ನಕಲು ಮುಕ್ತ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲಿ: ಮುದ್ದೇಬಿಹಾಳ ತಹಸೀಲ್ದಾರ ಕಡಕಭಾವಿ ಸೂಚನೆ…!

ವರದಿ: ಚೇತನ ಕೆಂದೂಳಿ, ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ತಾಲೂಕಾ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಸರಕಾರದ ಮಾರ್ಗದರ್ಶನದಂತೆ ನಡೆಯುವಂತೆ ನೋಡಿಕೊಳ್ಳಬೇಕು ಮತ್ತು ಸರಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಹಸೀಲ್ದಾರ ಬಿ.ಎಸ್.ಕಢಕಭಾವಿ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಎಸ್.ಎಸ್.ಎಲ್.ಸಿ. ಪರೀಕ್ಷಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ತಾಲೂಕಿನ ಪರೀಕ್ಷಾ ಕೊಠಡಿಗಳಿಗೆ ವಿವಿಧ ಹುದ್ದೆಗಳಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು ಪರೀಕ್ಷಾ ಕೇಂದ್ರದಲ್ಲಿನ ನಿಯಮಾವಳಿಗಳನ್ನು ತಿಳಿಸಲಾಗಿದೆ. ಅದರಂತೆ ಪ್ರತಿಯೊಬ್ಬರೂ ಪರೀಕ್ಷಾ ಕೇಂದ್ರಗಳ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದರು.



ಕ್ಷೇತ್ರ ಶಿಕ್ಷಣಾಧಿಕಾರಿ ವಿರೇಶ ಜೇವರ್ಗಿ ಮಾತನಾಡಿ, ಈಗಾಗಲೇ ಮುದ್ದೇಬಿಹಾಳ ತಾಲೂಕಾ ವ್ಯಾಪ್ತಿಯ ಒಟ್ಟು 82 ಪ್ರೌಢ ಶಾಲೆಗಳಲ್ಲಿ ಒಟ್ಟೂ 5444 ಮಕ್ಕಳು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನೋಂದಾಯಿತರಾಗಿದ್ದು ತಾಲೂಕಿನಲ್ಲಿ 28 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ. ಪ್ರತಿಯೊಂದು ಕೇಂದ್ರದಲ್ಲಿಯೂ ನಕಲು ಮುಕ್ತ ಪರೀಕ್ಷೆಗಳನ್ನು ನಡೆಸುವಂತೆ ಮಾಡಬೇಕು. ಹೊರೊ ರಾಜ್ಯದ ಮಕ್ಕಳಿಗೂ ಸ್ಥಳೀಯವಾಗಿ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ತಾಲೂಕಾ ಆರೋಗ್ಯಾಧಿಕಾರಿ ಎಸ್.ಬಿ.ತೀವಾರಿ ಮಾತನಾಡಿ, ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳಿಗೆ ತಲಾ ಓರ್ವ ಆಶಾ ಕಾರ್ಯಕರ್ತೆ ಹಾಗೂ ಆರೋಗ್ಯ ಸಿಬ್ಬಂದಿಗಳನ್ನು ನೀಯೋಜಿಸಲಾಗಿದೆ. ಅಲ್ಲದೇ ತುರ್ತುಸೇವೆಗಾಗಿ ತುರ್ತುವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಮಕ್ಕಳು ಯಾವುದೇ ಆತಂಕವಿಲ್ಲದೇ ಪರೀಕ್ಷೆಗಳನ್ನು ಎದುರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಸ್ಐ ಎನ್.ಬಿ.ಬಿರಾದಾರ, ಮುದ್ದೇಬಿಹಾಳ ತಾಪಂ ಇಓ ಎಸ್.ವಾಯ್.ಹೊಕ್ರಾಣಿ, ಸಾರಿಗೆ ವ್ಯವಸ್ಥಾಪಕ ರಾಹುಲ ಹೊನಸುರೆ, ತಾಳಿಕೋಟಿ ತಾಪಂ ಇಓ ಬಿ.ಆರ್.ಬಿರಾದಾರ ಸೇರಿದಂತೆ ಇತರರಿದ್ದರು.

Be the first to comment

Leave a Reply

Your email address will not be published.


*