ಪ್ರವಾಸಿಗರ ದಂಡು ಜಲಪಾತಗಳತ್ತ ಮಾಗೋಡು ಜಲಪಾತಕ್ಕೆ ಭಾರಿ ಜನರು

ವರದಿ-ಸ್ಪೂರ್ತಿ ಎನ್ ಶೇಟ್

ರಾಜ್ಯ ಸುದ್ದಿಗಳು

ಯಲ್ಲಾಪುರ

CHETAN KENDULI

ನಿರಂತರ ಸುರಿಯುತ್ತಿರುವ ಮಳೆ ಮತ್ತೊಂದೆಡೆ ಹಚ್ಚ ಹಸುರಿನಿಂದ ಕಂಗೊಳಿಸುವ ಕಾನನ ಮಲೆನಾಡಿನ ಸೊಬಗಿನ ಪ್ರಾಕೃತಿಕ ಸೌಂದರ್ಯವನ್ನು ಮಳೆಗಾಲದಲ್ಲಿ ನೋಡಲು ಅದೆಷ್ಟು ಚೆಂದ. ಜಲಧಾರೆಗಳ ತವರೂರು ಎಂದೇ ಖ್ಯಾತಿಗಳಿಸಿರುವ ಯಲ್ಲಾಪುರದ ಮಾಗೋಡು ಜಲಪಾತ, ಹಾಲಿನ ನೊರೆಯಂತೆ ಮೈದುಂಬಿ ಹರಿಯುತ್ತಿದ್ದು , ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.ಇಷ್ಟು ದಿನ ಮನೆಯಲ್ಲಿ ಲಾಕ್ ಆಗಿದ್ದ ಜನ ಇದೀಗ ನಿಸರ್ಗ ಪ್ರವಾಸಿ ತಾಣಗಳಲ್ಲಿ ಚಿತ್ತಹಾಸಿದ್ದಾರೆ. ಪಶ್ಚಿಮ ಘಟ್ಟಗಳ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಿರುವುದು ಕಂಡುಬಂದಿದೆ. ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಪ್ರವಾಸಿಗರು ತಮ್ಮ ಸ್ನೇಹಿತರು ಕುಟುಂಬದವರ ಜೊತೆ ಆಗಮಿಸಿದ್ದಾರೆ.

ಮಾಗೋಡು ಜಲಪಾತಗಳತ್ತ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಮಾನ್ಸೂನ್ ಜೂನ್ ಇಂದ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಜಲಪಾತ ವೀಕ್ಷಣೆಗೆ ಜನರು ಕಿಕ್ಕಿರಿದು ಸೇರುತ್ತಾರೆ. ಅದ್ರಲ್ಲೂ ವೀಕೆಂಡ್ ಬಂತು ಅಂದ್ರೆ ಪ್ರವಾಸಿಗರು ತಂಡೋಪ ತಂಡವಾಗಿ ವೀಕ್ಷಣೆಗೆ ಬರುತ್ತಾರೆ.ಮಂಡ್ಯ ,ಮೈಸೂರು, ಬೆಳಗಾವಿ ,ಹಾಸನ ,ದಾವಣಗೆರೆ ಧಾರವಾಡ, ಹುಬ್ಬಳ್ಳಿ ,ಅಷ್ಟೇ ಅಲ್ಲದೆ ಕೇರಳ, ಆಂಧ್ರ, ತಮಿಳುನಾಡು ರಾಜ್ಯಗಳಿಂದಲೂ ಪ್ರವಾಸಿಗರ ದಂಡೇ ಉತ್ತರಕನ್ನಡ ದತ್ತ ಹಾದು ಬರುತ್ತಿದೆ . ಇನ್ನು ಮಾಗೋಡು ಜಲಪಾತ ಯಲ್ಲಾಪುರ ತಾಲೂಕು ಕೇಂದ್ರದಿಂದ ಅನುಕೂಲ ಮಾರ್ಗವಾಗಿ 3 ಕಿ.ವೀ ಚಲಿಸಿದ ಬಳಿಕ ಮಾಗೋಡ್ ಕ್ರಾಸಿನ ಮುಖಾಂತರ 17 ಕಿ. ವೀ ಚಲಿಸಿದರೆ ಜಲಪಾತಕ್ಕೆ ತಲುಪಬಹುದು.

ಎರಡು ಹಂತದ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತದ ಸೊಬಗನ್ನು ನೋಡಲು ಅಂದ ಚಂದ. ಮಳೆ ಹೆಚ್ಚಾದಂತೆ ಮಂಜಿನಿಂದ ಜಲಪಾತವು ಅದೃಶ್ಯ ವಾದಂತೆ ಕಂಡುಬರುತ್ತದೆ. ಹಾಗೆಯೇ ಅಲ್ಪ ಸಮಯದಲ್ಲಿಯೇ ಜಲಪಾತ ಮೊದಲಿನಂತೆ ಸ್ಪಷ್ಟವಾಗಿ ಗೋಚರಿಸುತ್ತದೆ . ವೀಕ್ಷಣಾ ಸ್ಥಳದಿಂದ ನಿಂತು ಜಲಪಾತವನ್ನು ವೀಕ್ಷಿಸುವಾಗ ಬರುವ ತಂಪಾದ ಗಾಳಿಯ ಸವಿಯ ಅನುಭವ ಮನಸ್ಸಿಗೆ ಮುದ ನೀಡುತ್ತದೆ. ಹಸಿರು ಕಾನನದ ಮಧ್ಯೆದಲ್ಲಿ ಹಾಲಿನ ನೊರೆಯಂತೆ ಧುಮುಕುವ ಜಲಪಾತ ,ಜಲಧಾರೆ ಅಬ್ಬರಿಸುವ ಶಬ್ದವನ್ನ ಕೇಳುವುದೇ ಕಿವಿಗೆ ಇಂಪು.ಮಾಗೋಡು ಜಲಪಾತದ ಸಮೀಪ 10ಕಿ.ವೀ ಆಸುಪಾಸಿನ ಒಳಗೆ ಪ್ರಸಿದ್ಧ ಶ್ರೀ ಗಂಟೆ ಗಣಪತಿ ದೇವಸ್ಥಾನ, ಹಾಗೂ. ಜೇನುಕಲ್ಲು ಗುಡ್ಡ , ಕವಡಿಕೆರೆ ಗಳತ್ತ ಪ್ರವಾಸಿಗರು ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಅನುಭವಿಸುತ್ತಿದ್ದಾರೆ. ದಟ್ಟ ಅಡವಿಯ ನಡುವೆ ಧುಮ್ಮಿಕ್ಕಿ ಹರಿಯುತ್ತಿರುವ ಜಲಪಾತ ವೀಕ್ಷಣೆಗೆ ಸಾಗರೋಪಾದಿಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ . 

Be the first to comment

Leave a Reply

Your email address will not be published.


*