ರಾಜ್ಯ ಸುದ್ದಿ
ನೀಲಗಿರಿ ಮರಗಳನ್ನು ತೆರವುಗೊಳಿಸಲು ರೈತರಿಗೆ ಮನವರಿಕೆ ಮಾಡಬೇಕು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪ್ರತೀ ಸಭೆಯಲ್ಲೂ ಸಮರ್ಪಕ ಮಾಹಿತಿ ನೀಡುತ್ತಿಲ್ಲ.ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ಇದೆ. ಜಿಲ್ಲೆಯಲ್ಲಿ ೧೦೭೫ ಗ್ರಾಮಗಳಿದ್ದು ಅದರಲ್ಲಿ ೩೩೭ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಎಂದು ಸಂಸದ ಬಿ.ಎನ್. ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ೨೦೨೧-೨೨ನೇ ಸಾಲಿನ ತ್ರೈಮಾಸಿಕ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟ್ಯಾಂಕರ್ ಖಾಸಗಿ ಬೋರ್‌ವೆಲ್‌ಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ೧೨೦೦ ರಿಂದ ೧೫೦೦ ಅಡಿವರೆಗೂ ಕೊಳವೆಬಾವಿ ಕೊರೆಸಿದರೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಎತ್ತಿನಹೊಳೆ ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಸಭೆ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಲು ರೈತರಿಗೆ ಮನವರಿಕೆ ಮಾಡಬೇಕು. ಹಣ್ಣಿನ ಗಿಡಗಳು ಮತ್ತು ಮಹಾಗಣಿ ಸಸಿಯನ್ನು ನೆಟ್ಟು ಬೆಳೆಸಲು ಸೂಚಿಸಲಾಗಿದೆ. ಮಹಾತ್ಮಾಗಾಂಧಿ ಉಧ್ಯೋಗಖಾತ್ರಿ ಯೋಜನೆಯಲ್ಲಿ ಜಾಬ್ ಕಾರ್ಡ್ ಹೊಂದಿದವರಿಗೆ ಕೂಲಿ ಕೆಲಸ ಮಾಡಲು ಗಂಡು ಮತ್ತು ಹೆಣ್ಣಿಗೆ ೨೮೯ರೂ.ಗಳ ಸಮಾನಕೂಲಿಯನ್ನು ನೀಡಲಾಗುತ್ತಿದೆ. ವರ್ಷಕ್ಕೆ ೪ಸಭೆಗಳನ್ನು ಮಾಡಬೇಕು. ದಿಶಾ ಸದಸ್ಯರಿಗೆ ಗುರ್ತಿನ ಚೀಟಿಗಳನ್ನು ನೀಡಲಾಗುವುದು. ಕೊರೋನಾ ಬಂದಮೇಲೆ ಶಾಲೆಗಳು ಮುಚ್ಚಿರುವುದರಿಂದ ಶಾಲಾ ಮಕ್ಕಳ ಕಲಿಕೆ ಡೋಲಾಮಾನವಾಗಿದೆ. ಆನ್‌ಲೈನ್, ಆಪ್‌ಲೈನ್‌ಗಳಲ್ಲಿಯೇ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಬಂದೊದಗಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರ್ಕಾರ ನಿಗಧಿಪಡಿಸಿದೆ. ಎಲ್ಲಾ ವ್ಯವಸ್ಥೆಗಳನ್ನು ಶಿಕ್ಷಣ ಇಲಾಖೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕೊರೋನಾ ಲಸಿಕೆ ಕಾರ್ಯ ನಡೆಯುತ್ತಿದೆ. ಜಿಲ್ಲೆಗೆ ೧೦ಸಾವಿರ ವೈರಲ್ ಲಸಿಕೆ ನೀಡುತ್ತಿದ್ದು ಇನ್ನು ಎರಡು ಮೂರು ಸಾವಿರ ಲಸಿಕೆ ವೈರಲ್ ಬೇಕಾಗಿದೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ. ತಕ್ಷಣ ಸರ್ಕಾರದ ಗಮನಕ್ಕೆ ತರುತ್ತೇನೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ೨.೮% ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಲಸಿಕೆಯನ್ನು ಪೂರೈಸುತ್ತಿದೆ. ಲಸಿಕೆಗೆ ಬೇಡಿಕೆ ಹೆಚ್ಚಾಗಿರುವುದರಿಂದ ಬೇಡಿಕೆಗೆ ಅನುಗುಣವಾಗಿ ಸರ್ಕಾರ ಲಸಿಕೆಯನ್ನು ಜಿಲ್ಲೆಗಳಿಗೆ ನೀಡುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಗಳಿಗೆ ಸಮರ್ಪಕ ಮಾಹಿತಿಯನ್ನು ನೀಡುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಯಾವ ಕಾಮಗಾರಿ ನಡೆಯುತ್ತಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ದೂರವಾಣಿ ಮೂಲಕ ಸಂಪರ್ಕಿಸಲು ಹೋದರೂ ಸಹ ಪೋನ್ ತೆಗೆಯುವುದಿಲ್ಲ. ಕರ್ನಾಟಕದಲ್ಲಿರುವ ಅಧಿಕಾರಿಗಳು ತೆಲುಗಿನಲ್ಲಿ ಪ್ರಶ್ನೆ ಮಾಡಬೇಕು. ಇಂತಹ ಅಧಿಕಾರಿಗಳ ವಿರುದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.
ಶಾಸಕ ಎಲ್.ಎನ್. ನಾರಾಯಣಸ್ವಾಮಿ ಮಾತನಾಡಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರತೀದಿನ ಬೆಳಿಗ್ಗೆಯಾದರೆ ತಾಲೂಕಿನ ಜನರು ಸಮಸ್ಯೆಗಳನ್ನು ಹೇಳುತ್ತಿದ್ದಾರೆ. ಕುಡಿಯುವ ನೀರಿಗೆ ಶಾಶ್ವತ ಪರಿಹಾರವನ್ನು ಒದಗಿಸಬೇಕು. ಹೆಚ್.ಎನ್. ವ್ಯಾಲಿ ನೀರು ತಾಲೂಕಿನ ೯ಕೆರೆಗಳಿಗೆ ಹರಿಸುತ್ತಿದ್ದಾರೆ. ಇನ್ನುಳಿದ ನೀರನ್ನೆಲ್ಲಾ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ೩ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣವಾಗಲಿದೆ. ಪೋಲೀಸ್ ವರಿಷ್ಟಾಧಿಕಾರಿಗಳ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರಿಸಬೇಕು ಎಂದು ಹೇಳಿದರು.ಜಿ.ಪಂ. ಸಿಇಒ ಎಂ.ಆರ್. ರವಿಕುಮಾರ್ ಮಾತನಾಡಿ ಕುಡಿಯುವ ನೀರಿಗೆ ಹೊಸಕೋಟೆ ತಾಲೂಕಿಗೆ ಉಸ್ತುವಾರಿ ಸಚಿವರು ೨ಕೋಟಿ ರೂ.ಗಳ ವಿಶೇಷ ಅನುದಾನವನ್ನು ತಂದಿದ್ದಾರೆ. ಅದೇ ಮಾದರಿಯಲ್ಲಿ ಜಿಲ್ಲೆಯ ಇನ್ನುಳಿದ ತಾಲೂಕುಗಳಿಗೆ ವಿಶೇಷ ಅನುದಾನ ತರುವಂತೆ ಮನವಿ ಮಾಡಲಾಗಿದೆ ಎಂದರು.
ಈ ವೇಳೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಪುಷ್ಪಲತಾ ರಾಯ್ಕರ್, ಜಿ.ಪಂ. ಯೋಜನಾಧಿಕಾರಿ ವಿನುತಾರಾಣಿ, ಮುಖ್ಯ ಲೆಕ್ಕಾಧಿಕಾರಿ ರಮೇಶ್ ರೆಡ್ಡಿ, ಉಪಕಾರ್ಯದರ್ಶಿ ಮುನಿಕೃಷ್ಣಪ್ಪ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ದಿಶಾ ಸಭೆಯ ಸದಸ್ಯರುಗಳು ಇದ್ದರು.
Be the first to comment