ಜಿಲ್ಲಾ ಸುದ್ದಿ
ಕುಮಟಾ: ಕೊರೊನಾ ಎರಡನೇಯ ಅಲೆಯ ಸಂದರ್ಭದಲ್ಲಿ ಜಿಲ್ಲೆಯ ಕೆಲವು ಸರ್ಕಾರಿ ತಾಲೂಕಾಸ್ಪತ್ರೆಯಲ್ಲಿ ಕೋವಿಡೇತರ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಅಗತ್ಯವಿದ್ದ ರೋಗಿಗಳಿಗೆ ಹಾಸಿಗೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಕ.ರ.ವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಜಿಲ್ಲಾಡಳಿತವು ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಉತ್ತಮ ಕ್ರಮ ಅನುಸರಿಸಿರುವುದನ್ನು ಕ.ರ.ವೇ ಅಭಿನಂದಿಸುತ್ತದೆ. ಕೋವಿಡ್ ಎರಡನೇಯ ಅಲೆಯ ಸಂದರ್ಭದಲ್ಲಿ ಜಿಲ್ಲೆಯ ಕೆಲವೊಂದು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡೇತರ ಬಡ ರೋಗಿಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳತೊಡಗಿದೆ. ಅಲ್ಲದೇ, ಹಾಸಿಗೆ ವ್ಯವಸ್ಥೆಯಿಲ್ಲದೇ ರೋಗಿಗಳು ಪರದಾಡುವಂತಾಗಿದೆ. ಇನ್ನು ಹೊರ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿಕೊಳ್ಳದೇ ಕಾರವಾರ ಜಿಲ್ಲಾಸ್ಪತ್ರೆಗೆ ಹೋಗುವಂತೆ ಕೆಲವು ತಾಲೂಕು ಆಸ್ಪತ್ರೆಯ ವೈದ್ಯರು ತಿಳಿಸುತ್ತಿದ್ದಾರೆ ಎಂಬ ಆರೋಪವಿದೆ ಎಂದರು.
ಜಿಲ್ಲೆಯ ಪ್ರತಿ ತಾಲೂಕಾಸ್ಪತ್ರೆಯಲ್ಲಿ ಕೋವಿಡೇತರ ರೋಗಿಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಹಾಸಿಗೆಯ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕು. ಅದೇರೀತಿ ಜಿಲ್ಲಾಸ್ಪತ್ರೆಯಲ್ಲಿಯೂ ಸಹ ಹೊರ ತಾಲೂಕಿನಿಂದ ಬಂದ ರೋಗಿಗಳಿಗೆ ಸರಿಯಾದ ಸ್ಪಂದನೆ ಸಿಗುವಂತೆ ಸೂಕ್ತ ಕ್ರಮ ಅನುಸರಿಸಲು ಜಿಲ್ಲಾಡಳಿತ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕಾರವಾರ ನಗರದ ಘಟಕಾಧ್ಯಕ್ಷ ಅಂತೋನಿ ಫರ್ನಾಂಡಿಸ್. ಹೊನ್ನಾವರ ತಾಲೂಕಾಧ್ಯಕ್ಷ ಮಂಜುನಾಥ ಗೌಡ ಸೇರಿದಂತೆ ಕ.ರ.ವೇಯ ಪ್ರಮುಖರುಹಾಗೂ ಪದಾಧಿಕಾರಿಗಳು ಇದ್ದರು.
Be the first to comment