ರಾಜ್ಯ ಸುದ್ದಿ
ಕುಮಟಾ: ತೌಕ್ತೆ ಚಂಡಮಾರುತದ ಪರಿಣಾಮ ತೀವ್ರ ಹಾನಿಗೊಳಗಾದ ತಾಲೂಕಿನ ದೀವಗಿ, ಶಶಿಹಿತ್ತಲ ಹಾಗೂ ವನ್ನಳ್ಳಿ ಮುಂತಾದ ಪ್ರದೇಶಗಳಿಗೆ ಕೇಂದ್ರ ವಿಪತ್ತು ನಿರ್ವಹಣಾ ತಂಡವು ಗುರುವಾರ ಭೇಟಿ ನೀಡಿ, ಹಾನಿಯ ಕುರಿತು ಪರಿಶೀಲನೆ ನಡೆಸಿತು.
ತೌಕ್ತೆ ಚಂಡಮಾರುತದಿಂದ ತೀವ್ರ ಹಾನಿಯುಂಟಾದ ತಾಲೂಕಿನ ದೀವಗಿ, ಶಶಿಹಿತ್ತಲ ಹಾಗೂ ವನ್ನಳ್ಳಿ ಭಾಗಗಳಲ್ಲಿನ ಮನೆ, ಕೃಷಿ ಭೂಮಿ, ತೋಟ ಗದ್ದೆ, ಸಮುದ್ರದ ತಡೆಗೋಡೆ, ಶಾಲೆ, ಮೀನುಗಾರಿಕಾ ದೋಣಿ ಮತ್ತು ಸಲಕರಣೆ ಹಾಗೂ ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳಿಗೆ ಉಂಟಾದ ಹಾನಿಯ ಕುರಿತು ಕೇಂದ್ರ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ನಂತರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತಾಲೂಕಿನಲ್ಲಿ ಸಂಭವಿಸಿದ ಹಾನಿಯ ಬಗ್ಗೆ ಕೇಂದ್ರ ವಿಪತ್ತು ನಿರ್ವಹಣಾ ತಂಡಕ್ಕೆ ಸಂಪೂರ್ಣ ಮಾಹಿತಿ ಒದಗಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ವಿಪತ್ತು ನಿರ್ವಹಣಾ ತಂಡದ ಸುಶೀಲ ಪಾಲ, ಸದಾನಂದ ಬಾಬು, ಓಂ ಕಿಶೋರ, ಶ್ರೀನಿವಾಸ ರೆಡ್ಡಿ, ಡಾ. ಪುಟ್ಟುಸ್ವಾಮಿ, ಮಹೇಶಕುಮಾರ, ಜಿಲ್ಲಾಧಿಕಾರಿ ಮುಲೈ ಮುಗಿಲನ್, ಐಎಎಸ್ ಅಧಿಕಾರಿ ವಿಶ್ವಾಸ, ಉಪವಿಭಾಗಾಧಿಕಾರಿ ಎಮ್. ಅಜಿತ ರೈ, ತಹಸೀಲ್ದಾರ ಆರ್.ವಿ.ಕಟ್ಟಿ, ಸಿಪಿಐ ಶಿವಪ್ರಕಾಶ ನಾಯ್ಕ, ಪಿಎಸ್‍ಐ ಆನಂದಮೂರ್ತಿ, ರವಿ ಗುಡ್ಡಿ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.
Be the first to comment