ಜಿಲ್ಲಾ ಸುದ್ದಿಗಳು
ಕಾರವಾರ
ತಾಲೂಕಿನ ಕದ್ರಾ, ಕದ್ರಾ ಪುನರ್ವಸತಿ ಕೇಂದ್ರ ಹಾಗೂ ಮಲ್ಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಕಾಳಜಿ ಕೇಂದ್ರಗಳಿಗೆ ಶಾಸಕಿ ರೂಪಾಲಿ ನಾಯ್ಕ ಭೇಟಿ ನೀಡಿ, ಸಂತ್ರಸ್ತರಿಗೆ ಧೈರ್ಯ ಹೇಳಿದರು.
ಸಂತ್ರಸ್ತರಿಗೆ ಸರ್ಕಾರದ ಮಾರ್ಗ ಸೂಚಿಯಂತೆ ಪರಿಹಾರ ನೀಡಲಾಗುವುದು. ಹಿಂದಿನ ಬಾರಿ ಅನ್ಯಾಯವಾದಂತೆ ಈ ಬಾರಿ ಯಾರಿಗೂ ಅನ್ಯಾಯವಾಗಬಾರದು. ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಲಾಭ ಸಿಗಬೇಕು. ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮನೆ ಕಳೆದುಕೊಂಡವರಿಗೆ ಸ್ವಂತ ಜಾಗ ಇಲ್ಲದಿದ್ದರೆ, ಅಂತಹವರಿಗೆ ಸರ್ಕಾರದಿಂದ ಜಾಗ ನೀಡಿ ಐದು ಲಕ್ಷದಲ್ಲಿ ವಸತಿ ಸೌಲಭ್ಯ ನೀಡಲಾಗುವುದು. ಇದಕ್ಕೆ ಒಪ್ಪುವುದಾದರೆ ಮುಂದಿನ ಪ್ರಕ್ರಿಯೆ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎತ್ತರದ ಪ್ರದೇಶದಲ್ಲಿರುವ ಜಾಗಗಳನ್ನು ಗುರುತಿಸಿ ಮಾಹಿತಿ ನೀಡಬೇಕು. ಒಂದು ವೇಳೆ ಜನರು ಬರಲು ಇಚ್ಚಿಸಿದರೆ ಅವರ ಮಾಹಿತಿ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ ಹಾಗೂ ತಾಲ್ಲೂಕು ಪಂಚಾಯತ ಇಒ ಅವರಿಗೆ ಶಾಸಕಿ ರೂಪಾಲಿ ಸೂಚಿಸಿದರು.
ಕೆಪಿಸಿ ಅಧಿಕಾರಿಗಳು ತರಾಟೆಗೆ: ಪ್ರವಾಹ ಸಂದರ್ಭದಲ್ಲಿ ಜನರ ನೆರವಿಗೆ ಬಾರದ ಕೆಪಿಸಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಳ್ಳಲಾಯಿತು. ಬಹಳಷ್ಟು ವರ್ಷದಿಂದ ಪ್ರವಾಹ ಬಂದಾಗಲೆಲ್ಲ ಇಲ್ಲಿಯ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.
ಪ್ರವಾಹದಲ್ಲಾದರೂ ಜನರ ಕಷ್ಟಕ್ಕೆ ಅಧಿಕಾರಿಗಳು ಬರಬೇಕಿತ್ತು. ಕೆಪಿಸಿ ಅಧಿಕಾರಿಗಳು ಈ ರೀತಿಯ ವರ್ತನೆ ಮಾಡಬಾರದು. ಕೂಡಲೇ ಖಾಲಿ ಇರುವ ವಸತಿ ಗೃಹಗಳನ್ನು ಸಂತ್ರಸ್ತರಿಗೆ ನೀಡಬೇಕು ಇಲ್ಲದಿದ್ದರೆ ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಯಿತು.ಈ ಸಂದರ್ಭದಲ್ಲಿ ಕದ್ರಾ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಬು ನಾಯ್ಕ, ಗ್ರಾಮ ಪಂಚಾಯತ ಸದಸ್ಯರು, ಡಿವೈಎಸ್‍ಪಿ, ತಹಶೀಲ್ದಾರರು, ತಾಲೂಕು ಪಂಚಾಯತ ಇಒ, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Be the first to comment