ರಾಜ್ಯ ಸುದ್ದಿ
ಕಾರವಾರ: ಜಲ ಜೀವನ ಮಿಷನ್, ನರೇಗಾ, ವಸತಿ, ಆರೋಗ್ಯ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ನೇರವಾಗಿ ನೀಡುತ್ತಿರುವ ವಿಶೇಷ ಅನುದಾನದ ಬಳಕೆ ಬಗ್ಗೆ ಕೇಂದ್ರ ಸರಕಾರ ಹದ್ದಿನ ಕಣ್ಣಿಟ್ಟಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆ ಅವರು ಹೇಳಿದರು.ಜಿಲ್ಲಾ ಪಂಚಾಯತ್ನ ಸಭಾಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜನರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಅಂತಹ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕೋಟ್ಯಾಂತರ ರೂಪಾಯಿ ವಿಶೇಷ ಅನುಧಾನನೀಡುತ್ತಿದೆ. ಆದರೆ ಜಲ ಜೀವನ ಮಿಷನ್ನಡಿ ಜಿಲ್ಲೆಯಾದ್ಯಂತ ಕೈಗೊಂಡಿರುವ ಕಾಮಗಾರಿಯ ಬಗ್ಗೆ ಶಾಸಕರು ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳಿಗೂ ಮಾಹಿತಿಯೇ ಇಲ್ಲ.ಜನಪ್ರತಿನಿಧಿಗಳಿಗೆ ತಿಳಿಸದೇ ಅಧಿಕಾರಿಗಳು ನೇರವಾಗಿ ತಮಗೆ ತಿಳಿದಂತೆ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದೀರಿ, ಅಧಿಕಾರಿಗಳ ಈ ನಡವಳಿಕೆಯಿಂದ ಮುಂಬರುವ ದಿನಗಳಲ್ಲಿ ಯೋಜನೆ ವಿಫಲವಾಗುವ ಸಾಧ್ಯತೆಯಿದೆ ಎಂದು ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಧ್ವನಿ ಎತ್ತಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಶಾಸಕರು ಹೇಳಿರುವುದು ಸತ್ಯವಾಗಿದೆ. ಮನೆ ಮನೆಗೆ ನೀರನ್ನು ಒದಗಿಸಬೇಕು. ಜನರ ದಾಹವನ್ನು ತಣಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಜಲ ಜೀವನ ಮಿಷನ್ ಜಾರಿಗೆ ತಂದಿದೆ. ಇಂತಹ ಮಹತ್ವಾಕಾಂಕ್ಷೆ ಯೋಜನೆಯನ್ನು ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ತರಬೇಕು. ಆಗ ಯೋಜನೆಯ ಬಗ್ಗೆ ಜನರಿಗೆ ತಿಳಿಯುವುದರ ಜೊತೆಗೆ ಹೆಚ್ಚಿನ ಪ್ರಚಾರವೂ ಸಿಗುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದು, ಸರಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತರದೇ ನೇರವಾಗಿ ಅಧಿಕಾರ ಚಲಾಯಿಸಲು ಯಾವುದೇ ಅವಕಾಶವಿಲ್ಲ. ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳಬಾರದು. ಇಂತಹ ಘಟನೆಗೆಳು ಮರುಕಳಿಸಿದರೆ ಸಂಬಂಧಪಟ್ಟ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಜನರ ಒಳಿತಿಗಾಗಿ ತಂದಿರುವ ಯೋಜನೆಯ ಬಗ್ಗೆ ಶಾಸಕರು ಸೇರಿದಂತೆ ಸಂಬಂಧಿಸಿದ ಎಲ್ಲ ಜನಪ್ರತಿನಿಧಿಗಳಿಗೆ ತಿಳಿಸಬೇಕು. ನಂತರ ಅವರ ಸಹಭಾಗಿತ್ವದಲ್ಲಿ ಕಾಮಗಾರಿ ಕೈಗೊಂಡು ಜನಪ್ರತಿನಿಧಿಗಳಿಂದ ಉದ್ಘಾಟನೆ ಮಾಡಿಸಬೇಕು. ಜನಪರ ಯೋಜನೆಗಳಿಗೆ ವಿಶೇಷ ಅನುಧಾನ ನೀಡುತ್ತಿರುವ ಕೇಂದ್ರ ಸರಕಾರ ಆ ಅನುದಾನದ ಬಳಕೆ ಹೇಗೆಲ್ಲ ಆಗುತ್ತಿದೆ ಎಂಬುವುದನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ.
ಇದು ಅಧಿಕಾರಿಗಳ ವರ್ಗದ ಗಮನಕ್ಕಿರಬೇಕು. ಒಂದುವೇಳೆ ಅನುದಾನ ಬಳಕೆಯಲ್ಲಿ ಅಕ್ರಮವೇನಾದರೂ ನಡೆದರೆ ಅದನ್ನು ಸೂಕ್ತ ರೀತಿಯಲ್ಲಿ ತನಿಖೆಗೆ ಒಳಪಡಿಸಿ ಸಂಬಂಧಿಸಿದ ಅಧಿಕಾರಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮುಂದೆ ಅಂತವರಿಗೆ ನಿವೃತ್ತಿ ವೇತನವೂ ಸಿಗದಂತ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಅಧಿಕಾರಿ ವರ್ಗದವರು ತುಂಬಾ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದರು.ಜಿಲ್ಲೆಯಲ್ಲಿ ಜೇನು ಕೃಷಿಗೆ ಉತ್ತಮ ಅವಕಾಶಗಳಿದ್ದು, ಜೇನು ಅತೀ ಹೆಚ್ಚು ಗೂಡು ಕಟ್ಟುವಂತ ಮರಗಳನ್ನು ಪಟ್ಟಿ ಮಾಡಿ ವರದಿ ನೀಡುವಂತೆ ತೋಟಗಾರಿಕೆ ಇಲಾಖೆಗೆ ಈ ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಅದರಂತೆ ಇಲಾಖೆ ಅಧಿಕಾರಿಗಳು ಜೇನು ಕೃಷಿಗೆ ಪೂರಕವಾಗುವಂತ ಸುಮಾರು 10 ತಳಿಯ ಮರಗಳ ಪಟ್ಟಿಯನ್ನು ಮಾಡಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಮರಗಳ ಸಸಿಗಳನ್ನು ಬೆಳಸಿ ಅರಣ್ಯ ಪ್ರದೇಶದಲ್ಲಿ ಅವುಗಳನ್ನು ನೆಡುವಂತ ಕಾರ್ಯವಾಗಬೇಕು. ಇದರಿಂದ ಪರಿಸರ ವೃದ್ಧಿ ಜೊತೆಗೆ ಜೇನು ಕೃಷಿಕರಿಗೆ ಸಹಕಾರಿಯಾಗಲಿದೆ ಎಂದರು.ಮುಂಬರುವ 2023-24ರ ಸಮಯಕ್ಕೆ ಜಿಲ್ಲೆಯಲ್ಲಿ ವಿಮಾನ, ಹಡಗು ನಿಲ್ದಾಣ ಸೇರಿದಂತೆ ವಿವಿಧ ಕೈಗಾರಿಕಾ ಉದ್ಯಮಗಳು ಕಾಲಿಡಲಿವೆ. ಹೀಗಾಗಿ ಜಿಲ್ಲೆಯಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಬೇಕಿದ್ದು, ಸ್ಥಳೀಯ ಪ್ರತಿಭೆಗಳಿಗೆ ಮುಂದುವರೆದ ತಂತ್ರಜ್ಞಾನಕ್ಕೆ ಪೂರಕವಾದ ವಿವಿಧ ಕೌಶಲ್ಯಗಳ ಕುರಿತು ತರಬೇತಿ ನೀಡಬೇಕಿದೆ. ಇದರಿಂದ ಜಿಲ್ಲೆಯಲ್ಲಿ ನಿರುದ್ಯೋಗದ ಸಮಸ್ಯೆ ನಿವಾರಣೆ ಸಾಧ್ಯವಿದೆ ಎಂದು ತಿಳಿಸಿದರು.ಕೃಷಿ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸ್ವಚ್ಛ ಭಾರತ್ ಅಭಿಯಾನ್, ನರೇಗಾ, ಕುಡಿಯುವ ನೀರು, ಅಕ್ಷರದಾಸೋಹ ಸೇರಿದಂತೆ ವಿವಿಧ 21ಕ್ಕೂ ಅಧಿಕ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಸಂಸದರು ಈ ಸಂದರ್ಭದಲ್ಲಿ ನಡೆಸಿದರು.ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ದಿನಾಚರಣೆ ನಿಮಿತ್ತ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೊರತಂದ ಸ್ವಚ್ಛ ಸಂಕೀರ್ಣ ಕೈಪಿಡಿ, ಕರ್ನಾಟಕ ಗ್ರಾಮೀಣ ಘನ ಮತ್ತು ದ್ರವ ತ್ಯಾಜ್ಯ ಉಪ ವಿಧಿಯ ಪರಿಹಾರ ಹೆಲ್ಪ್ಲೈನ್ ನಂಬರ್, ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ `ಜನಸಂಖ್ಯಾ ಸ್ಥಿರತೆ ನಿಮ್ಮಿಂದ ಮಾತ್ರ ಸಾಧ್ಯ’ ಎಂಬ ಕರಪತ್ರವನ್ನು ಸಂಸದರು ಬಿಡುಗಡೆ ಮಾಡಿದರು.ಸಭೆಯಲ್ಲಿ ಶಾಸಕರಾದ ದಿನಕರ್ ಶೆಟ್ಟಿ, ಸುನಿಲ್ ನಾಯ್ಕ, ರೂಪಾಲಿ ನಾಯ್ಕ, ವಿದಾನ ಪರಿಷತ್ ಸದಸ್ಯ ಶಾಂತರಾಮ ಸಿದ್ಧಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಸಿಇಒ ಪ್ರಿಯಾಂಗಾ ಎಂ., ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.
Be the first to comment