ಮುದ್ದೇಬಿಹಾಳ ಕೃಷಿ ಕೇಂದ್ರದಲ್ಲಿ ನಡೆದಿದೆ ರೈತರಿಂದ ಹಣ ವಸೂಲಿ ದಂಧೆ…! ಗ್ರಾಮ ಸೇವಕರ ವರ್ಗಾವಣೆಗೆ ಆಗ್ರಹಿಸಿದ ರೈತರು

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಈಗಾಗಲೇ ನಮ್ಮ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಆದರೆ ಇರುವ ಸಿಬ್ಬಂದಿಗಳಿಂದ ರೈತರಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ರೈತರಿಗೆ ಮೋಸ ಮಾಡಿದ್ದರ ಬಗ್ಗೆ ರೈತರು ಮನವಿ ಸಲ್ಲಿಸಿದ್ದು ಸೂಕ್ತ ಕ್ರಮ ಜರುಗಿಸುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು.
-ರೇವಣೆಪ್ಪ ಮನಗೂಳಿ, ಸಹಾಯಕ ಕೃಷಿ ಅಧಿಕಾರಿಗಳು, ಮುದ್ದೇಬಿಹಾಳ.

ರೈತರಿಗೆ ಕೃಷಿ ಇಲಾಕೆಯಿಂದ ಬರುವ ತಾಡಪತ್ರಿ ಸೇರಿದಂತೆ ಇನ್ನಿತರ ಸೌಲಭ್ಯಗಳಲ್ಲಿ ಮುದ್ದೇಬಿಹಾಳ ಕೃಷಿ ಕೇಂದ್ರದ ಗ್ರಾಮ ಸೇವಕ ಪಿ.ಕೆ.ಪಾದಗಟ್ಟಿ ಹಾಗೂ ಏಓ ಅವರು ಮಧ್ಯವರ್ತಿಗಳ ಮೂಲಕ ರೈತರಿಂದ ಹಣ ವಸೂಲಿ ಮಾಡುವ ದಂಧೆ ನಡೆಸಿದ್ದು ಕೂಡಲೇ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ರೈತರು ಬುಧವಾರ ವಿಜಯಪುರ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.



ಈ ಕುರಿತು ಮಾತನಾಡಿದ ರೈತ ಪರಶುರಾಮ ತಳವಾರ, ರೈತರಿಗಾಗಿ ಇಲಾಖೆಯಲ್ಲಿ ಬಂದಂತಹ ಪೈಪ್, ತಾಡಪತ್ರಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸುವಂತೆ ತಿಳಿಸಿದರೆ ಗ್ರಾಮ ಸೇವಕ ಪಾದಗಟ್ಟಿಯವರು ಸರಿಯಾಗಿ ಸ್ಪಂಧಿಸುತ್ತಿಲ್ಲ. ಇವರಿಗೆ ಏಓ ಬಸವರಾಜ ಟಕ್ಕಳಕಿ ಅವರ ಬೆಂಬಲವೂ ಇದೆ. ಇದರಿಂದಲೇ ರೈತರಿಂದ ಹಣ ವಸೂಲಿ ದಂಧೆಗೆ ಬಿದ್ದಿದ್ದಾರೆ. ಒಬ್ಬ ರೈತನ ಹೆಸರಿನಲ್ಲಿ ಬಂದಂತಹ ಸೌಲಭ್ಯವನ್ನು ಎರಡರಷ್ಟು ಹಣ ಪಡೆದು ಇನ್ನೊಬ್ಬರಿಗೆ ಒದಗಿಸುತ್ತಿದ್ದಾರೆ. ಇದರ ಬಗ್ಗೆ ಪ್ರಶ್ನಿಸಿದರೆ ಮೇಲಾಧಿಕಾರಿಗಳಿಗೆ ಕೇಳಿರಿ ಎಂಬ ಸಬೂಬು ಹೇಳುತ್ತಾರೆ. ಕೂಡಲೇ ಇದರ ಬಗ್ಗೆ ಮೇಲಾಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಸ್ಥಾನಿಕ ಚೌಕಾಸಿ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.



ಮಧ್ಯವರ್ತಿಗಳ ಹಾವಳಿ:
ಕೃಷಿ ಇಲಾಖೆಯಲ್ಲಿ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರು ಕೃಷಿ ಕೇಂದ್ರಕ್ಕೆ ಹೋದರೆ ಅಲ್ಲಿನ ಅಧಿಕಾರಿಗಳು ಖಾಸಗಿ ವ್ಯಕ್ತಿಗಳತ್ತ ಕೈಮಾಡಿ ಅವರಿಗೆ ಅರ್ಜಿ ನೀಡುವಂತೆ ಹೇಳುತ್ತಾರೆ. ಖಾಸಗಿ ವ್ಯಕ್ತಿಗಳು ರೈತರಿಂದ ೨೦೦ ರಿಂದ ೫೦೦ ರೂಪಾಯಿ ಹಣ ಪಡೆದು ಅರ್ಜಿಯನ್ನು ಸ್ವೀಕರಿಸುತ್ತಾರೆ. ಮಧ್ಯವರ್ತಿಗಳಿಂದ ಹಣ ವಸೂಲಿಗೆ ಸ್ಥಳೀಯ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.
ತಾಡಪತ್ರಿಗಳ ಮಾರಾಟ:
ರೈತರು ಜಮೀನುಗಳಿಗೆ ಬೇಕಾಗುವ ತಾಡಪತ್ರಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಹಾಕಿದ್ದರೂ ಅವುಗಳನ್ನು ನಿಜ ಫಲಾನುಭವಿಗಳಿಗೆ ಮುಟ್ಟಿಸದೇ ೧೫೦೦ ರಿಂದ ೧೮೦೦ ಹೆಚ್ಚಿನ ಹಣ ಪಡೆದು ಬೇರೊಬ್ಬ ರೈತರಿಗೆ ಮಾರಾಟ ಮಾಡುವಲ್ಲಿ ಗ್ರಾಮ ಸೇವಕರು ನಿರತರಾಗಿದ್ದು ಕೂಡಲೇ ಇವರನ್ನು ಮುದ್ದೇಬಿಹಾಳ ಕೃಷಿ ಕೇಂದ್ರದಿಂದ ಬೇರೆಡೆಗೆ ಸ್ಥಳಾಂತರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಕೂಡಲೇ ವರ್ಗಾವಣೆ ಮಾಡದಿದ್ದರೆ ಇಲಾಖೆ ಎದುರಿಗೆ ಹಡಲಗೇರಿ ಗ್ರಾಪಂ ವ್ಯಾಪ್ತಿಯ ನಾಲ್ಕು ಗ್ರಾಮಗಳ ರೈತರು ಸತ್ಯಾಗ್ರಹಕ್ಕೆ ಮುಂಗಾಬೇಕಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ವಿಠ್ಠಲ  ಹಾರಿಂದ್ರಾಳ, ರೈತರಾದ ಎಚ್.ಡಿ.ವಾಲಿಕಾರ, ಮುಖಂಡ ರಾಜಣ್ಣ ರಾಜನಾಳ, ಶರಣಪ್ಪ ಹುಳ್ಳಿ, ಹಣಮಂತ ಜಟ್ಟಗಿ, ಶಿವಪ್ಪ ವಾಲಿಕಾರ, ಬಿ.ಎಚ್.ಹರಿಂದ್ರಾಳ, ಎಸ್.ಎಸ್.ಮುದ್ನಾಳ, ಎಂ.ಎ.ಹುನಶ್ಯಾಳ, ಎಸ್.ಎಸ್.ಹೂಗಾರ, ಎಸ್.ಪಿ.ತಳವಾರ, ಎಸ್.ಆರ್.ಪಾಟೀಲ, ಎಸ್.ಬಿ.ವಾಲಿಕಾರ, ಬಸಪ್ಪ ಅಂಬಿಗೇರ ತಿಳಿಸಿದ್ದಾರೆ.

 

Be the first to comment

Leave a Reply

Your email address will not be published.


*