ಜಿಲ್ಲಾ ಸುದ್ದಿಗಳು
ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಹೆರಂಗಡಿ ಗ್ರಾಮದ ವಯೋವೃದ್ಧ ದಲಿತ ಶಿವು ಹಳ್ಳೇರ ತುತ್ತಿಗಾಧರವಾದ ವೃದ್ಧಾಪ್ಯ ವೇತನ ಅಧಿಕಾರಿಗಳ ಅಸಡ್ಡೆ, ಹೊಣೆಗೇಡಿತನದಿಂದ ಸರಿಯಾಗಿ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಳಿಯಲೊಂದು ಗುಡಿಸಲೂ ಇಲ್ಲದ ದೇಖರೇಖೆ ನೋಡಿಕೊಳ್ಳಲು ಯಾರೂ ಇಲ್ಲದ ಅವಿವಾಹಿತ ಶಿವುಗೀಗ ಎಂಬತ್ತು ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲಿ ಅವರಿಗೆ ಕಿವಿಯೂ ಕೇಳಿಸುತ್ತಿಲ್ಲ! ಫೆಬ್ರುವರಿ 2006 ರಿಂದ ಶಿವು ವೃದ್ಧಾಪ್ಯ ಪಿಂಚಣಿ ಮೇಲೆ ಜೀವವಿಟ್ಟು ಜೀವನ ನಡೆಸುತ್ತಿದ್ದರು.
ಹೇಗೋ ದಿನ ಕಳೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಅಗಸ್ಟ್ 2018ರಲ್ಲಿ ಹೊನ್ನಾವರದ ಅಂದಿನ ತಹಶೀಲ್ದಾರ್ ವಿವೇಕ್ ಶೆಣ್ವಿ ಅಸಾಯಕ ಶಿವು ಹಳ್ಳೇರ ವೃದ್ದಾಪ್ಯ ವೇತನ ರದ್ದುಗೊಳಿಸಿ ಬಿಟ್ಟರು! ಅದಕ್ಕವರು ನೀಡಿದ ಕಾರಣ ಶಿವು ಹೊನ್ನಾವರ ತಾಲ್ಲೂಕಿನಲ್ಲಿ ವಾಸ್ತವ್ಯ ಮಾಡುತ್ತಿಲ್ಲ ಎಂಬುದಾಗಿತ್ತು. ಹೊನ್ನಾವರದ ಕಂದಾಯ ಅಧಿಕಾರಿಗಳು ಶಿವುರ ಅತಿ ಮುಖ್ಯ ದಾಖಲೆಯಾದ ಆಧಾರ ಕಾರ್ಡ್, ಮತದಾರ ಗುರುತಿನ ಚೀಟಿ, ಬಿಪಿಎಲ್ ಪಡಿತರ ಕಾರ್ಡ್, ಆಯುಷ್ಮಾನ್ ಆರೋಗ್ಯ ಕಾರ್ಡ್ ಅಥವಾ ಪಿಂಚಣಿ ಸಂದಾಯವಾಗುತ್ತಿದ್ದ ಅಂಚೆ ಇಲಾಖೆಯ ಪಾಸ್ ಬುಕ್‌ನಂಥ ಯಾವ ದಾಖಲೆಯನ್ನೂ ಪರಿಶೀಲಿಸದೆ ಎಡವಟ್ಟು ತೀರ್ಮಾನಕ್ಕೆ ಬಂದಿದ್ದರು! ತಹಶೀಲ್ದಾರರ ವಿವೇಚನಾರಹಿತ ಕ್ರಮವನ್ನು ಅಂದಿನ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಎತ್ತಿ ಹಿಡಿದಿದ್ದು ಶಿವು ಹಳ್ಳಿರಗೆ ಅನ್ಯಾಯ ಮಾಡಿತ್ತು.
ಅಶಿಕ್ಷಿತ-ಅಮಾಯಕ ಶಿವು ಹಳ್ಳೇರ ಏನು ಮಾಡಬೇಕೆಂದು ತಿಳಿಯದೆ ಒದ್ದಾಡುತ್ತಿರುವಾಗ ಊರಿನ ಜಿ.ಎನ್.ಭಟ್ಟರಿಗೆ ವಿಷಯ ತಿಳಿಯುತ್ತದೆ. ಅವರು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ರಿಗೆ ಶಿವು ಹಳ್ಳೇರಗಾಗಿರುವ ತೊಂದರೆ ವಿವರಿಸಿ 2018ರ ಆಗಸ್ಟ್‌ನಿಂದ ಪಿಂಚಣಿ ಬಟವಡೆ ಮಾಡುವಂತೆ ಮನವಿ ಮಾಡುತ್ತಾರೆ. ಸರಕಾರಿ ಅಧಿಕಾರಿಗಳೊಂದಿಗೆ ವ್ಯವಹರಿಸುವ ಶಕ್ತಿ ವಯೋವೃದ್ಧ-ಅಶಿಕ್ಷಿತ ಶಿವುಗೆ ಇಲ್ಲದಿರುವುದರಿಂದ ಮತ್ತು ಅವರಿಗೆ ಕಿವಿ ಕೇಳಿಸದಿರುವುದರಿಂದ ಭಟ್ಟರೆ ಅರ್ಜಿ ಸಲ್ಲಿಸಿದ್ದರು. ಆದರೆ ಆರೆಂಟು ತಿಂಗಳು ಕಳೆದರೂ ತಹಶೀಲ್ದಾರ್ ಸಾಹೇಬರಿಂದ ಕನಿಷ್ಟ ಹಿಂಬರಹವೂ ಬರಲಿಲ್ಲ. ಜಿಲ್ಲಾಧಿಕಾರಿಗಳ ವಾಟ್ಸಪ್‌ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ!
ಕಂದಾಯ ಅಧಿಕಾರಿಗಳು ಆಗಿರುವ ಅಚಾತುರ್ಯವನ್ನು ಅರಿತು ಕ್ಷಣಾರ್ಧದಲ್ಲಿ ಪರಿಹರಿಸಬಹುದಾಗಿದ್ದ ಈ ಸಣ್ಣ ಸಮಸ್ಯೆಯನ್ನು ಗೋಜಲುಗೊಳಿಸಲಾಗಿತ್ತು. ಬಡಪಾಯಿ ಶಿವುರ ಗೋಳು ಹೇಳತೀರದಾಗಿತ್ತು. ಆಗ ಅನಿವಾರ್ಯವಾಗಿ ಭಟ್ಟರು 30 ನವೆಂಬರ್ 2019ರಂದು ಬೆಂಗಳೂರಲ್ಲಿರುವ ಲೋಕಾಯುಕ್ತ ಕಚೇರಿಗೆ ಖುದ್ದು ಹೋಗಿ ದೂರು ದಾಖಲಿಸಿದರು. ಆಗಲೂ ತಹಶೀಲ್ದಾರ್ ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಮಾಡಿದರು. ಶಿವುರ ವಾಸ್ತವ್ಯ ಹೊನ್ನಾವರ ತಾಲೂಕಿನಲ್ಲಿಯೇ ಇದೆಯೆಂದು ದೃಢಪಡಿಸುವ ಯಾವ ದಾಖಲೆಯನ್ನೂ ಪರಿಗಣಿಸಲೇ ಇಲ್ಲ. ಫಲಾನುಭವಿ ಹೊನ್ನಾವರ ತಾಲೂಕಿ ಹೆರಂಗಡಿ ವ್ಯಾಪ್ತಿಯಲ್ಲಿಲ್ಲವೆಂದು ತಹಶೀಲ್ದಾರ್ ವರದಿ ತಯಾರಿಸಿದ್ದರು. ಇದನ್ನೆ ಡಿಸಿ ಸಾಹೇಬರು ಕಣ್ಣು ಮುಚ್ಚಿ ಲೋಕಾಯುಕ್ತಕ್ಕೆ ರವಾನಿಸಿಬಿಟ್ಟಿದ್ದರು.ಆದರೆ ಲೋಕಾಯುಕ್ತದಲ್ಲಿದ್ದ ದೂರನ್ನು ಮುಗಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದ ತಹಶೀಲ್ದಾರ್ ಶಿವು ಹಳ್ಳೇರ ರದ್ದಾದ ಪೆನ್‌ಷನ್ ಪುನಃ ಪ್ರಾರಂಭಿಸಬೇಕಾಗಿ ಬಂತು. ಆದರೆ ಇಲ್ಲೂ ಪ್ರಮಾದವಾಗಿತ್ತು. 1 ಅಕ್ಟೋಬರ್ 2020ರಿಂದ ಶಿವುರಿಗೆ ಪಿಂಚಣಿ ಬಟವಡೆ ಮಾಡುವಂತೆ ತಹಶೀಲ್ದಾರ್ ಆದೇಶಿಸಿದ್ದರು. ನ್ಯಾಯ ಕ್ರಮದಂತೆ ಶಿವುರ ಸಾಮಾಜಿಕ ಭದ್ರತಾ ಪಿಂಚಣಿ ವಿನಾ ಕಾರಣ ಸ್ಥಗಿತಗೊಳಿಸಲಾಗಿದ್ದ 2018ರ ಆಗಸ್ಟ್ ತಿಂಗಳಿಂದ ಬಾಕಿಯಿದ್ದ ಮೊತ್ತ ಬರಬೇಕಿತ್ತು. ಕಂದಾಯ ಅಧಿಕಾರಿಗಳ ಈ ಅವಾಂತರವನ್ನು ಮತ್ತೆ ಭಟ್ಟರು ಲೋಕಾಯುಕ್ತರ ಗಮನಕ್ಕೆ ತಂದರು. ಆದರೆ ಲೋಕಾಯುಕ್ತದಿಂದ ಯಾವ ಕ್ರಮವೂ ಆಗಿಲ್ಲ. ಲೋಕಾಯುಕ್ತದ ವಿಫಲತೆ ಶಿವುರನ್ನು ದಿಕ್ಕೆಡಿಸಿಬಿಟ್ಟಿದೆ.
ಲೋಕಾಯುಕ್ತರಂತವರೆ ಬಡಪಾಯಿ ಶಿವುರ ಸಮಸ್ಯೆ ಪರಿಗಣಿಸದಿರುವಾಗ ಅವರಿಗೆ ಇನ್ನೆಲ್ಲಿ ನ್ಯಾಯ ಸಿಗುತ್ತದೆ? ‘ಹರ ಕೊಲ್ಲಲ್ ನರ ಕಾಯ್ವನೆ’ ಎಂಬಂತಾಗಿದೆಯೆಂದು ಜನರಾಡಿ ಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ ಮತ್ತಿತರ ಕಂದಾಯ ಅಧಿಕಾಗಳು ಗ್ರಾಮ ವಾಸ್ತವ್ಯ ಮಾಡಿ ಅರ್ಹರಿಗೆ ಸ್ಥಳದಲ್ಲೆ ವೃದ್ದಾಪ್ಯ ಮಂಜೂರಿ ಮಾಡುತ್ತಾರೆ. 60 ವರ್ಷ ಮೀರಿದ ಫಲಾನುಭವಿಗಳಿಗೆ ಪಿಂಚಣಿ ಮನೆ ಬಾಗಿಲಲ್ಲೆ ವಿತರಿಸಲಾಗುತ್ತದೆಂದು ಕಂದಾಯ ಮಂತ್ರಿ ಆರ್.ಅಶೋಕ್ ಹೇಳುತ್ತಾರೆ. ವಿಪರ್ಯಾಸವೆಂದರೆ ಮಂಜೂರಿಯಾಗಿ ಬರುತ್ತಿರುವ ಪಿಂಚಣಿಯನ್ನೆ ಕಿತ್ತುಕೊಳ್ಳುವ ಕ್ರೌರ್ಯ ಇನ್ನೊಂದೆಡೆಯಾಗುತ್ತಿದೆ! ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ವೃದ್ದನ ಜೀವನ ನಿರ್ವಹಣೆಗೆ ಅನುವು ಮಾಡಿಕೊಡಬೇಕಾಗಿದೆ..
Be the first to comment