ಜಿಲ್ಲಾ ಸುದ್ದಿಗಳು
ದೇವನಹಳ್ಳಿ:
ಸರಕಾರಿ ಕೆಲಸದಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ವರ್ಗಾವಣೆ, ನಿವೃತ್ತಿ ಮತ್ತು ವಯೋನಿವೃತ್ತಿ ಸಹಜ ಪ್ರಕ್ರಿಯೆಯಾಗಿದ್ದು, ಅದನ್ನು ಸ್ವೀಕರಿಸಲೇ ಬೇಕು ಎಂದು ವಿಶ್ವನಾಥಪುರ ಕೆಪಿಎಸ್ ಶಾಲೆಯ ಪ್ರಾಂಶುಪಾಲೆ ವಾಣಿಶ್ರೀ.ಬಿ.ಸಿ. ತಿಳಿಸಿದರು.
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಕೆಪಿಎಸ್ ಶಾಲೆಯಾದ ನಂತರ ಮೊದಲ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ಎಲ್ಲಾ ಉಪನ್ಯಾಸಕರ, ಶಾಲಾಭಿವೃದ್ಧಿ ಸಮಿತಿಯ ಜೊತೆಗೂಡಿ ಸಾಕಷ್ಟು ಅಭಿವೃದ್ಧಿಗೆ ಅಡಿಪಾಯ ಹಾಕಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ವರ್ಗಾವಣೆಯಿಂದಾಗಿ ನಮ್ಮ ನಿಮ್ಮ ಬಾಂಧವ್ಯ ಇಷ್ಟಕ್ಕೇ ಸೀಮಿತವಾಗುವುದಿಲ್ಲ. ಮುಂದೆಯೂ ಸಹ ಇದೇ ಸಹಕಾರ, ಬಾಂಧವ್ಯ ಇರುತ್ತದೆ ಎಂದು ಬಾವುಕ ನುಡಿಗಳನ್ನು ನುಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ರಾಮಕೃಷ್ಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಹಳ ಅಪರೂಪವಾದ ಸಂದರ್ಭ ಸಿಗುವುದು ಬಹಳ ವಿರಳ. ಇದೊಂದು ಸಂತೋಷದಾಯಕ ಸಮಾರಂಭವಾಗಿದೆ. ನಮ್ಮ ಸೇವಾವಧಿಯಲ್ಲಿ ಯಾವುದೇ ರೀತಿಯ ಕಪ್ಪುಚುಕ್ಕೆ ಇಲ್ಲದೆ, ಸೇವೆಯಿಂದ ನಿವೃತ್ತಿ ಹೊಂದುವುದು ಇವತ್ತಿನ ಸನ್ನಿವೇಶದಲ್ಲಿ ಚಾಲೇಂಜಿಗ್ ಟಾಸ್ಕ್ ಆಗಿದೆ. ಮೂಲತಹ ಸೈನಿಕರಾಗಿ ಸೇವೆಯನ್ನು ಸೇರಿದ ಮಹದೇವಯ್ಯ ತಮ್ಮ ದೈನಂದಿಕ ಚಟುವಟಿಕೆಯಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಮಾದರಿಯಾಗಿ, ಸೇವೆಯಿಂದ ನಿವೃತ್ತಿ ಹೊಂದಿ, ಪದವಿ ಪೂರ್ವ ಶಿಕ್ಷಣ ಇಲಾಖೆಗೆ ದ್ವಿತೀಯ ದರ್ಜೆ ಸಹಾಯಕರಾಗಿ ನಿವೃತ್ತಿಯಾಗುತ್ತಿರುವುದು ಇತರರಿಗೆ ಮಾದರಿಯಾಗಿದ್ದಾರೆ. ಅದರಂತೆ ಪ್ರಾಂಶುಪಾಲೆ ವಾಣಿಶ್ರೀ ಅವರು ಸಹ ಕೆಪಿಎಸ್ ಶಾಲೆಗೆ ೨ ಕೋಟಿ ರೂ. ಅನುದಾನವನ್ನು ತಂದು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಜತೆಗೆ ನಮ್ಮ ಇಲಾಖೆ ಬಸವನಗುಡಿಯಲ್ಲಿ ಇತ್ತು. ಜಿಲ್ಲಾಧಿಕಾರಿಗಳ ಒತ್ತಡದ ಮೆರೆಗೆ ಇಲ್ಲಿಗೆ ಕಚೇರಿ ಸ್ಥಳಾಂತರ ಮಾಡಲಾಯಿತು. ಇವೆಲ್ಲವೂ ಒಂದು ರೀತಿಯ ಅನುಭವನ್ನು ಎತ್ತಿಹಿಡಿಯುತ್ತದೆ. ಯಾರೇ ಆಗಲೀ, ನಿವೃತ್ತಿ ಹೊಂದಿದ ನಂತರ ಅವರ ಜೀವನ ಸುಖಕರವಾಗಿರಬೇಕು ಎಂಬುವುದು ನಮ್ಮ ಆಶಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ವನಾಥಪುರ ಗ್ರಾಪಂ ಅಧ್ಯಕ್ಷೆ ಮಂಗಳ ನಾರಾಯಣಸ್ವಾಮಿ, ಉಪಾಧ್ಯಕ್ಷ ವಿನಯ್‌ಕುಮಾರ್, ವಕೀಲ ಮನೋಜ್, ಎಸ್‌ಡಿಎಂಸಿ ಉಪಾಧ್ಯಕ್ಷ ಮನಗೊಂಡನಹಳ್ಳಿ ಜಗದೀಶ್ ಸೇರಿದಂತೆ ಹಲವಾರು ವರ್ಗಾವಣೆಗೊಂಡ ಪ್ರಾಂಶುಪಾಲೆ ವಾಣಿಶ್ರೀ ಮತ್ತು ನಿವೃತ್ತಿ ಹೊಂದಿದ ಮಹದೇವಯ್ಯ ಅವರನ್ನು ಅಭಿನಂದಿಸಿದರು. ಈ ವೇಳೆಯಲ್ಲಿ ಮುಖಂಡರಾದ ವಸಂತ್‌ಕುಮಾರ್, ನಾರಾಯಣಸ್ವಾಮಿ, ಅಧಿಕಾರ ವೃಂದ, ಶಾಲೆ ಮತ್ತು ಕಾಲೇಜು ಉಪನ್ಯಾಸಕರು, ವಿವಿಧ ಕಾಲೇಜಿನ ಪ್ರಾಂಶುಪಾಲರು, ಮತ್ತಿತರರು ಇದ್ದರು.
Be the first to comment