ಜಿಲ್ಲಾ ಸುದ್ದಿಗಳು
ಶಿರಸಿ
ಕರ್ನಾಟಕ ವಿಶ್ವವಿದ್ಯಾಲಯ ಪರೀಕ್ಷೆ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದ್ದು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ದೀಪಕ್ ದೊಡ್ಡುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕರ್ನಾಟಕ ವಿಶ್ವವಿದ್ಯಾಲಯವು ಜೂನ್ 30 ರಂದು ಅಧಿಸೂಚನೆ ಹೊರಡಿಸಿ 2020-21ನೆ ಸಾಲಿನ ಎಲ್ಲ ಸ್ನಾತಕ / ಸ್ನಾತಕೋತ್ತರ ಪರೀಕ್ಷೆಗಳನ್ನು ಬಹು ಆಯ್ಕೆ ಮಾದರಿಯಲ್ಲಿ ಮಾಡುವುದಾಗಿ ತಿಳಿಸಿತ್ತು ಅದರಂತೆ ಜುಲೈ16 ರಂದು ಮತ್ತೊಮ್ಮೆ ಅಧಿಸೂಚನೆ ಹೊರಡಿಸಿ ಪರೀಕ್ಷೆ ಬಹು ಆಯ್ಕೆಯ ಪ್ರಕಾರ ನಡೆಯಲಿದ್ದು ಈ ವಿಷಯವನ್ನು ವಿದ್ಯಾರ್ಥಿಗಳಿಗೆ ತಿಳಿಸುವಂತೆ ಆಯಾ ಕಾಲೇಜಿನ ಪ್ರಾಚಾರ್ಯರಿಗೆ ಸೂಚಿಸಿತ್ತು.ಅಲ್ಲದೆ ಕೆಲವು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಹ ವಿಧ್ಯಾರ್ಥಿಗಳಿಗೆ ಒದಗಿಸಿತ್ತು. ಅದರಂತೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಬಹು ಆಯ್ಕೆ ಪರೀಕ್ಷೆಗೆ ಬೇಕಾಗುವಂತೆ ತಯಾರಿಯನ್ನು ನಡೆಸಿದ್ದರು.ಆದರೆ ಈಗ ಏಕಾಏಕಿ ವಿಶ್ವ ವಿದ್ಯಾಲಯ ಜುಲೈ 21ಕ್ಕೆ ಹೊಸ ಅಧಿಸೂಚನೆ ಹೊರಡಿಸಿ ಪರೀಕ್ಷೆಗಳು ಬಹು ಆಯ್ಕೆ ಬದಲಾಗಿ ವಿವರಣಾತ್ಮಕ ರೀತಿಯಲ್ಲೆ ಮಾಡುವುದಾಗಿ ತಿಳಿಸಿದೆ. ಅಲ್ಲದೆ ಜುಲೈ 26 ರಿಂದ ಆಗಸ್ಟ್ 7 ರ ನಡುವೆ ಕೇವಲ ಎರಡು ವಾರದೊಳಗಾಗಿ ಎಲ್ಲ ಆಂತರಿಕ ಪರೀಕ್ಷೆಗಳು , ಪ್ರಾಯೋಗಿಕ ಪರೀಕ್ಷೆಗಳನ್ನು ಕಾಲೇಜಿನಲ್ಲಿ ನಡೆಸುವಂತೆ ಆದೇಶ ನೀಡಿದೆ. ಇದರಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಆಗಸ್ಟ್ 16 ರಿಂದ 31ರ ವರೆಗೆ ಬೆಸ ಸೆಮಿಸ್ಟರ್ ಪರೀಕ್ಷೆ ಹಾಗೂ ಸಮ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವುದಾಗಿ ತಿಳಿಸಿದೆ. ಇದರಿಂದ ವಿದ್ಯಾರ್ಥಿಗಳು ಗೊಂದಲಗೊಂಡಿದ್ದು ಬಹು ಆಯ್ಕೆ ಪರೀಕ್ಷೆಗೆ ತಯಾರಿ ನಡೆಸಿ ಈಗ ವಿವರಣಾತ್ಮಕ ಪರೀಕ್ಷೆ ಎನ್ನುತ್ತಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ ಉಪನ್ಯಾಸಕರೂ ಸಹ ಪರೀಕ್ಷೆಯ ಬಗ್ಗೆ ಗೊಂದಲದಲ್ಲೆ ಇರುವುದು ವಿಪರ್ಯಾಸವಾಗಿದೆ ಎಂದಿದ್ದಾರೆ.
ಈಗಾಗಲೇ ಯೂಜಿಸಿ ಸೂಚಿಸಿದಂತೆ ಬೆಸ ಸೆಮಿಸ್ಟರ್ ಅನ್ನು ಆಂತರಿಕ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಬಡ್ತಿ ಗೊಳಿಸಿ , 6 ನೆ ಸೆಮಿಸ್ಟರ್ ಪರೀಕ್ಷೆಗಳನ್ನು ಬಹು ಆಯ್ಕೆ ಮಾದರಿಯಲ್ಲಿ ಮಾಡುವುದು ವಿದ್ಯಾರ್ಥಿಗಳ ಹಿತಾಸಕ್ತಿಯ ದೃಷ್ಟಿಯಿಂದ ಸೂಕ್ತವಾಗಿದೆ ಎಂದು ಸಲಹೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪರವಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿರುವ ಅವರು ಬೆಸ ಸೆಮಿಸ್ಟರ್ ಪರೀಕ್ಷೆಯನ್ನು ರದ್ದು ಮಾಡಬೇಕು, 6ನೇ ಸೆಮಿಸ್ಟರ್ ಪರೀಕ್ಷೆಯನ್ನು ಬಹುಆಯ್ಕೆ ಮಾದರಿಯಲ್ಲೇ ಮಾಡಬೇಕು, ಕ.ವಿ.ವಿ. ಯಿಂದ 5 ಮಾದರಿ ಪ್ರಶ್ನೆಪತ್ರಿಕೆ ಬಿಡುಗಡೆ ಮಾಡಬೇಕು ಹಾಗೂ ಬಿಡುಗಡೆ ಮಾಡಿದ ಮಾದರಿ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳನ್ನೇ ಅಂತಿಮ ಪರೀಕ್ಷೆಯಲ್ಲಿ ಕೇಳುವಂತಾಗಬೇಕು , ಎಸ್.ಎಸ್.ಎಲ್ .ಸಿ ಪರೀಕ್ಷೆಯ ಮಾದರಿಯಲ್ಲಿ ಪದವಿ ಪರೀಕ್ಷೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Be the first to comment