎಲ್ಲಾ ಸದಸ್ಯರು ಒಮ್ಮತದ ನಿರ್ಧಾರಗಳನ್ನು ಕೈಗೊಂಡು ಮೂಲ ಸೌಕರ್ಯದಿಂದ ಗ್ರಾಮ ವಂಚಿತವಾಗದಂತೆ ನೋಡಿಕೊಳ್ಳಬೇಕು. ಈ ಭಾಗದಲ್ಲಿ ಸಂಪನ್ಮೂಲ ಕೊರತೆಯಿಂದ ಗ್ರಾಮಗಳ ಅಭಿವೃದ್ಧಿ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಭಾಗವು ಸಂಪೂರ್ಣವಾಗಿ ಕೈಗಾರಿಕೆಗಳನ್ನು ಬರಲಿದ್ದು, ಸಾಕಷ್ಟು ಅಭಿವೃದ್ಧಿಗೊಳ್ಳಲಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಚೈತ್ರ ಮನೋಹರ್ ಮಾತನಾಡಿ, ಮಹಿಳೆಯರು ಸ್ವಾವಲಂಬನೆಯ ಜೀವನ ನಡೆಸಲು ಅನುಕೂಲವಾಗಲು ಶಾಸಕರ ನೇತೃತ್ವದಲ್ಲಿ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಗಿದೆ. ನಿವೇಶನ ರಹಿತರಿಗೆ ಹಕ್ಕುಪತ್ರಗಳನ್ನು ಸಹ ನೀಡಿದ್ದಾರೆ. ಗ್ರಾಪಂ ಚುನಾಯಿತ ಎಲ್ಲಾ ಸದಸ್ಯರನ್ನು ಒಳಗೊಂಡು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಸ್ಪಂಧಿಸುವ ಕೆಲಸವಾಗುತ್ತಿದೆ. ಸಮಸ್ಯೆಗಳು ಕಂಡುಬಂದರೆ ಕೂಡಲೇ ಗ್ರಾಪಂ ಗಮನಕ್ಕೆ ತಂದರೆ ಅದನ್ನು ಪರಿಶೀಲಿಸಿ ಬಗೆಹರಿಸಲಾಗುತ್ತದೆ ಎಂದರು.
ಈ ವೇಳೆಯಲ್ಲಿ ಗ್ರಾಪಂ ಉಪಾಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರಾದ ಅನಿತಾ ಮಂಜುನಾಥ್, ರಾಜಣ್ಣ, ಗೌರಮ್ಮ, ಶಿವರಾಜು, ಕಮಲೇಶ್, ದೇವರಾಜ್, ಮಾಜಿ ಅಧ್ಯಕ್ಷ ಜಯರಾಮೇಗೌಡ, ಚೌಡಪ್ಪನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಮುರಳಿ, ಮಾಜಿ ಅಧ್ಯಕ್ಷ ಶಂಕರ್, ತಾಪಂ ಮಾಜಿ ಸದಸ್ಯ ಮಂಜುನಾಥ್, ಪಿಡಿಒ ಶ್ರೀನಿವಾಸ್ ಮೂರ್ತಿ, ಮುಖಂಡರು, ಗ್ರಾಮಸ್ಥರು ಇದ್ದರು.
Be the first to comment