ರಾಜ್ಯ ಸುದ್ದಿ
ಕುಮಟಾ: ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ದಿ.ಮೋಹನ ಕೆ. ಶೆಟ್ಟಿಯವರ ಜನ್ಮದಿನದ ಪ್ರಯುಕ್ತ ಗುರುವಾರ ದಿ.ಮೋಹನ ಕೆ. ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ತಾಲೂಕಾಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ 50 ಸಾವಿರ ರೂ.ದೇಣಿಗೆ ಹಾಗೂ ಆಸ್ಪತ್ರೆಯಲ್ಲಿನ ಒಳ ರೋಗಿಗಳಿಗೆ ಮತ್ತು ಕೊರೊನಾ ಸೋಂಕಿತರಿಗೆ ಹಣ್ಣು-ಹಂಪಲು, ಬ್ರೆಡ್-ಬಿಸ್ಕೆಟ್‍ಗಳನ್ನೊಳಗೊಂಡಿರುವ ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು.
ನಂತರ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಹತ್ತಿರದಲ್ಲಿಯೇ ಚಿಕಿತ್ಸೆ ಲಭಿಸಬೇಕೆಂಬ ಉದ್ದೇಶದಿಂದ ಪ್ರತಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರವನ್ನು ತೆರೆದಿತ್ತು. ಆದರೆ ಕೆಲವು ಉಪಕರಣಗಳ ಕೊರತೆಯಿಂದ ಸದ್ಯ ಡಯಾಲಿಸಿಸ್ ಚಿಕಿತ್ಸೆಗೆ ವ್ಯತ್ಯಯವಾಗುತ್ತಿದೆ. ಇದರಿಂದ ಡಯಾಲಿಸಸ್ ರೋಗಿಗಳಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದ್ದು, ಸಕಾಲಕ್ಕೆ ಚಿಕಿತ್ಸೆ ದೊರೆಯಬೇಕು ಹಾಗೂ ಡಯಾಲಿಸಸ್ ಕಾರ್ಯ ನಿರಂತರವಾಗಿರಬೇಕು ಎಂಬ ಉದ್ದೇಶದಿಂದ ದಿ. ಮೋಹನ ಶೆಟ್ಟಿಯವರ ಜನ್ಮ ದಿನದ ಅಂಗವಾಗಿ ಮೋಹನ ಕೆ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಡಯಾಲಿಸಸ್ ಘಟಕಕ್ಕೆ 50 ಸಾವಿರ ರೂ. ದೇಣಿಗೆ ನೀಡಲಾಗಿದೆ. ಅಲ್ಲದೇ, ಆಸ್ಪತ್ರೆಯಲ್ಲಿನ ಒಳ ರೋಗಿಗಳಿಗೆ ಹಾಗೂ ಕೊರೊನಾ ಸೋಂಕಿತರಿಗೆ ಹಣ್ಣು ಹಂಪಲು ಸೇರಿದಂತೆ ಅಗತ್ಯ ವಸ್ತುಗಳನ್ನೊಳಗೊಂಡ ಆಹಾರದ ಕಿಟ್ ವಿತರಿಸಲಾಗಿದೆ ಎಂದ ಅವರು, ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ರವಿಕುಮಾರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ, ತಾಲೂಕಾ ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಡಾ.ಶ್ರೀನಿವಾಸ ನಾಯಕ, ಪ್ರಮುಖರಾದ ಸುರೇಖಾ ವಾರೇಕರ, ಮುಜಾಫರ್ ಸಾಬ, ಶಶಿಕಾಂತ ನಾಯ್ಕ, ದೀಪಾ ನಾಯ್ಕ, ಕೃಷ್ಣಾನಂದ ವೆರ್ಣೇಕರ, ಜಗದೀಶ ಹರಿಕಂತ್ರ, ಆನಂದು ನಾಯಕ, ವೀಣಾ ನಾಯಕ, ಚಂದ್ರಹಾಸ ನಾಯಕ, ಬೀರ ಗೌಡ, ವಿನು ಜಾರ್ಜ, ಮೈಕೆಲ್, ಬೀರಣ್ಣ ನಾಯಕ, ನಿತ್ಯಾನಂದ ನಾಯ್ಕ, ಮನೋಜ ನಾಯಕ, ದತ್ತು ಶೆಟ್ಟಿ, ಸಂತೋಷ ನಾಯ್ಕ, ವಿಜಯ ವೆರ್ಣೇಕರ ಸೇರಿದಂತೆ ಇನ್ನಿತರರು ಇದ್ದರು.
Be the first to comment