ಮಹಾಕದನದಲ್ಲಿ ಅಂತಿಮವಾಗಿ ಯಾವ ಪಕ್ಷಕ್ಕೆಷ್ಟು ಸ್ಥಾನ? ಅಂಕಿಅಂಶ ಇಲ್ಲಿದೆ..

 

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದೆ. ಅಂತಿಮವಾಗಿ 288 ಕ್ಷೇತ್ರಗಳ ಫಲಿತಾಂಶವನ್ನು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದೆ. ಆಡಳಿತಾರೂಢ ಬಿಜೆಪಿ ಪಕ್ಷವು ಈ ಬಾರಿ ಮಹಾರಾಷ್ಟ್ರದಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದ್ದು ಬರೋಬ್ಬರಿ 132 ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ.

ಶಿವಸೇನೆ (ಶಿಂಧೆ ಬಣ) 57 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) 41 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಶಿವಸೇನೆ (ಉದ್ಧವ್ ಠಾಕ್ರೆ ಬಣ) 20 ಕ್ಷೇತ್ರಗಳಲ್ಲಿ ಗೆದ್ದಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 16 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCPSP) 10, ಸಮಾಜವಾದಿ ಪಕ್ಷ 2, ಜನ ಸುರಾಜ್ಯ ಶಕ್ತಿ 2, ರಾಷ್ಟ್ರೀಯ ಯುವ ಸ್ವಾಭಿಮಾನ್ ಪಾರ್ಟಿ 1, ರಾಷ್ಟ್ರೀಯ ಸಮಾಜ ಪಕ್ಷ 1, ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIM) 1, ಸಿಪಿಐ(ಎಂ), PWPI, ರಾಜರ್ಷಿ ಶಾಹು ವಿಕಾಸ್ ಅಘಾಡಿ ಹಾಗೂ ಇತರೆ ಸ್ವತಂತ್ರ ಪಕ್ಷಗಳು ತಲಾ ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡ ಹಿನ್ನೆಲೆ ವಿವಿಧ ಸಂಸ್ಥೆಗಳು ಚುನಾವಣೋತ್ತರ ಫಲಿತಾಂಶ (exit poll) ಬಿಡುಗಡೆ ಮಾಡಿದ್ದವು. ಟುಡೇಸ್‌ ಚಾಣಕ್ಯ ಸಂಸ್ಥೆ ಕೂಡ ತಡವಾಗಿ ಎಕ್ಸಿಟ್‌ ಪೋಲ್‌ ಫಲಿತಾಂಶ ರಿಲೀಸ್‌ ಮಾಡಿತ್ತು. ಈ ಸಮೀಕ್ಷೆಯಲ್ಲೂ ಬಿಜೆಪಿ ಬಹುಮತ ಪಡೆದುಕೊಂಡಿತ್ತು. ಟುಡೇಸ್‌ ಚಾಣಕ್ಯ ನುಡಿದಿದ್ದ ಭವಿಷ್ಯದಂತೆ ಬಿಜೆಪಿಗೆ ಬರೋಬ್ಬರಿ 175 ಸ್ಥಾನಗಳಲ್ಲಿ ಗೆಲುವು ಸಿಗಲಿದೆ. ಕಾಂಗ್ರೆಸ್‌ 100 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಇನ್ನು ಇತರೆ 13 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಹೇಳಿತ್ತು.

ಪೀಪಲ್‌ ಪಲ್ಸ್‌ ಸಮೀಕ್ಷೆ ಹೇಳುವಂತೆ ಬಿಜೆಪಿ 102-120 ಸ್ಥಾನ ಪಡೆಯಲಿದೆ. ಶಿವಸೇನೆ (ಇಎಸ್‌) 42-61 ಸ್ಥಾನಗಳನ್ನು ಪಡೆಯಲಿದೆ. ಈಗಾಗಲೇ ಬಿಜೆಪಿ ಜೊತೆಗೆ ಶಿವಸೇನೆ ಕೈಜೋಡಿಸಿದ್ದು, ಈ ಎರಡೂ ಸಂಖ್ಯೆಗಳು ಸೇರಿದರೆ ಮೈತ್ರಿ ಸರ್ಕಾರ ರಚನೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿತ್ತು. ಇದಕ್ಕೆ ಪೂರಕವಾಗಿಯೇ ಫಲಿತಾಂಶ ಬಂದಿರುವುದು ಗಮನ ಸೆಳೆದಿದೆ.

ನೂತನ ಸರ್ಕಾರ ರಚನೆಗೆ ಮಹಾಯುತಿ ರೆಡಿ!

ನಮ್ಮ ಸರ್ಕಾರ ಶ್ರೀಸಾಮಾನ್ಯರ ಸರ್ಕಾರ. ಪ್ರಧಾನಿ ಮೋದಿ ಅವರ ನಂಬಲಾಗದ ಬೆಂಬಲಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಮಹಿಳೆಯರು, ಮಕ್ಕಳು ಮತ್ತು ರೈತರು ನಮ್ಮನ್ನು ಬೆಂಬಲಿಸಿದ್ದಾರೆ. ನಾವು ಶ್ರೀಸಾಮಾನ್ಯನನ್ನು ‘ಸೂಪರ್ ಮ್ಯಾನ್’ ಆಗಿ ಪರಿವರ್ತಿಸುವ ಗುರಿ ಹೊಂದಿದ್ದೇವೆ. ನನ್ನ ಪಾಲಿಗೆ ಸಿಎಂ ಎಂದರೆ ಕಾಮನ್ ಮ್ಯಾನ್ ಎಂದು ಏಕನಾಥ್‌ ಶಿಂಧೆ ಹೇಳಿದ್ದಾರೆ.

ಇದು ನಮಗೆ ಮತ್ತು ಮಹಾರಾಷ್ಟ್ರಕ್ಕೆ ಐತಿಹಾಸಿಕ ದಿನ. ಪ್ರೀತಿಯ ಸಹೋದರ, ಸಹೋದರಿಯರು, ಪ್ರೀತಿಯ ರೈತರೆಲ್ಲರೂ ಮಹಾಯುತಿಯ ಮೇಲೆ ಪ್ರೀತಿ ತೋರಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ನಾವು ಮಾಡಿದ ಕೆಲಸವನ್ನು ಜನರು ನೋಡಿದ್ದಾರೆ. ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ ಎಂದಿದ್ದಾರೆ.

ಎರಡು ವರ್ಷಗಳಿಂದ ಅವರು ಎಲ್ಲ ಕೆಲಸಗಳನ್ನು ನಿಲ್ಲಿಸಿದ್ದರು. ಆದರೆ ನಾವು ಅವುಗಳನ್ನು ಮರು ಪ್ರಾರಂಭಿಸಿದ್ದೇವೆ ಎಂದು ಶಿಂಧೆ ಹೇಳಿದ್ದಾರೆ. ಜನಸಾಮಾನ್ಯನನ್ನು ಸೂಪರ್‌ಮ್ಯಾನ್‌ ಆಗಿ ಪರಿವರ್ತಿಸುತ್ತೇವೆ. ಲೋಕಸಭೆಯ ಸಮಯದಲ್ಲಿ ಪ್ರತಿಪಕ್ಷಗಳು ಸುಳ್ಳು ವಿಚಾರವನ್ನು ಹರಡಿದವು. ಆದರೂ ನರೇಂದ್ರ ಮೋದಿಯವರು ಮತ್ತೆ ಅಧಿಕಾರಕ್ಕೆ ಬಂದರು. ಏಕತೆಯನ್ನು ಮಹಾರಾಷ್ಟ್ರ ಸಾಬೀತು ಮಾಡಿದೆ. ಮೂರು ಪಕ್ಷಗಳು ತಮ್ಮ ಸೀಟು ಹಂಚಿಕೆಯನ್ನು ಸೌಹಾರ್ದಯುತವಾಗಿ ಅಂತಿಮಗೊಳಿಸಿವೆ. ಸರ್ಕಾರ ರಚನೆ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಶಿಂಧೆ ಸ್ಪಷ್ಟನೆ ನೀಡಿದ್ದಾರೆ.

ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಲಡ್ಕಿ ಬಹಿನ್ ಯೋಜನೆಯನ್ನು ಗೇಮ್ ಚೇಂಜರ್ ಎಂದು ಹೇಳಿದ್ದಾರೆ. ಈ ಯೋಜನೆಯು ಮಹಾಯುತಿ ತಮ್ಮ ಎದುರಾಳಿಯನ್ನು ಸೋಲಿಸಲು ಸಹಾಯ ಮಾಡಿತು. ಲಡ್ಕಿ ಬಹಿನ್ ಯೋಜನೆಯು ನಮ್ಮ ಆಟವನ್ನು ಬದಲಾಯಿಸಿತು. ಇದು ನಮ್ಮ ಪ್ರತಿ ವಿರೋಧಿಗಳನ್ನು ಸೋಲಿಸಿತು. ನನ್ನ ನೆನಪಿನಲ್ಲಿ ಅಂತಹ ವಿಜಯವನ್ನು ನಾನು ನೋಡಿಲ್ಲ ಎಂದು ಪವಾರ್ ಹೇಳಿದ್ದಾರೆ.

Be the first to comment

Leave a Reply

Your email address will not be published.


*