ರಾಜ್ಯ ಸುದ್ದಿಗಳು
ದೇವನಹಳ್ಳಿ:
ಒಂದು ಗ್ರಾಮವೆಂದರೆ, ಅಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪ, ಶಾಲೆ, ಚರಂಡಿ, ರಸ್ತೆ, ವಿದ್ಯುತ್, ಶೌಚಾಲಯ ಮತ್ತು ಸ್ಮಶಾನ ಇರಲೇ ಬೇಕಾಗುತ್ತದೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಸುಮಾರು ವರ್ಷಗಳಿಂದಲೂ ಸ್ಮಶಾನವಿಲ್ಲದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಕೂಗಳತೆ ದೂರದಲ್ಲಿಯೇ ಇರುವ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ದಿನ್ನೇ ಸೋಲೂರು ಗ್ರಾಮದಲ್ಲಿ ಸುಮಾರು 150ಕ್ಕೂ ಹೆಚ್ಚು ಪರಿಶಿಷ್ಟ ಪಂಗಡಕ್ಕೆ ಸೇರಿರುವ ಕುಟುಂಬಗಳು ವಾಸವಾಗಿದ್ದು, ಇದುವರೆಗೂ ಸರಕಾರದಿಂದ ಸ್ಮಶಾನ ಜಾಗ ಗುರ್ತಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಗ್ರಾಮಗಳ ಅಭಿವೃದ್ಧಿಯಾದರೆ, ದೇಶ ಅಭಿವೃದ್ಧಿಯಾಗುತ್ತದೆ ಎಂಬ ಗಾಂಧಿ ಕನಸಿಗೆ ತದ್ವಿರುದ್ಧವಾಗಿ ಗ್ರಾಮದಲ್ಲಿ ಸ್ಮಶಾನವೇ ಇಲ್ಲವಂತೆ ಆಗಿದೆ.
ಪ್ರತಿ ಗ್ರಾಮಕ್ಕೆ ಸ್ಮಶಾನ ಗುರ್ತಿಸುವ ಯೋಜನೆ ಸರಕಾರ ಜಾರಿಗೊಳಿಸಿದ್ದರೂ ಸಹ ಕೆಲವು ಗ್ರಾಮಗಳಲ್ಲಿ ರುಧ್ರಭೂಮಿಯೇ ಇಲ್ಲ. ಸರಕಾರ ಗೋಮಾಳ ಜಾಗದಲ್ಲಿ ಒತ್ತುವರಿಯಾಗಿ ಬಲಾಢ್ಯರು ಆಕ್ರಮಿಸಿಕೊಂಡಿದ್ದಾರೆ. ಈಗಾಗಲೇ ಸುಮಾರು ಸರ್ವೆ ನಂ.132ರಲ್ಲಿ ಸರಕಾರಿ ಗೋಮಾಳದ ಜಾಗವಿದ್ದು, ಅದರಲ್ಲಿ ಈಗಾಗಲೇ ಸುಮಾರು ಜನರಿಗೆ ಭೂ-ಮಂಜೂರಾತಿಯಲ್ಲಿ ಜಮೀನು ಮಂಜೂರಾಗಿರುತ್ತದೆ. ಸುಮಾರು 20 ಎಕರೆಗೂ ಹೆಚ್ಚು ಜಾಗ ಒತ್ತುವರಿಯಾಗಿರುತ್ತದೆ. ಸರಕಾರಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರೂ ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಈ ಗ್ರಾಮದಲ್ಲಿ ವಾಲ್ಮೀಕಿ ಜನಾಂಗದವರೇ ಹೆಚ್ಚಾಗಿರುವುದರಿಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಗಮನಕ್ಕೂ ತರಲಾಗಿತ್ತು ಹಾಗೂ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಗಮನಕ್ಕೂ ಸಹ ಈಗಾಗಲೇ ತರಲಾಗಿದೆ. ಇದುವರೆಗೂ ಈ ಬಗ್ಗೆ ಯಾರು ಕಿಂಚಿತ್ತು ಕಾಳಜಿ ತೋರುತ್ತಿಲ್ಲ. ಗ್ರಾಮದಲ್ಲಿ ಯಾರಾದರೂ ಸಾವನ್ನಪ್ಪಿದರೆ, ಅವರವರ ಸ್ವಂತ ಜಾಗದಲ್ಲಿಯೇ ದಫನು ಮಾಡುವಂತೆ ಆಗಿದೆ. ಸ್ವಂತ ಜಾಗವಿಲ್ಲದವರು ಅವರಿವರ ಕೈಕಾಲು ಹಿಡಿದು ದಫನು ಮಾಡಬೇಕಾಗುತ್ತದೆ. ಮತ್ತೆ ಕೆಲವರು ಕೆರೆಯಂಗಳದಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸುವ ಸಂದಿಗ್ಧ ಪರಿಸ್ಥಿತಿ ಗ್ರಾಮಕ್ಕೆ ಬಂದೊದಗಿದೆ ಎಂಬುವುದು ಗ್ರಾಮದ ವಾಸ್ತವವಾಗಿದೆ.
ಸುಮಾರು 70 ವರ್ಷದಿಂದ ಸ್ವಂತ ಜಾಗದಲ್ಲಿ ಯಾರಾದರೂ ಸಾವನ್ನಪ್ಪಿದರೆ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಈಗಾಗಲೇ ಸರಕಾರಕ್ಕೆ ಮನವಿಮಾಡಲಾಗಿದೆ. ದಿನ್ನೇ ಸೋಲೂರು ಗ್ರಾಮದಲ್ಲಿ ಸುಮಾರು 150 ಪ.ಜಾ. ಕುಟುಂಬಗಳ ಮನೆಗಳಿವೆ. ಸರಕಾರದ ಜಾಗ ಮಂಜೂರು ಮಾಡುವಂತೆ ಡಿಸಿ ಮತ್ತು ತಹಶೀಲ್ದಾರ್ ಅವರಿಗೆ ಮನವಿ ಮಾಡಲಾಗಿದೆ. ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ. 5 ಎಕರೆ ಸರಕಾರಿ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಿಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
– ಶ್ರೀನಿವಾಸ್.ಕೆ | ದಿನ್ನೇಸೋಲೂರು ಸದಸ್ಯ, ವಿಶ್ವನಾಥಪುರ ಗ್ರಾಪಂಗ್ರಾಮದ ಸರ್ವೆ ನಂ.132ರಲ್ಲಿ ಖಾಲಿ ಜಾಗವಿದೆ. ಸರಕಾರದ ಅಧಿಕಾರಿಗಳು ಅಂತ್ಯ ಸಂಸ್ಕಾರಕ್ಕೆ ಗ್ರಾಮದಲ್ಲಿ ಜಾಗವನ್ನು ಗುರ್ತಿಸಿಕೊಡಬೇಕು. ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಗ್ರಾಮಕ್ಕೆ ರುದ್ರಭೂಮಿ ಕಲ್ಪಿಸಿಕೊಡಬೇಕು.
– ವಸಂತ್‌ಕುಮಾರ್ | ಮುಖಂಡ, ವಿಶ್ವನಾಥಪುರ ಗ್ರಾಮ
Be the first to comment