ರಾಜ್ಯ ಸುದ್ದಿಗಳು
ದೇವನಹಳ್ಳಿ
ನೂತನ ದೇವರಾಜ ಅರಸು ಭವನದಲ್ಲೊಂದು ಗ್ರಂಥಾಲಯ ಸ್ಥಾಪಿಸಲು ಒಕ್ಕೂರಲ ಮನವಿಆ.೨೦ ರಿಂದ ೨೨ರ ತನಕ ವಿವಿಧ ಕಾರ್ಯಕ್ರಮಗಳ ಬಗ್ಗೆ ಮುಖಂಡರಿಂದ ಪತ್ರಿಕಾಗೋಷ್ಠಿ ದೇವನಹಳ್ಳಿ: ದೇವನಹಳ್ಳಿ ಪಟ್ಟಣದಲ್ಲಿ ಆ.೨೦ರಂದು ದೇವರಾಜ ಅರಸು ಅವರ ಜನ್ಮದಿನಾಚರಣೆ ಮತ್ತು ಭವನ ಉದ್ಘಾಟನೆ ಕಾರ್ಯಕ್ರಮವಿದ್ದು, ಅಲ್ಲೊಂದು ಗ್ರಂಥಾಲಯ ಸ್ಥಾಪಿಸಿಕೊಡಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಮತ್ತು ಹಿಂದುಳಿದ ವರ್ಗಗಳ ಮುಖಂಡ ಬಿ.ಎಂ.ಬೀರಪ್ಪ ಮನವಿ ಮಾಡಿದರು.ದೇವನಹಳ್ಳಿ ಪಟ್ಟಣದ ಬಿಬಿ ರಸ್ತೆಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪತ್ರಕರ್ತರ ಭವನದಲ್ಲಿ ದೇವನಹಳ್ಳಿ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದೊಂದು ಸರಕಾರದ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮವಾಗಿರುವುದರಿಂದ ಸಮುದಾಯದ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ಸಮುದಾಯವನ್ನು ಸರ್ವತೋಮುಖ ಅಭಿವೃದ್ಧಿಗೊಳಿಸಬೇಕು. ಜತೆಗೆ ಶೈಕ್ಷಣಿಕವಾಗಿ ಅಭಿವೃದ್ಧಿಹೊಂದಲು ಸುಸ್ಸಜ್ಜಿತವಾದ ಗ್ರಂಥಾಲಯ ಅವಶ್ಯಕತೆ ಇರುತ್ತದೆ. ಗ್ರಂಥಾಲಯಕ್ಕೆ ಬೇಕಾದ ಪುಸ್ತಕಗಳನ್ನು ಸುಮಾರು ೧ಲಕ್ಷದ ವರೆಗೆ ವೈಯಕ್ತಿಕ ಸಹಕಾರ ನೀಡಲಾಗುತ್ತದೆ ಎಂದು ಹೇಳಿದರು.
ಅಲೆಮಾರಿ ಮತ್ತು ಅರೆ ಅಲೆಮಾರಿ ಹಿಂದುಳಿದ ವರ್ಗಗಳ ಪ್ರವರ್ಗ-೧ರ ರಾಜ್ಯ ಉಪಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಇದೇ ತಿಂಗಳ ೨೦ನೇ ತಾರೀಕು ದೇವರಾಜು ಅರಸು ಅವರ ಜಯಂತೋತ್ಸವ ಇರುವುದರಿಂದ ಆ ದಿನದಲ್ಲಿಯೇ ದೇವನಹಳ್ಳಿಯ ಮಿನಿವಿಧಾನಸೌಧದ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ದೇವರಾಜು ಅರಸು ಭವನದ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಸಚಿವರು, ಶಾಸಕರು ಮತ್ತು ಹಿಂದುಳಿದ ವರ್ಗಗಳ ಸಮುದಾಯದ ಮುಖಂಡರು ಸೇರಿದಂತೆ ಹಲವಾರು ಭಾಗಿಯಾಗುವುದರ ಮೂಲಕ ದೇವರಾಜು ಅರಸು ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುವಂತಾಗಬೇಕು. ಸರಕಾರದಿಂದ ಸುಮಾರು ೩ಕೋಟಿ ರೂ.ವೆಚ್ಚದಲ್ಲಿ ಭವನ ನಿರ್ಮಾಣ ಮಾಡಿ, ಸಮುದಾಯದವರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿರುವುದರಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಹಿಂದುಳಿದ ವರ್ಗಗಳ ಸಹಾಯಕ ತಾಲೂಕು ಕಲ್ಯಾಣಾಧಿಕಾರಿ ವಿನೋದ.ಬಿ.ಮುಗುಳಿ ಮಾತನಾಡಿ, ಆ.೨೦ರಿಂದ೨೨ರವರೆಗೆ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಚರಿಸಬೇಕೆಂದು ಸರಕಾರದಿಂದ ಆದೇಶ ಬಂದಿರುವುದರಿಂದ ಅದೇ ರೀತಿಯಲ್ಲಿ ಮೊದಲ ದಿನ ದೇವರಾಜ್ ಅರಸು ಅವರ ಜನ್ಮದಿನಾಚರಣೆ ಮತ್ತು ಕಟ್ಟಡ ಉದ್ಘಾಟನೆ, ಎರಡನೇ ದಿನ ಜಿಲ್ಲಾ ಮಟ್ಟದಲ್ಲಿ ಶಾಲಾ/ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿ ನಿಲಯಗಳ ಮಕ್ಕಳಿಗೆ ಯೋಗ ಹಾಗೂ ವಿವಿಧ ಕ್ರೀಡೆಯಲ್ಲಿ ಸ್ಪರ್ದೇಯನ್ನು ಏರ್ಪಡಿಸುವುದು. ಜಿಲ್ಲಾ ಮತ್ತು ತಾಲೂಕು ಮಟ್ಟದ ವಿಜೇತರಿಗೆ ಪ್ರಶಸ್ತಿ ಪ್ರಧಾನ ಹಾಗೂ ಮೂರನೇ ದಿನದಲ್ಲಿ ಶಾಲಾ ಮಕ್ಕಳಿಗೆ ಅರಣ್ಯದ ಮಹತ್ವ ಮತ್ತು ಗಿಡ ನೆಡುವ ಕಾರ್ಯಕ್ರಮ ಗಣ್ಯರಿಗೆ ಸನ್ಮಾನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಬೀರಪ್ಪ, ಅಲೆಮಾರಿ ಮತ್ತು ಅರೆ ಅಲೆಮಾರಿ ಹಿಂದುಳಿದ ವರ್ಗಗಳ ಪ್ರವರ್ಗ-೧ರ ರಾಜ್ಯ ಉಪಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಸಿ.ಮುನಿರಾಜ್, ಉಪಾಧ್ಯಕ್ಷ ರಂಗಸ್ವಾಮಿ, ಆಂಜಿನಪ್ಪ, ಸಿ.ಕುಮಾರಸ್ವಾಮಿ, ರಾಮೂರ್ತಿ, ವಿಜಯಕುಮಾರ್, ಮುಖಂಡ ಮುನಿನಂಜಪ್ಪ, ಪ್ರಧಾನಕಾರ್ಯದರ್ಶಿ ದಾಸಪ್ಪ, ಸಂಘಟನಾ ಕಾರ್ಯದರ್ಶಿ ರಾಧಕೃಷ್ಣಪ್ಪ, ಗಣಾಚಾರಿ ಎಂ.ಗೋಪಾಲಪ್ಪ, ಎನ್.ಹರೀಶ್, ಅಮರನಾಥ್ ಸೇರಿದಂತೆ ಹಲವಾರು ಇದ್ದರು.
Be the first to comment