ಜಿಲ್ಲಾ ಸುದ್ದಿಗಳು
ಭಟ್ಕಳ
ಭಯೋತ್ಪಾದನೆಗೂ ಭಟ್ಕಳಕ್ಕೂ ಅನೇಕ ವರ್ಷಗಳ ನಂಟಿದೆ ಎಂದರೆ ತಪ್ಪಾಗಲಾರದು. ಈ ಹಿಂದೆ 1996ರಲ್ಲಿ ಮೊದಲ ಬಾರಿಗೆ ಭಟ್ಕಳಕ್ಕೆ ಉಗ್ರರ ಸಂಪರ್ಕ ಇರುವುದು ತಿಳಿಯುತ್ತಲೇ ರಾಜ್ಯದ ಜನತೆ ಭಟ್ಕಳದ ಕಡೆಗೆ ಮುಖ ಮಾಡಿದ್ದರು. ನಂತರದ ದಿನಗಳಲ್ಲಿ ಸರಣಿ ಸ್ಫೋಟದ ಸುದ್ದಿ ಬರುತ್ತಲೇ ಭಟ್ಕಳ ಎಂದರೆ ರಾಜ್ಯದ ಜನ ವಕೃದೃಷ್ಟಿಯಿಂದ ನೋಡಲು ಆರಂಭಿಸಿದ್ದಾರೆ.ಪ್ರಥಮವಾಗಿ ಇಂಡಿಯನ್ ಮುಜಾಹಿದ್ದೀನ್ ಪ್ರಮುಖ ಎನ್ನಲಾದ ಅಹಮ್ಮದ್ ಜರ್ರಾರ್ ಸಿದ್ಧಿಬಾಪಾ ಯಾನೆ ಯಾಸೀನ್ ಭಟ್ಕಳ್ ನೇಪಾಳದ ಗಡಿಯಲ್ಲಿ ಬಂಧನವಾಗುತ್ತಲೇ ದೇಶದೆಲ್ಲೆಡೆ ಭಟ್ಕಳದ ಹೆಸರು ಮುನ್ನೆಲೆಗೆ ಬಂದಿತ್ತು. ಈತ ಜರ್ಮನ್ ಬೇಕರಿ ಪ್ರಕರಣದ ಪ್ರಮುಖ ಆರೋಪಿ ಎನ್ನುವುದು ಇಲ್ಲಿ ಉಲ್ಲೇಖನೀಯ.ವಿದ್ಯಾಭ್ಯಾಸ ನಂತರ ಉದ್ಯೋಗಕ್ಕಾಗಿ ತನ್ನ ತಂದೆಯೊಂದಿಗೆ ವಿದೇಶಕ್ಕೆ ಹೋಗಿದ್ದ ಈತನಿಗೆ ಅಲ್ಲಿ ದೊರತಿದ್ದು ಉಗ್ರ ಪಾಠ.ಅಲ್ಲಿ ಪರಿಚಯವಾಗಿದ್ದ ರಿಯಾಜ್ ಭಟ್ಕಳ್ ಈತನಿಗೆ ಭಯೋತ್ಪಾದನೆಯ ಪಾಠ ಮಾಡಿದ್ದು, ನಂತರ ಈತ ಸಂಪೂರ್ಣ ಬದಲಾಗಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಪ್ರಮುಖ ಸ್ಥಾನಕ್ಕೇರಿದ ಎನ್ನುವುದು ತನಿಖೆಯಿಂದ ಹೊರ ಬಂದಿತ್ತು.ಈತನಿಗೆ 2006ರಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ಭಟ್ಕಳದ ವ್ಯಕ್ತಿಯೊಬ್ಬನಿಗೆ ಭಯೋತ್ಪಾದನೆ ಹೆಸರಿನಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸಿರುವುದು ಇದೇ ಮೊದಲು. ಈತ ಭಾರತದಲ್ಲಿನ ವಿಧ್ವಂಸಕ ಕೃತ್ಯಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗಿಯಾಗಿದ್ದಾನೆ ಎನ್ನುವುದು ಪ್ರತಿ ಬಾರಿ ತನಿಖೆಯಲ್ಲಿಯೂ ಹೊರಬೀಳುತ್ತಿತ್ತು.
2010ರ ಜರ್ಮನ್ ಬೇಕರಿ ಸ್ಫೋಟ, 2011ರ ದೆಹಲಿ ಹೈಕೋರ್ಟ್ ಸ್ಫೋಟ, 2011ರಲ್ಲಿ ಮುಂಬೈನಲ್ಲಿ ನಡೆದ ದಾಳಿಯಲ್ಲಿಯೂ ಈತನ ಹೆಸರು ಕೇಳಿಬಂದಿತ್ತು. ಇಷ್ಟೇ ಅಲ್ಲ ದೇಶದ ನಾನಾ ರಾಜ್ಯಗಳಲ್ಲಿ ಈತನ ವಿರುದ್ಧ ಹಲವಾರು ಭಯೋತ್ಪಾದನಾ ಕೇಸ್‌ಗಳು ದಾಖಲಾಗಿದ್ದವು. ದುಬೈ ಮೂಲಕ ಸಿರಿಯಾಕ್ಕೆ ಹೊರಟ ಇಸ್ಮಾಯಿಲ್ ತಂದೆ ಅಬ್ದುರ್ ರವೂಫ್‌ನನ್ನು 2016ರಲ್ಲಿ ಎನ್‌ಐಎ ತಂಡ ಬಂಧಿಸಿದ್ದು ನಂತರ ಭಟ್ಕಳದ ಆತನ ಮನೆಯನ್ನು ಶೋಧಿಸಿದಾಗ ಸ್ಫೋಟಕಕ್ಕೆ ಬಳಸುವ ಅನೇಕ ವಸ್ತುಗಳು ದೊರೆತಿದ್ದವು. ದೇಶದಲ್ಲಿ ಎಲ್ಲೇ ಭಯೋತ್ಪಾದನಾ ಕೃತ್ಯ ಎಸಗಿದರೂ ಅದು ಭಟ್ಕಳಕ್ಕೆ ತಳಕು ಹಾಕುತ್ತಿರುವುದು ಸಾಮಾನ್ಯವಾಗಿದೆ. ಇದಕ್ಕೆ ಕಾರಣ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ರೂವಾರಿಗಳಾದ ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್. ಇವರು ಈ ಸಂಘಟನೆ ಮೂಲಕ ಅನೇಕ ಯುವಕರನ್ನು ಸೆಳೆದುಕೊಂಡು ಭಯೋತ್ಪಾದನಾ ಕೃತ್ಯ ನಡೆಸುತ್ತಿರುವುದರಿಂದ ಪದೇ ಪದೇ ಭಟ್ಕಳದ ಹೆಸರು ಪ್ರಸ್ತಾಪವಾಗುವುದಕ್ಕೆ ಕಾರಣವಾಗಿದೆ.ಇಲ್ಲಿನ ಯುವಕರು ಹಲವು ಉಗ್ರ ಸಂಘಟನೆಗಳೊಂದಿಗೆ ಕೈಜೋಡಿಸಿದ್ದಾರೆ ಎನ್ನುವುದು ಎನ್‌ಐಎ ಆರೋಪವಾಗಿದೆ. ಕುಖ್ಯಾತರಾದ ರಿಯಾಜ್ ಹಾಗೂ ಇಕ್ಬಾಲ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ ಕೂಡಾ ಅವರ ಸಹಚರರೆನ್ನಲಾದ ಹತ್ತಾರು ಜನ ಬಂಧಿತರಾಗುತ್ತಿರುವುದು ಭಟ್ಕಳಕ್ಕೊಂದು ಕಳಂಕವಾಗಿದೆ. ಪ್ರತಿ ಬಾರಿಯೂ ಕೂಡಾ ಭಟ್ಕಳದ ಯುವಕರೇ ಉಗ್ರ ಚಟುವಟಿಕೆಯಲ್ಲಿ ಸಿಕ್ಕಿ ಬೀಳುತ್ತಿರುವುದು ಹಾಗೂ ಹಲವರು ಉತ್ತಮ ವಿದ್ಯಾಭ್ಯಾಸ ಹೊಂದಿದವರೆನ್ನುವುದು ಆತಂಕಕ್ಕೆ ಮೂಲ ಕಾರಣವಾಗಿದೆ.2006ರ ಮುಂಬೈ ಸರಣಿ ಸ್ಫೋಟ, 2008ರ ದೆಹಲಿ ಸ್ಫೋಟ, 2010ರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ, 2010 ಜರ್ಮನ್ ಬೇಕರಿ ಸ್ಫೋಟಗಳಲ್ಲಿ ಭಟ್ಕಳದ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗಿತ್ತು. ಎಲ್ಲಿಯೋ ಉಗ್ರವಾದ ಹಾಗೂ ವಿಧ್ವಂಸಕ ಕೃತ್ಯ ನಡೆದರೆ ಭಟ್ಕಳದ ನೆಲದಲ್ಲಿ ಸಂಚಲನ ಉಂಟಾಗುತ್ತಿತ್ತು. ಅಲ್ಲಿ ಪ್ರಥಮವಾಗಿ ಬರುವುದೇ ಭಟ್ಕಳದ ಹೆಸರು ಎಂದರೆ ತಪ್ಪಾಗಲಾರದು. ಇದಕ್ಕೆ ಕಾರಣ ಇದೇ ರಿಯಾಜ್ ಮತ್ತು ಇಕ್ಬಾಲ್ ಸಹೋದರರು ಹುಟ್ಟು ಹಾಕಿದ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ. ಈಗಾಗಲೇ ಭಟ್ಕಳದ ಹಲವರು ಉಗ್ರವಾದದ ನೆಲೆಯಲ್ಲಿ ಇಲ್ಲವೇ ಉಗ್ರವಾದಕ್ಕೆ ಸಹಕರಿಸಿದ್ದಾರೆನ್ನುವ ನೆಲೆಯಲ್ಲಿ ಬಂಧಿತರಾಗಿದ್ದು, ಇನ್ನೂ ಹಲವರ ಹೆಸರು ಎನ್‌ಐಎ ತಂಡದ ಪಟ್ಟಿಯಲ್ಲಿದೆ. ಝುಫ್ರಿ ಜವ್ವಾರ್ ದಾಮುದಿಯ ಬಂಧನ ಮೂಲಕ ಬಂಧನದ ಸರಣಿಗೆ ಇನ್ನೊಂದು ಸೇರ್ಪಡೆಯಾಗಿದೆ.
Be the first to comment