ರಾಜ್ಯ ಸುದ್ದಿಗಳು
ಕಾರವಾರ:
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹವುಂಟಾಗಿ ಸುಮಾರು 737.54 ಕೋಟಿ ರೂ.ಗಳಷ್ಟು ಹಾನಿಯಾಗಿದೆ ಎಂದು ಜಿಲ್ಲಾಡಳಿತ ವರದಿ ನೀಡಿದೆ.
ಸಿಎಂ ಭೇಟಿಯ ನಂತರ ಜಿಲ್ಲೆಯಲ್ಲಿ ಉಂಟಾದ ಹಾನಿಯ ಕುರಿತು ಮಾಹಿತಿ ಕಲೆಹಾಕಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವರದಿಯ ಪ್ರಕಾರ ಜಿಲ್ಲೆಯಲ್ಲಿ ಪ್ರವಾಹದಿಂದ ಸುಮಾರು 1123.28 ಹೆಕ್ಟೇರ್ ಕೃಷಿಭೂಮಿ ಹಾಗೂ 562.65 ಹೆಕ್ಟೇರ್ ತೋಟಗಾರಿಕಾ ಭೂಮಿಗೆ ಹಾನಿಯಾಗಿದೆ. ಅಲ್ಲದೇ ಶಿರಸಿಯಲ್ಲಿ 9, ಜೊಯಿಡಾದಲ್ಲಿ 2 ಹಾಗೂ ಯಲ್ಲಾಪುರದದಲ್ಲಿ 4 ಕಡೆಗಳಲ್ಲಿ ಸೇರಿದಂತೆ ಒಟ್ಟು 15 ಕಡೆ ಗುಡ್ಡ ಕುಸಿತ ಸಂಭವಿಸಿದೆ.
8,984 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, 310 ಮನೆಗಳು ಪೂರ್ಣ ಕುಸಿದು ಬಿದ್ದಿವೆ. 348 ಮನೆಗಳು ತೀವ್ರವಾಗಿ ಹಾಗೂ 816 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 95 ಶಾಲೆಗಳು, 33 ಅಂಗನವಾಡಿ, 4 ಸಮುದಾಯ ಭವನ ಹಾಗೂ 3 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾನಿಯಾಗಿದ್ದು ಒಟ್ಟೂ 4.93ಕೋಟಿ ನಷ್ಟವಾಗಿದೆ.
202.65ಕಿಮಿ ರಾಜ್ಯ ಹೆದ್ದಾರಿ, 576.77 ಕಿಮಿ ಜಿಲ್ಲಾ ರಸ್ತೆ , 627ಕಿಮಿ ಗ್ರಾಮೀಣ ರಸ್ತೆ ಹಾಗೂ ನಗರಪ್ರದೇಶದ 43.41ಕಿಮಿ ರಸ್ತೆ ಹಾನಿಗೊಳಗಾಗಿದ್ದು 387.80 ಕೋಟಿ ನಷ್ಟವಾಗಿದೆ. ಅಲ್ಲದೇ ರಾಷ್ಟ್ರಿಯ ಹೆದ್ದಾರಿಯಲ್ಲಿ 95 ಕೋಟಿಯಷ್ಟು ಹಾನಿಯಾಗಿದೆ.
ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ 59 ಸೇತುವೆಗಳಿಗೆ ಹಾನಿಯಾಗಿದ್ದು, ಮೊತ್ತ 10.37 ಕೋಟಿಯಷ್ಟು ಅಂದಾಜು ನಷ್ಟವಾಗಿದೆ..ಲೋಕೋಪಯೋಗಿ ಇಲಾಖೆಗೆ ಸೇರಿದ 247 ಸೇತುವೆಗಳಿಗೆ ನೆರೆಯಿಂದ ಹಾನಿಯಾಗಿದ್ದು ಅಂದಾಜು 139.46 ಕೋಟಿ ರೂ. ನಷ್ಟವಾಗಿದೆ.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 74, ನಗರಾಭಿವೃದ್ಧಿ ಇಲಾಖೆಯ 1 ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕುಡಿಯುವ ನೀರಿನ ಯೋಜನೆಗಳಿಗೆ ಹಾನಿಹಾಗಿದ್ದು 5.54 ಕೋಟಿ ನಷ್ಟವಾಗಿದೆ.ಹಾಗೂ 53 ಕಾಲುವೆ, 160 ಬಾಂದಾರು, 16 ಏತ ನೀರಾವರಿ ಯೋಜನೆಗೆ ಪ್ರವಾಹದಿಂದಾಗಿ ಹಾನಿಯುಂಟಾಗಿ 89.92 ಕೋಟಿ ನಷ್ಟವಾಗಿದೆ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ 737.54ಕೋಟಿ ರೂಪಾಯಿಗಳಷ್ಟು ರಸ್ತೆ, ಮನೆ, ಸೇತುವೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಹಾನಿ ಉಂಟಾಗಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
Be the first to comment