ಮಲ್ಪೇ ಬಲರಾಮ್ ಬೋಟಿನಲ್ಲಿ ಮೀನುಗಾರರ ಬಲೆಗೆ ಬಿದ್ದ 18 ಕಿ.ಗ್ರಾಂ ಗೋಳಿ ಮೀನು..

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಮಂಗಳೂರು

ಮಲ್ಪೆ ಕಡಲ ಕಿನಾರೆಯಿಂದ ಮೀನುಗಾರಿಕೆಗೆ ತೆರಳಿದ್ದ ಬಲರಾಮ್ ಎಂಬ ಹೆಸರಿನ ಬೋಟಿನಲ್ಲಿದ್ದ ಮೀನುಗಾರರ ಬಲೆಗೆ ಹದಿನೆಂಟು ಕಿ.ಗ್ರಾಂ ತೂಕದ ಗೋಳಿ ಮೀನು ಬಿದ್ದಿದೆ. ಅದು ದೊಡ್ಡ ಮೀನಾಗಿರುವುದಕ್ಕಷ್ಟೇ ಅಲ್ಲ ದೊಡ್ಡ ಮೊತ್ತವನ್ನೂ ಬೋಟಿನ ಮಾಲೀಕ ಶಾನ್ ರಾಜ್ ತೊಟ್ಟಂ ಅವರಿಗೆ ತಂದುಕೊಟ್ಟಿದೆ. ಈ ಮೀನು ಒಂದು ಲಕ್ಷದ ಎಂಭತ್ತೊಂದು ಸಾವಿರದ ಇನ್ನೂರು ರೂಪಾಯಿಗೆ ಮಾರಟವಾಗಿದೆ. ಅಂದರೆ, ಕೇಜಿಗೆ ಸುಮಾರು ಹತ್ತು ಸಾವಿರ ಬೆಲೆಬಾಳುವ ಕ್ಯಾಚಿದು. ಒಂದೇ ಮೀನಿಂದ ಇಷ್ಟು ಹಣ ಪಡೆಯುತ್ತಿರುವುದು ಉಡುಪಿಯ ಮಟ್ಟಿಗೆ ದಾಖಲೆ.ಎರಡು ತಿಂಗಳ ಹಿಂದೆ ಮಹಾರಾಷ್ಟ್ರದ ತುಕಾರಾಮ್ ತಾರೆ ಎಂಬವರ ಒಂದೇ ಬಲೆಗೆ ನೂರೈವತ್ತೇಳು ಗೋಳಿಮೀನುಗಳು ಬಿದ್ದಿದ್ದವು. ಒಂದು ಕೋಟಿ ಮೂವತ್ಮೂರು ಲಕ್ಷ ರೂಪಾಯಿಗಳಷ್ಟು ಹಣಕ್ಕೆ ಆ ಮೀನುಗಳು ಮಾರಾಟವಾಗಿ ತಾರೆಯ ಗ್ರಹಗತಿ ಬದಲಿಸಿದ್ದವು.

CHETAN KENDULI

ಗೋಳಿ ಮೀನು ಕಲ್ಮುರಿಯಂತೆ ಸಂದಿಗೊಂದುಗಳಲ್ಲಿ ಬದುಕುವ ಮೀನು. ಬಲೆಗೆ ಬೀಳುವುದು ಕಡಿಮೆ. ಇದರ ಜೀವಶಾಸ್ತ್ರೀಯ ದ್ವಿನಾಮಕರಣ Protonibea diacanthus. ಐಯೋಡಿನ್‌, ಒಮೆಗಾ-3 ಕೊಬ್ಬಿನ ಆಮ್ಲ, ಡಿ.ಎಚ್.ಎ, ಎ.ಪಿ.ಇ, ಕಬ್ಬಿಣ, ಮೆಗ್ನೀಶಿಯಮ್‌, ಸೆಲೆನಿಯಮ್‌ ಮುಂತಾದ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಈ ಮೀನಿಗೆ ಔಷದೀಯ ಗುಣವಿರುತ್ತದೆ ಎನ್ನಲಾಗುತ್ತದೆ. ಅದರಲ್ಲೂ ಈ ಮೀನಿನ ಜಠರ ಭಾಗದಲ್ಲಿ ಇರುವ ಚೀಲದಂತಹ ರಚನೆಗೆ ಸಿಂಗಪೂರ್‌, ಹಾಂಗ್‌ ಕಾಂಗ್‌ ಇಂಡೋನೇಶಿಯಾ, ಜಪಾನ್‌ ಗಳಲ್ಲಿ ಬಹು ಬೇಡಿಕೆಯಿದೆ. ಈ ಚೀಲವೇ ಗೋಳಿಮೀನನ್ನು ಗೋಲ್ಡ್ ಫಿಶ್‌ ಎಂದು ಕರೆಯುವಂತೆ ಮಾಡಿದೆ.

ಗೋಳಿ ಮೀನಿನ ಚರ್ಮದಿಂದ ಸಂಸ್ಕರಿಸಲಾಗುವ ಕೊಲ್ಲಾಜೆನ್‌ ಚರ್ಮದ ಕಾಂತಿಯನ್ನು ಹೆಚ್ಚಿಸಿ ವಯಸ್ಸಾಗುವಿಕೆಯನ್ನು ತಡೆಯಬಲ್ಲದು ಎನ್ನುತ್ತಾರೆ. ನಮ್ಮ ದೇಹದ ವಿವಿಧ ಅಂಗಾಂಶಗಳನ್ನು ಅಂಟಿನಂತೆ ಜೋಡಿಸುವ ಒಂದು ಪ್ರೋಟಿನ್‌ ಯುಕ್ತ ವಸ್ತುವೇ ಕೊಲ್ಲಾಜೆನ್.. ಇದು ಎಲ್ಲ ಪ್ರಾಣಿಗಳ ದೇಹದಲ್ಲಿರುತ್ತದೆ. ಚರ್ಮದ ಭಾಗದಲ್ಲಿ ಹೆಚ್ಚಾಗಿರುತ್ತದೆ. ಸೌಂದರ್ಯ ವರ್ಧಕ ಕ್ರೀಮುಗಳಲ್ಲಿ ಕೊಲ್ಲಾಜೆನ್‌ ಸೇರಿಸುತ್ತಾರಾದರೂ ಚರ್ಮದ ಮೂಲಕ ಈ ವಸ್ತು ಹೀರಿಕೆಯಾಗುವುದು ಅನುಮಾನ. ಒಮೆಗಾ-3 ಕೊಬ್ಬಿನ ಆಮ್ಲದ ಆರೋಗ್ಯ ಮಹತ್ವದ ಬಗ್ಗೆ ಗೊತ್ತೇ ಇದೆ- ಇದು ಹೃದಯ ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ. ಫಾರ್ಮಾಸಿಟಿಕಲ್ ಕಂಪನಿಯವರೇ ಈ ಮೀನುಗಳ ಹರಾಜಿನಲ್ಲಿ ಭಾಗವಹಿಸುತ್ತಾರೆಂದು ಕೇಳಿರುವೆ. ಆದುದರಿಂದ ಬೇರೆ ಬೇರೆ ಔಷದಿಗಳಲ್ಲಿ ಇದರ ಉಪಯೋಗವಿದೆ ಎಂದು ಊಹಿಸಬಹುದು.ಅರಬ್ಬಿ ಸಮದ್ರ ಮತ್ತು ಫೆಸಿಫಿಕ್‌ ಸಾಗರಗಳ ನಡುವೆ ಹೆಚ್ಚಾಗಿ ಕಂಡುಬರುವ ಈ ಮೀನು ಸಮುದ್ರದಲ್ಲಿರುವ ಬಂಗಾರದ ಕೊಪ್ಪರಿಗೆಯಾಗಿದೆ.

Be the first to comment

Leave a Reply

Your email address will not be published.


*