ರಾಜ್ಯ ಸುದ್ದಿಗಳು
ದೇವನಹಳ್ಳಿ
ಒಂದು ಗ್ರಾಮದಲ್ಲಿ ಕೆರೆ-ಕುಂಟೆಗಳ ಅಭಿವೃದ್ಧಿಯ ಜೊತೆಯಲ್ಲಿ ಕೆರೆಯಂಗಳದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಪೋಷಿಸಿದರೆ, ಸುತ್ತಮುತ್ತಲಿನ ವಾತಾವರಣ ಹಚ್ಛಹಸುರಿನಿಂದ ಕೂಡಿರಲು ಸಾಧ್ಯ ಎಂದು ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ಯೋಜನಾಧಿಕಾರಿ ಸತೀಶ್ ನಾಯಕ್ ತಿಳಿಸಿದರು.ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಕೆರೆಯ ಏರಿಯ ಮೇಲೆ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಗಿಡ ನಾಟಿ ವಿನೂತನ ಕಾರ್ಯಕ್ರಮದಲ್ಲಿ ಗಿಡಕ್ಕೆ ನೆಡುವುದರ ಮೂಲಕ ಅವರು ಮಾತನಾಡಿದರು. ನಮ್ಮ ಸಂಸ್ಥೆ ಶ್ರೀ ಕ್ಷೇತ್ರ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಮತ್ತು ದಂಪಿಗಳ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ನಮ್ಮೂರ ನಮ್ಮ ಕೆರೆ ಕಾರ್ಯಕ್ರಮವನ್ನು ಮಾಡುವುದರ ಮೂಲಕ ೨೯೩ ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ೬೩ ಕೆರೆಗಳನ್ನು ಸರಕಾರದ ಕೆರೆ ಸಂಜೀವಿನಿ ಮೂಲಕ ಹೂಳೆತ್ತಲಾಗಿದೆ. ರಾಜ್ಯದ ಸುಮಾರು ೩೫೬ ಕೆರೆಗಳಿಗೆ ಅಭಿವೃದ್ಧಿ ಕಾಯಕಲ್ಪ ಕೊಡಲಾಗಿದೆ. ಕೆರೆಗಳ ಸುತ್ತ ಅರಣ್ಯೀಕರಣಗೊಳಿಸುವ ಉದ್ದೇಶದಿಂದ ಕೆರೆಯಂಗಳದಲ್ಲಿ ಗಿಡನಾಟಿ ಎಂಬ ಕಾರ್ಯಕ್ರಮವನ್ನು ಕೈಗೆತ್ತಿಕೊಂಡು ಸಾವಿರಾರು ಗೆಡಗಳನ್ನು ನೆಡಲಾಗುತ್ತಿದೆ. ಇದರಿಂದ ಪ್ರಾಣಿ, ಪಕ್ಷಿ, ಜನ, ಜಾನುವಾರುಗಳಿಗೆ ಹಣ್ಣು, ಹೂವು, ಮೇವು, ನೆರಳು ದೊರೆಯಲಿದ್ದು, ಇದಕ್ಕೆ ಗ್ರಾಪಂ ಮತ್ತು ಗ್ರಾಮಸ್ಥರ ಸಹಕಾರ ದೊರೆತಿದ್ದು, ಗ್ರಾಮದಲ್ಲಿ ಸುಂದರ ವಾತಾವರಣ ಸೃಷ್ಠಿಯಾಗಲು ಸಹಕಾರಿಯಾಗಿದೆ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಶ್ರೀ ಕ್ಷೇತ್ರದ ಮೂಲಕ ಸುಮಾರು ೫೦ ರಿಂದ ೧೦೦ ವಿವಿಧ ಹಣ್ಣಿನ ಗಿಡಗಳನ್ನು ಕೆರೆಯಂಗಳದಲ್ಲಿ ನೆಡಲಾಗಿದೆ. ಪ್ರಕೃತಿ ಬಹಳಷ್ಟು ವಿಕೋಪದಲ್ಲಿದೆ. ಪ್ರಕೃತಿಯನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಕೋವಿಡ್-೧೯ ಮಹಾಮಾರಿ ಇಡೀ ಜನ ಜೀವನ ಅಸ್ತವ್ಯಸ್ತವನ್ನಾಗಿ ಮಾಡಿದೆ. ಗಿಡಗಳ ಮೌಲ್ಯ ಏನೆಂಬುವುದು ಅರಿವು ಇರಬೇಕು. ಗಿಡಗಳು ಹೆಚ್ಚು ನೆಟ್ಟು ಪೋಷಿಸಿದರೆ, ಉತ್ತಮ ಆಮ್ಲಜನಕ ಸಿಗುವುದರ ಜತೆಗೆ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಹಕಾರಿಯಾಗಲಿದೆ. ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡು ಎಲ್ಲರನ್ನೂ ಸೇರಿಸಿಕೊಂಡು ಗಿಡಗಳನ್ನು ನೆಡುವ ಕಾರ್ಯವನ್ನು ಮಾಡಲಾಗಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ವಿಶ್ವನಾಥಪುರ ಗ್ರಾಪಂ ಅಧ್ಯಕ್ಷೆ ಮಂಗಳಾನಾರಾಯಣಸ್ವಾಮಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಅಕ್ಷತಾರೈ, ವಿಪತ್ತು ನಿರ್ವಹಣ ಘಟಕದ ಜಿಲ್ಲಾ ಸಂಯೋಜಕ ನರಸಿಂಹರಾಜು, ಕೃಷಿ ಅಧಿಕಾರಿ ಮನೋಹರ್, ವಲಯ ಮೇಲ್ವೀಚಾರಕ ಧನಂಜಯ್, ಮುಖಂಡರಾದ ಗುರುಪ್ರಸಾದ್, ವಸಂತ್‌ಕುಮಾರ್, ನಾರಾಯಣಸ್ವಾಮಿ, ಸೇವಾಪ್ರತಿನಿಧಿಗಳಾದ ಗೀತಾ, ಮುನಿಲಕ್ಷ್ಮಮ್ಮ, ಮುನಿರತ್ನಮ್ಮ, ಅಂಬಿಕಾ, ಊರಿನ ಗ್ರಾಮಸ್ಥರು ಇದ್ದರು.
Be the first to comment