ರಸ್ತೆ ಸೌಲಭ್ಯ ವಂಚಿತ ಕಾರವಾರದ ಮಚ್ಚಳ್ಳಿ ಗ್ರಾಮ; ಅನಾರೋಗ್ಯ ಪೀಡಿತ ವೃದ್ಧೆಯನ್ನು ಜೋಲಿಯಲ್ಲೇ 7 ಕಿ.ಮೀ ಹೊತ್ತೊಯ್ದು ಆಸ್ಪತ್ರೆ ಸೇರಿಸಿದ ಗ್ರಾಮಸ್ಥರು

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿ 

CHETAN KENDULI

ಕಾರವಾರ: ಅನಾರೋಗ್ಯಕ್ಕೊಳಗಾದ ವೃದ್ಧೆಯೋರ್ವರನ್ನು ಕುರ್ಚಿಯ ಜೋಲಿಯಲ್ಲಿ ಸುಮಾರು 7 ಕಿ.ಮೀ ಕಡಿದಾದ ಕಾಡುದಾರಿಯಲ್ಲಿ ಹೊತ್ತು ತಂದು ಆಸ್ಪತ್ರೆ ಸೇರಿಸಿರುವ ಘಟನೆ ಕಾರವಾರದ ಕುಗ್ರಾಮ ಮಚ್ಚಳ್ಳಿಯಲ್ಲಿ ನಡೆದಿದೆ.ಕಾರವಾರ ತಾಲೂಕಿನ ಅಮದಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ದಟ್ಟಾರಣ್ಯದ ಮಧ್ಯ ಭಾಗದಲ್ಲಿರುವ ಮಚ್ಚಳ್ಳಿ ಗ್ರಾಮದಲ್ಲಿ ನೇಮಿಗೌಡ ಎನ್ನುವವರು ಅನಾರೋಗ್ಯಕ್ಕೊಳಗಾಗಿದ್ದರು. ರಸ್ತೆ ಸಂಪರ್ಕ ಇಲ್ಲದ ಕಾರಣ ಗ್ರಾಮಕ್ಕೆ ಯಾವುದೇ ಆಂಬ್ಯುಲೆನ್ಸ್ ಅಥವಾ ಇತರೆ ವಾಹನ ಬರಲು ಸಾಧ್ಯವಿರಲಿಲ್ಲ.

ಹೀಗಾಗಿ ಗ್ರಾಮದ ಯುವಕರೇ ಸೇರಿ ಪ್ಲಾಸ್ಟಿಕ್ ಕುರ್ಚಿಯೊಂದನ್ನು ಕೋಲಿಗೆ ಬಳ್ಳಿಯ ಸಹಾಯದಿಂದ ತೊಟ್ಟಿಲಿನ ರೀತಿಯಲ್ಲಿ ಕಟ್ಟಿಕೊಂಡು ಅದರಲ್ಲಿ ವೃದ್ಧೆಯನ್ನು ಕೂರಿಸಿ ಹೆಗಲ ಮೇಲೆ ಹೊತ್ತು ಅಮದಳ್ಳಿ ಗ್ರಾಮವನ್ನು ತಲುಪಿ, ಬಳಿಕ ಅಲ್ಲಿಂದ ವಾಹನದ ಮೂಲಕ ಆಸ್ಪತ್ರೆ ತಲುಪಿದ್ದಾರೆ. ಸದ್ಯ ವೃದ್ಧೆಗೆ ಚಿಕಿತ್ಸೆ ಲಭಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.ಕಾರವಾರ ತಾಲ್ಲೂಕಿನ ಅಮದಳ್ಳಿ ಗ್ರಾಮದಿಂದ ಸುಮಾರು 10 ಕಿ.ಮೀ ದೂರದಲ್ಲಿ ಗುಡ್ಡದ ಮೇಲಿರುವ ಮಚ್ಚಳ್ಳಿ ಗ್ರಾಮಕ್ಕೆ ವಾಹನ ಸಂಚಾರ ಅಸಾಧ್ಯವಾಗಿದ್ದು, ಹತ್ತು ಕಿಲೋಮೀಟರ್ ಕಡಿದಾದ ದುರ್ಗಮ ರಸ್ತೆಯಲ್ಲಿ ಕಾಲು ನಡಿಗೆಯಲ್ಲೇ ಬರಬೇಕು. ಅದರಲ್ಲೂ ಮಳೆಗಾಲ ಪ್ರಾರಂಭವಾದ ಬಳಿಕ ಸಂಚಾರಕ್ಕೆ ಇಲ್ಲಿ ಹರಸಾಹಸ ಪಡಬೇಕು.

ಮಚ್ಚಳ್ಳಿ ಗುಡ್ಡದ ಮೇಲಿನ ಗ್ರಾಮವಾದ್ದರಿಂದ ಜನವಸತಿ ವಿರಳವಾಗಿದ್ದು, ಗ್ರಾಮದಲ್ಲಿ 13 ಕುಟುಂಬಗಳಿದ್ದು, 60 ಮಂದಿ ಮಾತ್ರ ವಾಸವಾಗಿದ್ದಾರೆ. ಗ್ರಾಮದವರು ಏನೇ ಅಗತ್ಯ ವಸ್ತು ತರಬೇಕು ಅಂದರೂ 10 ಕಿ.ಮೀ ದೂರದ ಅಮದಳ್ಳಿ ಇಲ್ಲವೇ 15 ಕಿ.ಮೀ ದೂರದ ಕಾರವಾರ ನಗರಕ್ಕೇ ವಾಹನ ಹಿಡಿದು ತೆರಳಬೇಕು.ಗ್ರಾಮದಲ್ಲಿ ಆರೋಗ್ಯ ಸೇವೆಯ ಸೌಲಭ್ಯವೂ ಇಲ್ಲವಾಗಿದ್ದು, ಯಾರಾದರೂ ಅನಾರೋಗ್ಯಕ್ಕೆ ತುತ್ತಾದಲ್ಲಿ ಅವರನ್ನು ಹೊತ್ತುಕೊಂಡೇ ಅಮದಳ್ಳಿ ಗ್ರಾಮಕ್ಕೆ ಕರೆ ತರಬೇಕು. ಕಾಲು ದಾರಿಯಲ್ಲಿ ಸುಮಾರು 1 ಗಂಟೆಗೂ ಅಧಿಕ ಸಮಯ ತಗಲುತ್ತದೆ. ಒಂದು ವೇಳೆ ತುರ್ತು ಪರಿಸ್ಥಿತಿಯಾಗಿದ್ದರೆ ಹೆಚ್ಚಿನ ಅನಾಹುತವೇ ಸಂಭವಿಸುವ ಸಾಧ್ಯತೆ ಇದೆ. ಇದು ಹಲವು ದಶಕಗಳಿಂದ ಇರುವ ಸಮಸ್ಯೆಯಾಗಿದ್ದು, ಇದುವರೆಗೂ ಗ್ರಾಮಕ್ಕೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಆಗಿಲ್ಲ.ಈ ಬಗ್ಗೆ ಹಲವಾರು ಬಾರಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದರೂ, ಇದುವರೆಗೆ ಪ್ರಯೋಜನವಾಗಿಲ್ಲ. ತಮ್ಮ ಗ್ರಾಮಕ್ಕೆ ರಸ್ತೆಯೊಂದನ್ನು ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಹಲವಾರು ವರ್ಷಗಳಿಂದ ಮನವಿ ನೀಡುತ್ತಾ ಬಂದರೂ ಇದುವರೆಗೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಾದರೂ ಈ ಬಗ್ಗೆ ಸರ್ಕಾರ ಗಮನ ಹರಿಸಿ ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Be the first to comment

Leave a Reply

Your email address will not be published.


*