ಜಿಲ್ಲಾ ಸುದ್ದಿ
ಶಿರಸಿ: ಇಂಧನ ಬೆಲೆ ಏರಿಕೆ ಖಂಡಿಸಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬುಧವಾರ ನಗರದಲ್ಲಿ ರಾಜ್ಯ ಮಟ್ಟದ ಬೃಹತ್ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗವಹಿಸುವ ಮೂಲಕ ಜಾಥಾ ಯಶಸ್ವಿ ಕಂಡಿತು. ನಗರದ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಶಿವಕುಮಾರ್ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಮುಂಭಾಗದಲ್ಲಿ ಜಾಥಾಕ್ಕೆ ಡಿ ಕೆ ಶಿವಕುಮಾರ್ ಚಾಲನೆ ನೀಡಿದರು. ದೇವಸ್ಥಾನದಿಂದ ದೇವಿಕೆರೆಯ ವರೆಗೆ ಸ್ವತಃ ಡಿಕೆಶಿ ಸೇರಿದಂತೆ ವಿವಿಧ ಮುಖಂಡರು ಸೈಕಲ್ ತುಳಿಯುವ ಮೂಲಕ ತೈಲ ಬೆಲೆ ಏರಿಕೆ ಖಂಡಿಸಿದರು.
ನಂತರ ಮಾತನಾಡಿದ ಡಿಕೆಶಿ,ಪೆಟ್ರೋಲ್ ಬೆಲೆ ಇಂದು 100 ರೂ ಗೆ ಏರಿಕೆಯಾಗಿದೆ. ಇದನ್ನು ಖಂಡಿಸಿ ರಾಜ್ಯದಲ್ಲಿ 5 ದಿನಗಳ ಕಾಲ 5 ಸಾವಿರ ಕಡೆ ಪೆಟ್ರೋಲ್ ನಾಟ್ ಔಟ್ ಕಾರ್ಯಕ್ರಮ ಮಾಡಲಾಗಿದೆ. ಹಿಂದೆ ಬೆಲೆ ಏರಿಕೆ ಖಂಡಿಸಿದ ಸಂಸದ ಅನಂತಕುಮಾರ ಹೆಗಡೆ, ಶೋಭಾ ಕರಂದ್ಲಾಜೆ ? ಎಲ್ಲಿ ಹೋಗಿದ್ದಾರೆ. 25 ಸಂಸದರಲ್ಲಿ ಒಬ್ಬರೂ ಬಾಯಿ ಬಿಡುತ್ತಿಲ್ಲ ಎಂದು ಟೀಕಿಸಿದರು. ಬೆಳಿಗ್ಗೆ 10.30 ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ 3 ಗಂಟೆಗಳ ಕಾಲ ವಿಳಂಬವಾಗಿ 1.30 ಕ್ಕೆ ಆರಂಭವಾಯಿತು. ಕಾಂಗ್ರೆಸ್ ಕಾರ್ಯಕರ್ತರು ಬೆಳಿಗ್ಗೆ 9 ಗಂಟೆಯಿಂದಲೇ ಮಾರಿಕಾಂಬಾ ದೇವಸ್ಥಾನದ ಎದುರು ನೆರೆದಿದ್ದರು. ಜಾಥಾಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರೀ ಬೆಂಬಲ ವ್ಯಕ್ತವಾಯಿತು. ಸಾವಿರಾರು ಕಾರ್ಯಕರ್ತರು ಸೇರಿದ್ದರು. ಕಡ್ಡಾಯವಾಗಿ ಎಲ್ಲರಿಂದಲೂ ಮಾಸ್ಕ ಧರಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್ ವಿ ದೇಶಪಾಂಡೆ, ಡಿಸಿಸಿ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಕೆಪಿಸಿಸಿ ಉಸ್ತುವಾರಿ ಸುಷ್ಮಾ ರಾಜಗೋಪಾಲ, ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ, ಜಿಲ್ಲಾ ವಕ್ತಾರ ದೀಪಕ್ ದೊಡ್ಡೂರು, ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಕುಮಾರ ಜೋಷಿ, ಕಾಂಗ್ರೆಸ್ ಪ್ರಮುಖರಾದ ರಮೇಶ ದುಭಾಷಿ, ರವೀಂದ್ರ ನಾಯ್ಕ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.
Be the first to comment