ರಾಜ್ಯ ಸುದ್ದಿಗಳು
ದೇವನಹಳ್ಳಿ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ತನ್ನ ಕೃಷಿ ಕಾಯ್ದೆಗಳ ವಾಪಸ್ಸು ಪಡೆಯುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪಿ 500 ಕ್ಕೂ ಹೆಚ್ಚು ರೈತ ಪರ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಭಾರತ್ ಬಂದ್ ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತ ಸಂಘಟನೆಗಳ ಮುಖಂಡರು ಮಿನಿವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರಗಳು ಸಲ್ಲಿಸಿದರು. ಭಾರತ್ ಬಂದ್ ಹಿನ್ನೆಲೆಯಲ್ಲಿ ಒಂದು ವಾರದಿಂದ ಭರದ ಸಿದ್ಧತೆ ನಡೆಸಿದ್ದ ರೈತ ಸಂಘಟನೆಗಳು, ಸೋಮವಾರ ಬೆಳಿಗ್ಗೆ ಬೀದಿಗಿಳಿದು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳು ಹಾಗೂ ಅವೈಜ್ಞಾನಿಕವಾದ ಕೃಷಿ ಕಾಯಿದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳು ಕೂಗಿದರು.ಸಂಯುಕ್ತ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರಮುಖ ರೈತಪರ ಸಂಘಟನೆಗಳು ಕೇಂದ್ರದ ಕೃಷಿ ಕಾಯಿದೆಗಳ ರದ್ಧತಿಗೆ ಆಗ್ರಹಿಸಿ ಬಂದ್ ಗೆ ಬೆಂಬಲ ನೀಡಿ, ಬೀದಿಗಿಳಿದಿದ್ದವು. ಪ್ರಮುಖ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರಗಳ ನೀತಿಗಳ ವಿರುದ್ಧ ಘೋಷಣೆಗಳು ಕೂಗಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ಕೇಂದ್ರ ಸರ್ಕಾರ ಈ ದೇಶದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ರೈತ ವಿರೋಧಿಯಾಗಿ ಕೆಲಸ ಮಾಡುತ್ತಿದ್ದು, ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದಿದೆ. ಅದನ್ನು ರದ್ದುಗೊಳಿಸುವ ತನಕ ನಮ್ಮ ಹೋರಾಟ ಮುಂದುವರೆಯಲಿದೆ. ಈ ದೇಶದಲ್ಲಿ ಕಾರ್ಫೋರೇಟ್ ಕಂಪನಿಗಳಿಗೆ ಕೊಡುವಷ್ಟು ಮಹತ್ವವನ್ನು ರೈತರಿಗೆ ನೀಡುತ್ತಿಲ್ಲ, ರೈತರನ್ನು ಕಡೆಗಣಿಸಲಾಗುತ್ತಿದೆ. 10 ತಿಂಗಳಿನಿಂದ ರೈತರನ್ನು ದೇಶದ ರಾಜಧಾನಿಗೆ ಬಿಟ್ಟುಕೊಂಡಿಲ್ಲ. ಇದು ಸಂವಿಧಾನ ವಿರೋಧಿ ನೀತಿಯಾಗಿದೆ. ಒಂದು ರೀತಿಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು, ಈ ದೇಶದಲ್ಲಿ ನಾವು ಹೇಳಿದ್ದೇ ನಡೆಯಬೇಕು ಎನ್ನುವಂತೆ ವರ್ತನೆ ಮಾಡುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದರು. ಕನ್ನಡಪರ ಹೋರಾಟಗಾರ ಅಗಲಗುರ್ಕಿಚಲಪತಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಈ ದೇಶಕ್ಕೆ ಅನ್ನಕೊಡುವಂತಹ ರೈತರ ಬೆನ್ನುಮೂಳೆ ಮುರಿಯುವ ಕಾರ್ಯವನ್ನು ನಿರಾಯಾಸವಾಗಿ ಮಾಡುತ್ತಿವೆ. ದೇಶದ ರೈಲ್ವೆ, ಜೀವ ವಿಮಾ ನಿಗಮ ಸೇರಿದಂತೆ ಬಹುತೇಕ ಎಲ್ಲವನ್ನೂ ಖಾಸಗೀಕರಣ ಮಾಡುವ ಮೂಲಕ ದೇಶದ ಜನರನ್ನು ಕಾರ್ಫೋರೇಟ್ ಕಂಪನಿಗಳಿಗೆ ಗುಲಾಮರನ್ನಾಗಿ ಮಾಡುತ್ತಿದ್ದರೂ ಕೂಡಾ ಪ್ರಶ್ನೆ ಮಾಡುವಂತಹವರು ಇಲ್ಲವಾಗಿದ್ದಾರೆ. ಜನರ ಧ್ವನಿಯನ್ನು ಅಡಗಿಸಲಾಗುತ್ತಿದೆ. ಬಿಜೆಪಿ ಸರ್ಕಾರದ ಜನವಿರೋಧಿ, ರೈತ ವಿರೋಧಿ ನೀತಿಗಳನ್ನು ಪ್ರಶ್ನಿಸಿದರೆ ಅವರಿಗೆ ದೇಶದ್ರೋಹಿಗಳು ಎನ್ನುವ ಪಟ್ಟವನ್ನು ಕಟ್ಟುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿನ ರೈತರು, ಬಡವರು, ಕೃಷಿ ಕೂಲಿ ಕಾರ್ಮಿಕರು ಅನ್ನಕ್ಕಾಗಿ ಗೂಳೆ ಹೊರಡಬೇಕಾದಂತಹ ದುಸ್ಥಿತಿ ಬರಲಿದೆ. ಪ್ರತಿಯೊಬ್ಬರೂ ಪ್ರಶ್ನೆ ಮಾಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ವಕೀಲ ಸಿದ್ಧಾರ್ಥ ಮಾತನಾಡಿ, ಖಾಸಗೀಕರಣ ಮಾಡಲು ಹೊರಟಿದೆ. ಜೀವವಿಮಾ ನಿಗಮವನ್ನೂ ಖಾಸಗೀಕರಣ ಮಾಡುತ್ತಿದೆ. ಪೆಟ್ರೋಲಿಯಂ ಸೇರಿದಂತೆ ಆದಾಯದ ಮೂಲಗಳನ್ನು ಖಾಸಗೀಕರಣ ಮಾಡುತ್ತಿದ್ದು, ದೇಶವನ್ನು ಬೇರೆ ದೇಶಗಳ ಬಳಿಯಲ್ಲಿ ಗಿರವಿ ಇಡುತ್ತಿದೆ. 10 ತಿಂಗಳಿನಿಂದ ಧರಣಿ ಮಾಡುತ್ತಿದ್ದರೂ ರೈತರ ಕೂಗನ್ನು ಆಲಿಸುತ್ತಿಲ್ಲ. ರೈತರನ್ನು ಕಡೆಗಣಿಸಲಾಗಿದೆ. ಭಾರತ್ ಬಂದ್ ಗೆ ರೈತರು ಭಾಗವಹಿಸದಂತೆ ತಡೆಯುವಂತಹ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರೂ ಕೂಡಾ ನೈತಿಕವಾಗಿ ಸಾಕಷ್ಟು ಸಂಘಟನೆಗಳು ಈ ಬಂದ್ ಗೆ ಬೆಂಬಲ ನೀಡಿವೆ ಎಂದರು. ಜಿ.ಜಿ.ಹಳ್ಳಿ ನಾರಾಯಣಸ್ವಾಮಿ, ಚಂದ್ರಶೇಖರ್, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಖುದ್ದೂಸ್ ಸಾಬ್ , ಗಾರೇ ರವಿಕುಮಾರ್, ಭೀಮ ಶಕ್ತಿ ರಾಜ್ಯಾಧ್ಯಕ್ಷ ವೆಂಕಟೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಹರೀಶ್, ಕನ್ನಮಂಗಲ ನಾಗೇಶ್, ಉಪಾಧ್ಯಕ್ಷ ರಾಮಣ್ಣ, ಕಾರಹಳ್ಳಿ ಶ್ರೀನಿವಾಸ್, ಮಹಿಳಾ ಹೋರಾಟಗಾರರಾದ ಸುಮಿತ್ರಮ್ಮ, ಪುಷ್ಪ, ಯುವರೈತ ಸಂಘದ ಮುನಿನಾರಾಯಣಪ್ಪ, ಶಶಿಕುಮಾರ್ ಚಿಕ್ಕ ಓಬದೇನಹಳ್ಳಿ ರಾಮಾಂಜಿನಪ್ಪ ಹಾಜರಿದ್ದರು.
Be the first to comment