ಸಾಹಿತ್ಯದೊಳಗೆ ಸಂಗೀತವನ್ನೂ ಮೇಳೈಸಿಕೊಂಡ ಅಪರೂಪದಲ್ಲೊಬ್ಬ ಭಾವಕವಿ ಉಮೇಶ್ ಮುಂಡಳ್ಳಿ ಲೇಖನ – ಕುಮಾರ ನಾಯ್ಕ ,ಭಟ್ಕಳ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

 

 ಕಾರವಾರ

CHETAN KENDULI

ಸಾಹಿತ್ಯ, ಸಂಗೀತ, ಸಂಘಟನೆ ಕ್ಷೇತ್ರದಲ್ಲಿನ ಉಮೇಶ ಮುಂಡಳ್ಳಿಯವರ ಸುದೀರ್ಘ ಸೇವೆ, ಸಾಧನೆಗಳನ್ನು ಗುರುತಿಸಿ ನಾಡಿನ ಹಲವು ಸಂಘ ಸಂಸ್ಥೆಗಳು ಗೌರವಿಸಿದೆ. ಸುವರ್ಣ ಕರ್ನಾಟಕ ಸೇವಾಪ್ರಶಸ್ತಿ ೨೦೦೭, ಭಾವಗೀತೆ ಗಾಯನಕ್ಕೆ ರಾಜ್ಯ ಪ್ರಶಸ್ತಿ ೨೦೦೮, ಭಟ್ಕಳ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ೨೦೧೧, ಕಲಾಶ್ರೀ ಪ್ರಶಸ್ತಿ ೨೦೧೩, ಬಸವಚೇತನ ಪ್ರಶಸ್ತಿ ೨೦೧೪ ,ಕರುನಾಡ ಸಾಧಕ ರತ್ನ ಪ್ರಶಸ್ತಿ ೨೦೨೧, ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ೨೦೨೨,ಉತ್ತರಕನ್ನಡ ಜಿಲ್ಲಾಡಳಿತದಿಂದ ಜಿಲ್ಲಾ ಯುವ ಪ್ರಶಸ್ತಿ (೨೦೧೫)ಗಳಿಗೂ ಇವರು ಭಾಜನರಾಗಿದ್ದಾರೆ.ಜೊತೆಗೆ ೨೦೧೬ ರಲ್ಲಿ ಭಟ್ಕಳ ತಾಲೂಕು ಎಂಟನೇ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವಕ್ಕೂ ಪಾತ್ರರಾಗಿದ್ದಾರೆ.ದೈವದತ್ತವಾಗಿ ಬಂದ ಪ್ರತಿಭೆಗೆ ಪ್ರೋತ್ಸಾಹ ಸಾಕಷ್ಟು ಹಿನ್ನೆಲೆ ಇಲ್ಲದೇ ಹೋದರೂ ಸಹ ಸತತ ಪರಿಶ್ರಮದಿಂದ ಸಾಕಷ್ಟು ಏಳು ಬೀಳುಗಳ ನಡುವೆ ಅನೇಕರು ಯಶಸ್ಸು ಗಳಿಸುತ್ತಲೇ ಇರುತ್ತಾರೆ. ಅಂತವರ ಜೀವನವು ಸುಖದ ದಾರಿಯಂತೂ ಆಗಿರಲು ಸಾಧ್ಯವಿಲ್ಲ. ಎಷ್ಟೋ ನೋವುಗಳು ಇದ್ದರೂ, ಎಷ್ಟೋ ಅನಾನುಕೂಲಗಳ ನಡುವಲ್ಲಿಯು ತಮ್ಮ ಪ್ರಯತ್ನ ಬಿಡದೆ ಕೈ ಚೆಲ್ಲಿ ಕುಳಿತುಕೊಳ್ಳದೆ ತನ್ನ ಗುರಿ ಸಾಧನೆಯ ಕಡೆಗೆ ಶ್ರದ್ದೆಯಿಂದ ಪರಿಶ್ರಮ ಹಾಕಿದರೆ ಒಳ್ಳೆಯದನ್ನು ಖಂಡಿತ ಸಾಧಿಸಬಹುದು ಎನ್ನುವುದಕ್ಕೆ ಪ್ರತ್ಯಕ್ಷ ನಿದರ್ಶನವಾದವರು ಜಿಲ್ಲೆಯ ಭಾವಕವಿ ಎಂದೇ ಹೆಸರಾದ ಭಟ್ಕಳದ ಉಮೇಶ ಮುಂಡಳ್ಳಿಯವರು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಾಲೂಕಿನ ಅಪ್ಪಟ ಗ್ರಾಮೀಣ ಪ್ರತಿಭೆ ಉಮೇಶ ಮುಂಡಳ್ಳಿ, ತಮ್ಮ ಅವಿರತ ಪರಿಶ್ರಮದಿಂದ ಸಾಹಿತ್ಯ, ಸಂಗೀತ,ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡು ತಮ್ಮದೇ ಅದ ಬಳಗವನ್ನು ಗಳಿಸಿಕೊಂಡವರು. ಭಟ್ಕಳದಲ್ಲಿಯೇ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಪಡೆದು, ವಿವಿಧ ಸಂಸ್ಥೆಗಳಲ್ಲಿ ಅರೆಕಾಲಿಕ ಕೆಲಸಗಳನ್ನು ನಿರ್ವಹಿಸುತ್ತಲೇ ದುಡಿಮೆಯ ಅವದಿಯಲ್ಲೇ ಧಾರವಾಡ ವಿಶ್ವವಿದ್ಯಾನಿಲಯದಿಂದ ಕನ್ನಡ ಸಾಹಿತ್ಯ ದಲ್ಲಿ ಎಂ.ಎ. ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ (ಎಂ ಎಸ್ ಡಬ್ಲ್ಯೂ)ಪದವಿ ಪಡೆದಿರುತ್ತಾರೆ.ಶಿರಸಿಯ ಸ್ಕೊಡ್‌ವೆಸ್ ಸಂಸ್ಥೆ, ಕುಮಟಾದ ಅನ್ವೇಷಣಾ ಸಂಸ್ಥೆ, ಕಾರವಾರದ ಕೂರ್ ಮತ್ತು ಮೈಸೂರು ಅಬ್ಲುಲ್ ನಜಿರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ಕೆಲಕಾಲ ಸೇವೆ ಸಲ್ಲಿಸಿದ್ದ ಉಮೇಶ್ ಮುಂಡಳ್ಳಿ ಸದ್ಯ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದ ಉದ್ಯೋಗಿಯಾಗಿದ್ದು ಭಟ್ಕಳ ತಾಲೂಕು ಪಂಚಾಯತಿಯಲ್ಲಿ ಸಾಮಾಜಿಕ ಪರಿಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚಿಕ್ಕಂದಿನಿಂದಲೂ ಸಂಗೀತದ ಕುರಿತು ಅಪಾರ ಒಲವನ್ನು ಹೊಂದಿದ್ದ ಉಮೇಶ ಮುಂಡಳ್ಳಿ, ತಮ್ಮ ಊರಿನಲ್ಲಿ ಆಗಾಗನಡೆಯುತ್ತಿದ್ದ ಭಜನೆ,ದೇಶಭಕ್ತಿ ಗೀತೆ ರಂಗ ಗೀತೆ ಗಾಯನ ಕಾರ್ಯಕ್ರಮ, ಯುವಜನ ಮೇಳ,ಯುವಜನ ಉತ್ಸವ,ಕಲಾ ಉತ್ಸವ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ‘ ತನ್ನೂರಿನ ಸಾಂಸ್ಕೃತಿಕ ಪರಿಸರ, ಹಿರಿಯ ಕಲಾವಿದರ ಒಡನಾಟ ಇ ಆಗಾಗ ನಡೆಯುತ್ತಿದ್ದ ಸ್ಪರ್ಧಾ ಕಾರ್ಯಕ್ರಮಗಳೇ ನನ್ನನ್ನು ಸಂಗೀತಗಾರನನ್ನಾಗಿ ರೂಪಿಸಿತು’ ಎನ್ನುತ್ತಾರೆ ಮುಂಡಳ್ಳಿ.ಮುಂಡಳ್ಳಿಯವರು ಉತ್ತರಕನ್ನಡ ಜಿಲ್ಲೆಯಾದ್ಯಂತ ನಡೆದ ಯುವಜನ ಮೇಳ, ಯುವಜನ ಉತ್ಸವ ವೈಯಕ್ತಿಕ ಕಾರ್ಯಕ್ರಮಗಳಲ್ಲದೇ ರಾಜ್ಯಮಟ್ಟದ ಯುವಜನ ಮೇಳ, ಯುವಜನೋತ್ಸವ, ಸಂಗೀತ ರಸಮಂಜರಿ, ದೂರದರ್ಶನ ಚಂದನ ವಾಹಿನಿಯ ಮಧುರ ಮಧುರವೀ ಮಂಜುಳಗಾನ, ಸ್ಥಳಿಯ ವಾಹಿನಿಯಗಳಲ್ಲಿ ಸುಗಮ ಸಂಗೀತ ಕಾರ್ಯಕ್ರಮ, ಉದಯ ಟಿವಿ ಅಕ್ಷರ ಮಾಲಾ ಹೀಗೆ ಹಲವಾರು ಜಿಲ್ಲಾ ಮತ್ತು ರಾಜ್ಯಮಟ್ಟದ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 2011 ರಲ್ಲಿಯೇ ” ಭರವಸೆಯ ಛಾಯೆ” ಎಂಬ ಧ್ವನಿಸುರುಳಿಯನ್ನು ಹೊರತಂದು ನಾಡಿನ ದಿಗ್ಗಜ ನಾಡೋಜ ಕವಿಗಳಾದ ಡಾ.ಪಾಟಿಲ್ ಪುಟ್ಟಪ್ಪ ಹಾಗೂ ಚೆನ್ನವೀರ ಕಣಿಮೆಯವರ ಅಮೃತ ಹಸ್ತದಲ್ಲಿ ಭರವಸೆಯ ಛಾಯೆಯನ್ನು ಲೋಕಾರ್ಪಣೆ ಗೊಳಿಸಿ ಜಿಲ್ಲೆ ಹಾಗೂ ನಾಡಿನ ಸಂಗೀತ ಪ್ರಿಯರಿಗೆ ಗಾನಸುಧೆಯನ್ನು ಉಣಬಡಿಸಿದವರು ಉಮೇಶ ಮುಂಡಳ್ಳಿಯವರು. ಗಡಿನಾಡು ಕೇರಳದಲ್ಲಿ ರಾಷ್ಟ್ರಕವಿ ಮಂಜೇಶ್ವರದ ಗೋವಿಂದ ಪೈ ಅವರ ಗಿಳಿವಿಂಡು ಮನೆಯಲ್ಲಿ ಕನ್ನಡ ಸುಗಮ ಸಂಗೀತ ಕಾರ್ಯಕ್ರಮ ನಡೆಸುಕೊಟ್ಟ ಹೆಗ್ಗಳಿಕೆ ಇವರದು.

ಸಂಗೀತದಲ್ಲಿದ್ದರೆ ಸಾಹಿತ್ಯದಲ್ಲಿರುವುದು ವಿರಳ ಸಾಹಿತ್ಯದಲ್ಲಿದ್ದರೆ ಸಂಗಿತದಲ್ಲಿ ವಿರಳ ಆದರೆ ಅಪರೂಪದಲ್ಲಿ ಅಪರೂಪವೆಂಬಂತೆ ಸಂಗೀತ ಸಾಹಿತ್ಯ ಎರಡನ್ನೂ ಮೇಳೈಸಿಕೊಂಡುಸಂಗೀತದ ಜೊತೆ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಉಮೇಶ ಮುಂಡಳ್ಳಿ ಉತ್ತಮ ಕವಿ, ಕಥೆಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ತಮ್ಮದೇ ಸ್ವಂತ ಪ್ರಕಾಶನವನ್ನು ಹುಟ್ಟುಹಾಕಿ ‘ಮೌನಗೀತೆ, ‘ಭಾವಸುಮ, ‘ನಾನೂ ಶಿಲ್ಪವಾಗಬೇಕು’ (ಕವನ ಸಂಕಲನಗಳು), ‘ಕರುನಾಡು ಕುಡಿ ಗಳು’ (ಸಂಪಾದಿತ ಕೃತಿ), ‘ಬೆಂಕಿ ಬಿದ್ದಿದೆ ಹೊಳೆಗೆ ಮತ್ತು ಇತರ ಕಥೆಗಳು’ (ಕಥಾ ಸಂಕಲನ) ಮತ್ತು ‘ಉತ್ತರಕನ್ನಡಕ್ಕೆ ಒಂದು ಸುತ್ತು’ (ಪ್ರವಾಸಿ ಸಂಗ್ರಹ) ,ಮಾತಾ ಮಹಿಮಾ ( ಶ್ರೀ ಕ್ಷೇತ್ರ ಅಳ್ವೆಕೋಡಿ ದುರ್ಗಾಪರಮೇಶ್ವರಿ ಕ್ಷೇತ್ರ ಚರಿತ್ರೆ) ,ಹನುಮಾಮೃತ ಎಂಬ ಎಂಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ತಮ್ಮಂತೆ ಇತರ ಯುವ ಬರಹಗಾರರ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ.ಜನಪದ ಅಧ್ಯಯನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಹಂಬಲದಿಂದ ಒಂದು ಹೆಜ್ಜೆ ಮುಂದೆ ಹೋಗಿ ಹಾವೇರಿಯ ಜಾನಪದ ವಿಶ್ವವಿದ್ಯಾನಿಲಯದಿಂದ ಪ್ರಕಟಗೊಂಡ ‘ಕರ್ನಾಟಕ ಗ್ರಾಮ ಚರಿತ್ರ ಕೋಶ’ ಬೃಹತ್ಸಂಪುಟ ರಚನಾ ಕಾರ್ಯದಲ್ಲಿ ತೊಡಗಿಸಿಕೊಂಡು, ಹಳಿಯಾಳ ತಾಲೂಕಿನ ಗ್ರಾಮ ಚರಿತ್ರೆ ಬರೆದು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸುವ ಮೂಲಕ ಜಾನಪದ ಅಧ್ಯಯನಕಾರರಾಗಿಯೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಗುರುತಿಸಿಕೊಂಡಿರುತ್ತಾರೆ.

ಹತ್ತು ವರ್ಷಗಳ ಕಾಲ ಭಟ್ಕಳ ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ ಚುಟುಕು ಸಾಹಿತ್ಯಕ್ಕೆ ಸೇವೆ ಸಲ್ಲಿಸಿ, 2001 ರಲ್ಲಿ ಕನ್ನಡಸಾಹಿತ್ಯ ಪರಿಷತ್‌ನ ಅಜೀವ ಸದಸ್ಯತ್ವವನ್ನು ಪಡೆದ ಉಮೇಶ ಮುಂಡಳ್ಳಿಯವರು, ನಿಕಟಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಕೋಶಾಧ್ಯಕ್ಷರಾಗಿ ೫ ವರ್ಷ ಸೇವೆ ಸಲ್ಲಿಸಿದವರು. ಹೀಗೆ ನಿರಂತರವಾಗಿ ಎರಡು ದಶಕಗಳ ಕಾಲ ಯಾವ ಹಮ್ಮುಬಿಮ್ಮಿಲ್ಲದೆ ಯಾರ ಬೆಂಬಲಕ್ಕೂ ಕಾಯದೆ ಜೋತುಬೀಳದೆ ಮೌನಕ್ರಾಂತಿ ಎಂಬಂತೆ ತಮ್ಮ ಸಾಹಿತ್ಯ ಸೇವೆ ನೀಡುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ಅನೇಕ ತಮ್ಮ ಹೊಸ ಭಾವಗೀತೆಗಳಿಗೆ ಹಾಗೂ ಇತರೇ ಕವಿಗಳ ಗೀತೆಗಳಿಗೆ ತಾವೇ ಸ್ವತಃ ಸ್ವರಸಂಯೋಜನೆ ಮಾಡಿ ಅಲ್ಬಂ ಹಾಡುಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ ಗಳಲ್ಲಿ ಬಿಡುಗಡೆ ಗೊಳಿಸುತ್ತಾ ಸಾವಿರಾರು ಕೇಳುಗರ ಮನಸೂರೆಗೊಂಡಿದ್ದಾರೆ. ಇನ್ನೂ ಅನೇಕ ಕವಿಗಳ ಭಾವಗೀತೆ ಹಾಗೂ ಕೆಲವು ಭಕ್ತಿಗಳ ಸಂಯೋಜನೆ ಒಪ್ಪಿಕೊಂಡಿದ್ದು ಕೆಲವೆ ಕೆಲವೇ ದಿನಗಳಲ್ಲಿ ಅವುಗಳನ್ನು ಕೇಳುಗರ ಮುಂದಿಡಲಿದ್ದಾರೆ ಉಮೇಶ ಮುಂಡಳ್ಳಿ.2016 ರಲ್ಲಿ ನಿನಾದ ಸಾಹಿತ್ಯ ಸಂಗೀತ ಸಂಚಯ ಸಂಸ್ಥೆಯನ್ನು ಹುಟ್ಟುಹಾಕಿ ತಮ್ಮ ಕುಟುಂಬದೊಂದಿಗೆ ನಿರಂತರವಾಗಿ ಸಾಹಿತ್ಯ ಸಂಗೀತ ಕಾರ್ಯಕ್ರಮಗಳನ್ನು ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಆಯೋಜನೆ ಮಾಡುವ ಮೂಲಕ ಅನೇಕ ಯುವ ಕವಿಗಳು ಗಾಯಕರಿಗೆ ವೇದಿಕೆ ನೀಡುತ್ತಾ ಸಾಹಿತಿಯಾಗಿ ಕಲಾವಿದರಾಗಿ ಗಾಯಕರಾಗಿ ಸಂಯೋಜಕರಾಗಿ ಕಲಾಪೋಷಕರಾಗಿಯೂ, ಕಲಾಸೇವೆ ಮಾಡುತ್ತಾ ಬರುತ್ತಿದ್ದಾರೆ. ಮರೆಯಲ್ಲಿದ್ದು ಮೌನಕ್ರಾಂತಿ ಮಾಡುತ್ತಾ ತಮ್ಮ ಹೆಜ್ಜೆ ಗುರುತು ಮೂಡಿಸಿರುವ ಭಾವ ಕವಿಗೆ ಪ್ರತಿಷ್ಢಿತ ವಿಶ್ವ ದರ್ಶನ ಪತ್ರಿಕಾ ಬಳಗದವರು ಇಂದು ಧಾರವಾಡದ ರಂಗಾಯಣದಲ್ಲಿ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಮ್ಮ ಉತ್ತರ ಕನ್ನಡ ಜಿಲ್ಲೆಗೆ, ಭಟ್ಕಳ ತಾಲೂಕಿಗೆ ಹೆಮ್ಮೆಯ ವಿಚಾರವಾಗಿದೆ.

Be the first to comment

Leave a Reply

Your email address will not be published.


*