ಕನ್ನಡ ಬರೀ ಭಾಷೆಯಲ್ಲ, ಬದುಕು: ರಾಮಚಂದ್ರನ್ ಆರ್

ವರದಿ: ಚಂದ್ರಕಾಂತ್ ಬೀದರ್

ಜಿಲ್ಲಾ ಸುದ್ದಿಗಳು

ಬೀದರ ನ.1 :

ಕನ್ನಡ ಅಂದರೆ ಬರೀ ಭಾಷೆಯಲ್ಲ, ಅದೊಂದು ಬದುಕು. ನಾವು-ನೀವೆಲ್ಲರೂ ಪ್ರತಿನಿತ್ಯ ಕನ್ನಡವನ್ನೇ ಉಸಿರಾಡುತಿದ್ದೇವೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಫರೇಡ್ ಮೈದಾನದಲ್ಲಿ ನವೆಂಬರ್ 1ರಂದು ನಡೆದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಅವರು ರಾಜ್ಯೋತ್ಸವ ಸಂದೇಶ ನೀಡಿದರು.


 


ಕರ್ನಾಟಕ ಏಕೀಕರಣ ಚಳುವಳಿಯು, ಕನ್ನಡ ನಾಡಿನ ಚರಿತ್ರೆಯಲ್ಲಿ ಅತ್ಯಂತ ಮಹತ್ವದಾಗಿದೆ. ಆಲೂರು ವೆಂಕಟರಾಮಯ್ಯ ರವರು, ಬಿ.ಎಂ.ಶ್ರೀಕಂಠಯ್ಯ ರವರು, ಅ.ನ.ಕೃಷ್ಣರಾಯರು, ಎಸ್. ನಿಜಲಿಂಗಪ್ಪ ರವರು, ಕಡಿದಾಳ ಮಂಜಪ್ಪ ರವರು, ಕೆಂಗಲ್ ಹನುಮಂತಯ್ಯ ರವರು, ಪಾಟೀಲ ಪುಟ್ಟಪ್ಪ ರವರು ಸೇರಿದಂತೆ ಅನೇಕ ಮಹನೀಯರು ಹೋರಾಟ ನಡೆಸಿದ್ದಾರೆ. ಈ ಎಲ್ಲ ಮಹನಿಯರ ತ್ಯಾಗವನ್ನು ನಾವೆಲ್ಲರು ಸ್ಮರಿಸಲೇಬೇಕು ಎಂದು ತಿಳಿಸಿದರು.


ಕರ್ನಾಟಕ ಏಕೀಕರಣ ಚಳವಳಿಯ ಫಲವಾಗಿ 1956ರ ನವೆಂಬರ್ 1 ರಂದು ಕರ್ನಾಟಕ ರಾಜ್ಯ ಉದಯವಾಯಿತು. ಮುಂದೆ 1973 ನವೆಂಬರ್ 1 ರಂದು ಅಂದಿನ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸ್ ರವರು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಿದರು.
12ನೇ ಶತಮಾನದಲ್ಲಿಯೇ ಸಮಾನತೆಯನ್ನು ಸ್ಥಾಪಿಸಲು ಅಡಿಯಿಟ್ಟು, ಇಡೀ ಜಗತ್ತಿಗೆ ಸಂಸದೀಯ ಪ್ರಜಾಪ್ರಭುತ್ವದ ಮಾದರಿ ಆಡಳಿತವನ್ನು ಮೊಟ್ಟ ಮೊದಲು ಹೇಳಿಕೊಟ್ಟ ಕಾಯಕಯೋಗಿ, ಬಸವಣ್ಣನವರ ಕರ್ಮಭೂಮಿ, ನಮ್ಮ ಬೀದರ ಜಿಲ್ಲೆ ಆಗಿದೆ. ‘ವಚನ’ ಎಂಬ ವಾಙ್ಮಯವನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಶ್ರೇಯಸ್ಸು ನಮ್ಮ ಬೀದರ ಜಿಲ್ಲೆಗೆ ಸಲ್ಲುತ್ತದೆ ಎಂದರು. ರಾಜ್ಯದಲ್ಲಿ ಕನ್ನಡ ಭಾಷೆಯ ಏಳಿಗೆಗಾಗಿ ರಾಜ್ಯ ಸರ್ಕಾರವು ಸದಾ ಶ್ರಮಿಸುತ್ತಿದೆ. ಕನ್ನಡ ನಾಡು ನುಡಿ ಸೇವೆಗೆ ಸರ್ಕಾರವು ಬದ್ಧವಾಗಿದೆ ಎಂದು ತಿಳಿಸಿದರು.


ಮಳೆಯಿಂದಾದ ಹಾನಿಗೆ ಪರಿಹಾರ :
ಅತಿವೃಷ್ಠಿಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 2.5 ಲಕ್ಷ ಹೆಕ್ಟರ್ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಯಾಗಿದೆ. 09 ಮಾನವ ಹಾಗೂ 64 ಜಾನುವಾರು ಹಾನಿಯಾಗಿದ್ದು, ಸದರಿ ಪ್ರಕರಣಗಳಿಗೆ ಈಗಾಗಲೆ ಪರಿಹಾರ ನೀಡಲಾಗಿದೆ. ಮಳೆಯಿಂದ ಹಾನಿಯಾಗಿದ್ದ 1750 ಮನೆಗಳಿಗೆ ಪರಿಹಾರ ನೀಡುವ ಕಾರ್ಯ ಚಾಲ್ತಿಯಲ್ಲಿದೆ.
ರೈತರಿಗೆ ಪರಿಹಾರ:
ಕರ್ನಾಟಕ ರೈತ ಸುರಕ್ಷಾ – ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2020-21ನೇ ಸಾಲಿನ ಮುಂಗಾರು ಹಂಗಾಮಿಯಲ್ಲಿ 2,12,000 ರೈತರು ನೋಂದಣಿ ಮಾಡಿಸಿದ್ದಾರೆ. ಪಿಎಮ್-ಕಿಸಾನ್ ಯೋಜನೆಯಡಿ ಇಲ್ಲಿವರೆಗೆ ಆರು ಕಂತುಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಒಟ್ಟು 218 ಕೋಟಿ ರೂ. ಸಹಾಯಧನವನ್ನು ಸುಮಾರು 2 ಲಕ್ಷ ರೈತರ ಬ್ಯಾಂಕ ಖಾತೆಗೆ ನೇರ ನೆರವು ಸಂದಾಯ ಮಾಡಲಾಗಿದೆ.


ಸಾಧಕರಿಗೆ ಅಭಿನಂದನೆ ತಿಳಿಸಿದ ಜಿಲ್ಲಾಧಿಕಾರಿಗಳು:
2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಸಾವಯವ ಕೃಷಿಕರಾದ ಸೂರಜ್ ಸಿಂಗ್ ರಜ್‌ಪೂತ್ ಅವರಿಗೆ ತಮ್ಮೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನೀಟ್ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಮೊದಲು ಮತ್ತು ಮೂರನೇ ಸ್ಥಾನವನ್ನು ನಮ್ಮ ಬೀದರ ಜಿಲ್ಲೆಯ ವಿದ್ಯಾರ್ಥಿಗಳಾದಂತಹ ಕಾರ್ತಿಕ ರೆಡ್ಡಿ ಮತ್ತು ಅರ್ಬಾಜ್ ಅಹ್ಮದ್ ಪಡೆದಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ. ಇದೇ ರೀತಿಯಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆಯನ್ನು ಮಾಡಿ ಜಿಲ್ಲೆಗೆ ಕೀರ್ತಿ ತರಬೇಕೆಂದು ವೇದಿಕೆಯ ಮುಖಾಂತರ ಆಶಿಸುತ್ತೇನೆ ಎಂದು ತಿಳಿಸಿದರು.
ಕೊವಿಡ್-19 ಪ್ರಕರಣ ಇಳಿಕೆ:
ಜಿಲ್ಲೆಯ ವೈದ್ಯಕೀಯ ಸಿಬ್ಬಂದಿಗಳು, ಪೊಲೀಸರು ಹಾಗೂ ಪೌರಕಾರ್ಮಿಕರ ಪರಿಶ್ರಮ ಮತ್ತು ಎಲ್ಲಾ ಜನಪ್ರತಿನಿಧಿಗಳ ಮಾರ್ಗದರ್ಶನ, ಮಾಧ್ಯಮ ಹಾಗೂ ಸಾರ್ವಜನಿಕರ ಸಹಕಾರದಿಂದ ಕೋವಿಡ್-19 ರ ಪ್ರಕರಣಗಳು ಜಿಲ್ಲೆಯಲ್ಲಿ ಕಡಿಮೆಯಾಗುತ್ತಿದೆ. ಆದರೆ, ಸಾರ್ವಜನಿಕರು ಯಾವುದೇ ನಿಷ್ಕಾಳಜಿ ವಹಿಸದೆ, ಮಾಸ್ಕನ್ನು ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ಗಮನ ವಹಿಸಲು ಕೋರುತ್ತೇನೆ ಎಂದು ತಿಳಿಸಿದರು.


ರಾಜ್ಯೋತ್ಸವದ ಶುಭಾಶಯ ತಿಳಿಸಿದ ಜಿಲ್ಲಾಧಿಕಾರಿಗಳು:
ನಮ್ಮ ಕನ್ನಡ ನಾಡಿನ ಜನರಿಗೆ ಆರೋಗ್ಯ, ಶಾಂತಿ ಮತ್ತು ನೆಮ್ಮದಿಯನ್ನು ಕರುಣಿಸಲಿ ಎಂದು ತಾಯಿ ಭುವನೇಶ್ವರಿ ಮಾತೆಯಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಕನ್ನಡ ನಾಡು ನುಡಿಯ ಸೇವೆಯಲ್ಲಿರುವ ಬೀದರ ಜಿಲ್ಲೆಯ ಸಾಹಿತಿಗಳು, ಅಧಿಕಾರಿ ಸಿಬ್ಬಂದಿ ವರ್ಗದವರು, ಪತ್ರಕರ್ತರಿಗೆ, ಸಾರ್ವಜನಿಕರಿಗೆ ರಾಜ್ಯೋತ್ಸವ ದಿನಾಚರಣೆಯ ಶುಭಾಷಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ತಾಪಂ ಅಧ್ಯಕ್ಷರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಪಂ ಸಿಇಓ, ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು,
ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಸಾಹಿತಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*