ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪತ್ರಿಕಾ ರಂಗದ ಕಾರ್ಯ ಶ್ಲಾಘನೀಯ; ಎಮ್.ಅಜಿತ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿ

CHETAN KENDULI

ಕುಮಟಾ: ಪತ್ರಿಕಾ ರಂಗಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನ-ಮಾನವಿದ್ದು, ಸಮಾಜದ ಅಂಕು, ಡೊಂಕುಗಳನ್ನು ತಿದ್ದುವ ಮೂಲಕ ಸ್ವಾಸ್ತ ಸಮಾಜ ನಿರ್ಮಾಣಕ್ಕೆ ಮುಂದಾಗುವ ಪತ್ರಿಕಾ ರಂಗದ ಕಾರ್ಯ ಶ್ಲಾಘನೀಯ ಎಂದು ಸಹಾಯಕ ಆಯುಕ್ತ ಎಮ್.ಅಜಿತ ರೈ ಅಭಿಪ್ರಾಯಪಟ್ಟರು.

ಪಟ್ಟಣದ ಪುರಭವನದ ಸಮುದಾಯ ಭವನದಲ್ಲಿ ಪುರಸಭೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕುಮಟಾ ಘಟಕದ ವತಿಯಿಂದ ಗುರುವಾರ ಆಯೋಜಿಸಿದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಪತ್ರಿಕಾ ರಂಗದ ಪಾತ್ರ ಬಹಳ ಮುಖ್ಯವಾಗಿತ್ತು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ದಾರಿತಪ್ಪಿದ ಸಂದರ್ಭದಲ್ಲಿ ಸರಿದಾರಿಗೆ ತರುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿರುವುದು ಸಂತಸದ ಸಂಗತಿ. ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಗಳಿಗೆ ಕೆಲ ಸಾಮಾಜಿಕ ಜವಾಬ್ದಾರಿಗಳಿವೆ ಎಂಬುದನ್ನು ಪತ್ರಕರ್ತರು ಮರೆಯಬಾರದು ಎಂದ ಅವರು, ಕೋವಿಡ್‍ನ ಕ್ಲಿಷ್ಟಕರ ಸನ್ನಿವೇಶದಲ್ಲಿ ತಾಲೂಕಾಡಳಿತದೊಂದಿಗೆ ಇಲ್ಲಿನ ಪತ್ರಕರ್ತರು ಉತ್ತಮ ಸಹಕಾರ ನೀಡಿದ್ದಾರೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಗುರುದತ್ತ ಶೇಟ ಮಾತನಾಡಿ, ಅರಣ್ಯ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಮುಖ್ಯವಾಗಿರುತ್ತದೆ. ಅರಣ್ಯ ನಾಶದಿಂದ ಹವಾಮಾನದಲ್ಲಿನ ವೈಪರಿತ್ಯವನ್ನು ನಾವೆಲ್ಲರೂ ಗಮನಿಸಿದ್ದೇವೆ. ಅರಣ್ಯ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಪಿ.ಎಸ್.ಐ ರವಿ ಗುಡ್ಡಿ ಮಾತನಾಡಿ, ಪತ್ರಿಕೆಗಳು ಸಮಾಜದಲ್ಲಿರುವ ಅಂಕು-ಡೊಂಕುಗಳನ್ನು ತಿದ್ದುವ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿವೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ತಪ್ಪು ಸಂದೇಶಗಳು ಹರಿದಾಡುತ್ತವೆ. ಆದರೆ ಪತ್ರಿಕೆಗಳು ಸುದ್ದಿಯನ್ನು ಪರಾಮರ್ಶಿಸಿ, ನೈಜ ಸುದ್ದಿಗಳನ್ನು ಬಿತ್ತಿರಿಸುವ ಕೆಲಸ ಮಾಡುತ್ತಿದೆ ಎಂದರು.ಕ.ಸಾ.ಪ ತಾಲೂಕಾಧ್ಯಕ್ಷ ಡಾ.ಶ್ರೀಧರ ಗೌಡ ಉಪ್ಪಿನಗಣಪತಿ, ಪುರಸಭಾ ಮುಖ್ಯಾಧಿಕಾರಿ ಸುರೇಶ ಎಮ್.ಕೆ, ವಲಯಾರಣ್ಯಾಧಿಕಾರಿ ಪ್ರವೀಣಕುಮಾರ ನಾಯಕ ಪ್ರರ್ತಕರ್ತರಿಗೆ ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಕನಾರ್ಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಅನ್ಸಾರ್ ಶೇಖ್ ಮಾತನಾಡಿ, ಪತ್ರಿಕೆ ಕೇವಲ ಮಾತಿನಲ್ಲಿ ಹೇಳಿ ಬೀಸಾಡುವ ವಸ್ತುವಲ್ಲ. ಪತ್ರಿಕೆ ಅಸ್ತಿತ್ವಕ್ಕೆ ಬಂದಾಗ ಹಲವು ಕ್ರಾಂತಿಗಳಾಗಿರುವುದನ್ನು ನಾವು ತಿಳಿದಿದ್ದೇವೆ. ಅಲ್ಲದೇ, ಹಲವು ಸರ್ಕಾರಗಳು ಉರುಳಿವೆ. ಹಲವಾರು ಸಂದರ್ಭದಲ್ಲಿ ವ್ಯವಸ್ಥೆಯ ವಿರುದ್ಧ ಹೋರಾಡಿ ಜನರಿಗೆ ನ್ಯಾಯ ದೊರಕಿಸಲು ಪತ್ರಿಕೆಗಳು ಬಹುಮುಖ್ಯ ಪಾತ್ರ ನಿರ್ವಹಿಸಿದೆ ಎಂದ ಅವರು, ಪತ್ರಕರ್ತರಿಗೆ ಸೂಕ್ತ ರಕ್ಷಣೆಯಿಲ್ಲದಿರುವುದು ವಿಷಾದದ ಸಂಗತಿ ಎಂದರು.ಪತ್ರಿಕಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಆನ್‍ಲೈನ್ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉಪಾಧ್ಯಕ್ಷ ರವಿ ಗಾವಡಿ, ಖಜಾಂಚಿ ರಾಘವೇಂದ್ರ ದಿವಾಕರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಸುಬ್ರಾಯ ಭಟ್ಟ ಸೇರಿದಂತೆ ತಾಲೂಕಿನ ಪತ್ರಕರ್ತರು, ಸಂಘದ ಸದಸ್ಯರು, ಮಾಧ್ಯಮ ಕಚೇರಿಗಳ ಸಿಬ್ಬಂದಿಗಳು ಇದ್ದರು. ಮಂಜುನಾಥ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಗಣೇಶ ಜೋಶಿ ನಿರೂಪಿಸಿದರು. ಅಮರನಾಥ ಭಟ್ಟ ವಂದಿಸಿದರು.

Be the first to comment

Leave a Reply

Your email address will not be published.


*