ಜಿಲ್ಲಾ ಸುದ್ದಿಗಳು
ದೇವನಹಳ್ಳಿ
ಪ್ರಧಾನಿ ನರೇಂದ್ರ ಮೋದಿ ಸರಕಾರವು ಪರಿಶಿಷ್ಟ ಜಾತಿಗಳಿಗೆ ಉತ್ತಮ ಯೋಜನೆಗಳನ್ನು ರೂಪಿಸಿದೆ. ಎಸ್‌ಸಿ ಮೋರ್ಚಾ ಕಾರ್ಯಕರ್ತರು, ಮುಖಂಡರು ಪ್ರತಿ ಮನೆಮನೆಗೆ ಯೋಜನೆಗಳನ್ನು ತಿಳಿಸಿ ಪಕ್ಷವನ್ನು ಸಂಘಟಿಸಬೇಕು ಎಂದು ರಾಷ್ಟ್ರೀಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ತಿಳಿಸಿದರು.ದೇವನಹಳ್ಳಿ ಪಟ್ಟಣದ ಶಿವಕುಮಾರಸ್ವಾಮಿ ವೃತ್ತದ ಬಳಿಯ ಬಿಜೆಪಿ ಪಾರ್ಟಿ ಹಾಲ್‌ನಲ್ಲಿ ರಾಜ್ಯ ಬಿಜಪಿ ಎಸ್‌ಸಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ಬಿಜೆಪಿ ಎಸ್‌ಸಿ ಮೋರ್ಚಾ ವೆಬ್‌ಸೈಟ್‌ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಪಂಚದಾದ್ಯಂತ ತಂತ್ರಜ್ಞಾನ ಬೆಳೆಯುತ್ತಿದ್ದು, ತಂತ್ರಜ್ಞಾನಕ್ಕೆ ತಕ್ಕಂತೆ, ಎಸ್‌ಸಿ ಮೋರ್ಚಾ ವೆಬ್‌ಸೈಟ್‌ಅನ್ನು ಮಾಡಲಾಗಿದೆ. ಬೂತ್ ಮಟ್ಟದಲ್ಲಿ ಪ್ರತಿ ಕಾರ್ಯಕರ್ತರನ್ನು ಗುರ್ತಿಸುವ ಕೆಲಸ ಮಾಡಲಾಗುತ್ತಿದೆ. ಇತ್ತೀಚೆಗೆ ನರೇಂದ್ರ ಮೋದಿಯವರ ಸಂಪುಟದಲ್ಲಿ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಹಾಗೂ ದಕ್ಷಿಣ ಭಾರತದಲ್ಲಿ ತಮಿಳುನಾಡಿನ ಮುರುಗನ್ ಅವರನ್ನು ಸಚಿವರನ್ನಾಗಿ ಮಾಡಿರುವುದಕ್ಕೆ ಮೋದಿಯವರನ್ನು ಅಭಿನಂದಿಸುತ್ತೇನೆ. ಕಾಂಗ್ರೆಸ್‌ನಲ್ಲಿ ಉತ್ತಮ ನಾಯಕರಿಲ್ಲ. ನಮ್ಮ ಬಿಜೆಪಿ ಪಕ್ಷದಲ್ಲಿ ಅನೇಕ ನಾಯಕರುಗಳನ್ನು ಹೊಂದಿದೆ. ಮೂರು ದಿನಗಳ ಪ್ರವಾಸದಲ್ಲಿ ತೆಲಂಗಾಣ, ಆಂಧ್ರಪ್ರದೇಶ, ತೆಮಿಳುನಾಡು, ಪಾಂಡಿಚೆರಿಗಳಲ್ಲಿ ಪ್ರವಾಸ ಕೈಗೊಂಡು ಪ್ರತಿ ಮುಖಂಡರ ಪರಿಚಯ ಮಾಡಿಕೊಳ್ಳಲಾಗುತ್ತಿದೆ ಎಂದರು.
ರಾಜ್ಯ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಚುನಾವಣೆ ಎರಡು ವರ್ಷ ಇರುವಾಗಲೇ ಕಾಂಗ್ರೆಸ್ ಅಧಿಕಾರದ ಹಗಲು ಕನಸನ್ನು ಹೊಂದಿದೆ. ಈಗಾಗಲೇ ಕಾಂಗ್ರೆಸ್ ಬಾಗಿಲು ಮುಚ್ಚಿಕೊಂಡಿದೆ. ಈ ಹಿಂದೆ ದಲಿತರನ್ನು ಕಾಂಗ್ರೆಸ್ ಮತ ಬ್ಯಾಂಕ್‌ಗಳಾಗಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಇದೀಗ ಕಾಲ ಬದಲಾಗಿದೆ. ದಲಿತರು ಬಿಜೆಪಿ ಪಕ್ಷದ ಕಡೆ ಒಲವು ತೋರಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರವಿದ್ದಾಗ ಯಾವೊಬ್ಬ ದಲಿತನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಪಕ್ಷದಲ್ಲಿ ದುಡಿದು ಬಂದಿದ್ದರೂ ಸಹ ಆರು ವರ್ಷದ ಹಿಂದೆ ಬಂದಂತಹ ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುತ್ತಾರೆ. ದಲಿತರನ್ನು ತೋರಿಸಿ, ಬೇರೆಯವರನ್ನು ಮುಖ್ಯಮಂತ್ರಿಯನ್ನಾಗಿಸುತ್ತಾರೆ ಎಂದು ಲೇವಡಿ ಮಾಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಭುನಾಥ್ ತೋಂಡಿಯ, ರಾಜ್ಯ ಎಸ್‌ಸಿ ಮೋರ್ಚಾ ಖಜಾಂಚಿ ಕೆ.ನಾಗೇಶ್(ಎಕೆಪಿ), ಉಪಾಧ್ಯಕ್ಷರಾದ ಜಯಕುಮಾರ್ ಕಾಣಿಗೆ, ಶ್ರೀದೇವಿ, ಪ್ರಧಾನ ಕಾರ್ಯದರ್ಶಿ ಜಗದೀಶ್, ಕಾರ್ಯದರ್ಶಿಗಳಾದ ಅರುಣ್, ಹನುಮಂತಪ್ಪ, ಬಿಜೆಪಿ ಹೈಕೋರ್ಟ್ ವಕೀಲ ಡಿ.ಸಿ.ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಸುಂದರೇಶ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎಚ್.ಎಂ.ರವಿಕುಮಾರ್, ಜಿಲ್ಲಾ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ್ ಬಾಬು, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗವೇಣಿ, ಖಜಾಂಚಿ ಸಾರಿಖ, ತಾಲೂಕು ಉಪಾಧ್ಯಕ್ಷೆ ಆರ್.ಪುನಿತಾ, ಪ್ರಧಾನ ಕಾರ್ಯದರ್ಶಿಗಳಾದ ನಿಲೇರಿ ಮಂಜುನಾಥ್, ರವಿಕುಮಾರ್, ತಾಲೂಕು ಎಸ್‌ಸಿ ಮೋರ್ಚಾ ಅಧ್ಯಕ್ಷ ಮುನಿರಾಜು, ಪ್ರಧಾನ ಕಾರ್ಯದರ್ಶಿ ಚಂದ್ರ ಸಾಗರ್, ವಿಜಯಪುರ ರಾಘವ, ಸೈನಿಕ ಪ್ರಕೋಷ್ಟದ ಕೋಶಾಧ್ಯಕ್ಷ ವೆಂಕಟೇಶ್, ಎಸ್‌ಟಿ ಮೋರ್ಚಾ ಅಧ್ಯಕ್ಷ ಅಮರ್‌ನಾಥ್, ರಾಜ್ಯ ಎಸ್‌ಸಿ,ಎಸ್‌ಟಿ ಆಯೋಗದ ಸದಸ್ಯ ವೆಂಕಟೇಶ್ ದೊಡ್ಡೇರಿ, ಯುವ ಮುಖಂಡ ಎನ್.ಶ್ರೇಯಸ್, ಇತರರು ಇದ್ದರು.
Be the first to comment