ರಸ್ತೆ ಸುರಕ್ಷತಾ ಕ್ರಮಗಳ ಉಲ್ಲಂಘನೆ ಅಪಘಾತಕ್ಕೆ ಕಾರಣವಾಗಬಹುದು* ಎಚ್ಚರ ತಪ್ಪಿದರೆ ಸಾವು ಸಂಭವಿಸುತ್ತದೆ, ಕಡ್ಡಾಯವಾಗಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಬೇಕು : ಆಶ್ಫಾಕ್ ಅಹಮದ್

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಪ್ರತಿ ಜನರು ಮನೆಯಿಂದ ಹೊರಬರಬಂದು ತಮ್ಮ ವಾಹನದಲ್ಲಿ ಸಂಚರಿಸುವ ಮುನ್ನಾ ರಸ್ತೆ ಸುರಕ್ಷತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಕಡ್ಡಾಯವಾಗಿ ಪಾಲಿಸಬೇಕು ಎಂದು ಆಲ್ ಇಂಡಿಯ ಫೆಡರೇಷನ್ ಆಫ್ ಮೋಟಾರ್ ವೆಹಿಕಲ್ ವಿಭಾಗ ಮತ್ತು ತಂತ್ರಜ್ಞಾನಾಧಿಕಾರಿಗಳ ಅಸೋಸಿಯೇಷನ್‌ನ ವ್ಯವಸ್ಥಾಪಕ ಆಶ್ಫಾಕ್ ಅಹಮದ್ ತಿಳಿಸಿದರು.ಪಟ್ಟಣದ ರಾಣಿಕ್ರಾಸ್ ಬಳಿಯ ಎಆರ್‌ಟಿಒ ಕಚೇರಿ ಆವರಣದಲ್ಲಿ ಬೆಂಗಳೂರು ಆಲ್ ಇಂಡಿಯ ಫೆಡರೇಷನ್ ಆಫ್ ಮೋಟಾರ್ ವೆಹಿಕಲ್ ವಿಭಾಗ ಮತ್ತು ತಂತ್ರಜ್ಞಾನಾಧಿಕಾರಿಗಳ ಅಸೋಸಿಯೇಷನ್ ಮತ್ತು ದೇವನಹಳ್ಳಿ ಪ್ರಾದೇಶಿಕ ಸಾರಿಗೆ ವತಿಯಿಂದ ರಸ್ತೆ ಸುರಕ್ಷತಾ ರಾಯಭಾರಿ ತರಬೇತಿ ಮತ್ತು ಹೆಲ್ಮೆಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2019-20ರಲ್ಲಿ 1ಲಕ್ಷ 50ಸಾವಿರ ಜನರು ಸಾವನ್ನಪ್ಪಿದ್ದಾರೆ. ಅಂದರೆ, ಎಷ್ಟು ಸೀರಿಯಸ್ ಇದೆ ಎಂಬುವುದನ್ನು ಯೋಚನೆ ಮಾಡಬೇಕಾಗುತ್ತದೆ. ದಿನನಿತ್ಯದ ಒತ್ತಡದ ಜೀವನದಲ್ಲಿ ರಸ್ತೆಯಲ್ಲಿ ಪ್ರಯಾಣಿಸುವ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಬಳಸದೆ ಸಾಕಷ್ಟು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಹೆಲ್ಮೆಟ್ ಬಳಸಿದರೆ ಸಾವನ್ನು ತಡೆಯಬಹುದು. ರಸ್ತೆ ಅಪಘಾತದಲ್ಲಿ ಎಷ್ಟೋ ಮಂದಿ ಕೈ-ಕಾಲು ಕಳೆದುಕೊಂಡು, ಪ್ರಾಣಗಳನ್ನು ತ್ಯಜಿಸಿದ್ದಾರೆ. ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಅಪಘಾತಕ್ಕೀಡಾದ ಎಷ್ಟೋ ಮಂದಿ ಇನ್ನೂ ಸಹ ಪ್ರಜ್ಞೆಯಿಲ್ಲದೆ, ಬೆಡ್‌ಗೆ ದಾಸರಾಗಿದ್ದಾರೆ ಎಂದರು.

CHETAN KENDULI

ವಿಶ್ವದಲ್ಲಿಯೇ ಭಾರತ ದೇಶದಲ್ಲಿ ಅಪಘಾತಗಳು ಸಂಭವಿಸುವುದರಲ್ಲಿ ಮೊದಲ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಪ್ರತಿ ನಿಮಿಷಕ್ಕೆ 1 ಅಪಘಾತವಾಗುವ ವರದಿಯಾಗಿದೆ. 3-4ನಿಮಿಷದಲ್ಲಿ ಅಪಘಾತದಲ್ಲಿ 1 ಸಾವು, ಪ್ರತಿ ಗಂಟೆಗೆ 20 ಜನರು ಸಾಯುತ್ತಿದ್ದಾರೆ. ಕೇವಲ ಒಂದು ನಿಮಿಷ ರಸ್ತೆ ಸುರಕ್ಷತಾ ನಿಯಮಗಳನ್ನು ನೆನಪಿಸಿಕೊಂಡು ತಮ್ಮ ಜೀವಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಿದರೆ ಯಾವುದೇ ಅನಾಹುತ ಆಗುವುದಿಲ್ಲ ಎಂದು ಹೇಳಿದರು.ಪ್ರಾದೇಶಿಕ ಸಾರಿಗೆ ಸಹಾಯಕ ಅಧಿಕಾರಿ ಪಿ.ಉಮೇಶ್ ಮಾತನಾಡಿ, ಕುಟುಂಬಕ್ಕೆ ಆಧಾರಸ್ತಂಭಗಳಾಗಿರುವವರು ಕಾರು ಚಾಲನೆ ಮಾಡುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ಮತ್ತು ಚಾಲನೆ ಸಂದರ್ಭದಲ್ಲಿ ಮಿರರ್ ಗಮನಿಸಬೇಕು. ಮೊಬೈಲ್ ಬಳಸುವುದು, ಇತರೆ ಕೆಲಸಗಳನ್ನು ಮಾಡುವುದು ಮಾಡಬಾರದು. ಮೋಟಾರು ಬೈಕ್ ಚಲಾಯಿಸುವಾಗ ಚಾಲಕ ಮತ್ತು ಹಿಂಬದಿಯಲ್ಲಿ ಕುಳಿತಿರುವವರು ಇಬ್ಬರು ಸಹ ಹೆಲ್ಮೆಟ್ ಬಳಸಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ೪ ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯವಾಗಿದೆ. ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡಿರಬೇಕು. ರಸ್ತೆಯಲ್ಲಿ ವಾಹನವನ್ನು ಇಂತಿಷ್ಟೇ ವೇಗದಲ್ಲಿ ಚಲಾಯಿಸಬೇಕು. ಅತೀ ವೇಗ ಅಪಘಾತಕ್ಕೆ ಕಾರಣವಾಗಬಹುದು. ರಸ್ತೆಯ ಪಕ್ಕದಲ್ಲಿ ಅಳವಡಿಸಿರುವ ನಾಮಫಲಕಗಳನ್ನು ನೋಡಿಯೂ ಸಹ ಎಡವಬಾರದು ಎಂದು ಮಾಹಿತಿ ನೀಡಿದರು.ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್ ಮುನಿರಾಜು ಮಾತನಾಡಿ, ದೇವನಹಳ್ಳಿಯಲ್ಲಿ ಹೆಲ್ಮೆಟ್ ಧರಿಸಿ ಎಂದು ಪ್ರತಿ ದಿನ ಸುಮಾರು 600 ಜನರಿಗೆ ಮಾಹಿತಿ ನೀಡಿ, 60-70 ಜನಕ್ಕೆ ದಂಡ ಕಟ್ಟಿಸಿದರೂ ಸಹ ಹೆಲ್ಮೆಟ್ ಧರಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ನಾವು ಹೇಳುವುದು ಅವರ ಒಳ್ಳೆಯದಕ್ಕೆ, ಹೆಲ್ಮೆಟ್ ಧರಿಸಿದರೆ ಅವರ ಪ್ರಾಣ ಉಳಿಯುತ್ತದೆ. ಇದುವರೆಗೆ ಶೇ.50ರಷ್ಟು ಜನರು ಹೆಲ್ಮೆಟ್ ಧರಿಸದೆ ಸಾವನ್ನಪ್ಪಿರುತ್ತಾರೆ. 2020-21ರಲ್ಲಿ 14 ಜನ ಸಾವನ್ನಪ್ಪಿದ್ದಾರೆ. 117 ಜನರು ಗಾಯಾಳು ಆಗಿದ್ದಾರೆ. 8 ಜನ ಹೆಲ್ಮೆಟ್ ಇಲ್ಲದೆ ಸಾವನ್ನಪ್ಪಿದ್ದಾರೆ. ಈ ಅಂಕಿ ಅಂಶಗಳಲ್ಲಿ ಯಾರೂ ಸಹ ಸೇರಿಕೊಳ್ಳುವುದು ಬೇಡ. ಕಡ್ಡಾಯವಾಗಿ ವಾಹನ ಚಲಾಯಿಸುವ ಮುನ್ನಾ ಮುನ್ನಚ್ಚರಿಕಾ ಕ್ರಮಗಳನ್ನು ಪಾಲಿಸಿದರೆ ಯಾರು ಸಹ ಅಪಘಾತದಲ್ಲಿ ಸಾವು ಸಂಭವಿಸುವುದಿಲ್ಲ ಎಂದು ಹೇಳಿದರು.ಈ ವೇಳೆ ಎಆರ್‌ಟಿಒ ಹಿರಿಯ ಮೋಟಾರು ವಾಹನ ನಿರೀಕ್ಷಕ ನರಸಿಂಹಮೂರ್ತಿ, ಕಿರಿಯ ನಿರೀಕ್ಷಕ ರಾಕೇಶ್, ಎಆರ್‌ಟಿಒ ಸಿಬ್ಬಂದಿ, ಮತ್ತಿತರರು ಇದ್ದರು.

Be the first to comment

Leave a Reply

Your email address will not be published.


*