ರಾಜ್ಯ ಸುದ್ದಿ
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಘಾಡಸಾಯಿ ಮಜರೆಯ ವೃದ್ಧೆಯಾದ ಗೋಪಿಕಾ ಗುನಗಿ ಸಂಕಷ್ಟಕ್ಕೆ, ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಸ್ಪಂದಿಸುವ ಮೂಲಕ ಮಾನವೀಯತೆ ತೋರಿದ್ದಾರೆ.ವೃದ್ಧೆ ಏಕಾಂಗಿಯಾಗಿದ್ದು, ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ ಪರಿಸ್ಥಿತಿಯ ನಡುವೆ ಜ್ಯೂನ್ 17 ರಂದು ಸುರಿದ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಸಂಪೂರ್ಣ ನುಜ್ಜುಗುಜ್ಜಾಗಿತ್ತು. ಇದೂ ಅಲ್ಲದೆ ವೃದ್ಧೆಗೆ ಸಂಧ್ಯಾ ಸುರಕ್ಷಾ ಪಿಂಚಣಿ ಸರಿಯಾಗಿ ದೊರಕದೇ ತೊಳಲಾಡುತ್ತಿದ್ದರು. ಮನೆಯ ಹಿಂದುಗಡೆ ವಿದ್ಯುತ್ ಕಂಬ ಮನೆಯ ಮೇಲೆ ಬೀಳುವ ಪರಿಸ್ಥಿತಿಯಲ್ಲಿತ್ತು.
ಇದೆಲ್ಲದರ ಮಾಹಿತಿ ಪಡೆದುಕೊಂಡ ಕಾರವಾರ ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿಯವರು ಹೆಸ್ಕಾಂ ನವರಿಗೆ ತಕ್ಷಣ ಕಂಬವನ್ನು ಸರಿಪಡಿಸುವಂತೆ ಸೂಚಿಸಿ, ಮನೆಯ ಮೇಲ್ಛಾವಣಿ ಸರಿಪಡಿಸಿ, ಪಡಿತರ ವ್ಯವಸ್ಥೆಯನ್ನು ಮಾಡಿದ್ದಾರೆ.ಅಲ್ಲದೆ ಹಾನಿ ಲೆಕ್ಕಾಚಾರದ ಬಗ್ಗೆ ಪರಿಶೀಲನೆಯಿಂದ ತುರ್ತಾಗಿ ಪರಿಹಾರ ಬಿಡುಗಡೆ ಮಾಡುವ ಬಗ್ಗೆ ತಹಶೀಲ್ದಾರರಿಗೆ ಸೂಚಿಸಿದರು.ಕಾರವಾರ ಉಪವಿಭಾಗಾಧಿಕಾರಿಯಾದ ವಿದ್ಯಾಶ್ರೀ ಚಂದರಗಿಯವರು ಇಂತಹ ಕಷ್ಟಕರ ಸನ್ನಿವೇಶದಲ್ಲಿ ವೃದ್ಧೆಯ ಕಷ್ಟಕ್ಕೆ ತಕ್ಷಣ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದರು.
Be the first to comment