ಲಂಚ ಸ್ವೀಕಾರ ಆರೋಪ ಸಾಬೀತು ಗ್ರಾಮ ಸಹಾಯಕನಿಗೆ ಜೈಲು ಶಿಕ್ಷೆ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಕಡಬ 

8 ವರ್ಷದ ಹಿಂದೆ ಬೆಳ್ತಂಗಡಿ ತಾಲೂಕಿನ ಬಾರ್ಯ ಪುತ್ತಿಲದಲ್ಲಿ ಗ್ರಾಮಕರಣಿಕರಾಗಿದ್ದ ವೇಳೆ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿ ಪ್ರಸ್ತುತ ಕಡಬ ತಾಲೂಕಿನ ಕೊಯಿಲ ಗ್ರಾಮಕರಣಿಕ ಎನ್.ಶೇಷಾದ್ರಿ ಮತ್ತು ಪುತ್ತಿಲ ಗ್ರಾಮ ಸಹಾಯಕ ತಿಮ್ಮಪ್ಪ ಪೂಜಾರಿ ಎಂಬವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಂಗಳೂರು ಜಿಲ್ಲಾ ಮತ್ತು ಸೆಷನ್ಸ್ ಕರ್ಟ್ ಆದೇಶಿಸಿದೆ. ಸದ್ಯಕ್ಕೆ ಇಬ್ಬರು ಅಪರಾಧಿಗಳು ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆಮಂಡ್ಯ ನಿವಾಸಿಯಾಗಿರುವ ಎನ್.ಶೇಷಾದ್ರಿಯವರು ಬಾರ್ಯ ಗ್ರಾಮಕರಣಿಕರಾಗಿದ್ದ ವೇಳೆ ಲಂಚ ಸ್ವೀಕರಿಸಿದ ಆರೋಪದಲ್ಲಿ ಸೇವೆಯಿಂದ ಅಮಾನುತಗೊಂಡಿದ್ದರು. ಬಳಿಕ ಅವರು ಕಡಬ ತಾಲೂಕಿನ ಕೊಯಿಲಕ್ಕೆ ಗ್ರಾಮಕರಣಿಕರಾಗಿ 2016ರಲ್ಲಿ ನೇಮಕಗೊಂಡಿದ್ದರು. ಈಗ ಅವರು ಕೊಯಿಲ ಗ್ರಾಮದ ಜೊತೆಗೆ ರಾಮಕುಂಜ ಹಾಗೂ ಹಳೆನೇರೆಂಕಿ ಗ್ರಾಮಕರಣಿಕರಾಗಿಯೂ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜೂ.14ರಂದು ಕೊಯಿಲದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ಜೂ.16ರಂದು ಕೋರ್ಟಿಗೆ ಹಾಜರಾಗಿದ್ದರು. ಲಂಚ ಸ್ವೀಕರಿಸಿರುವುದು ಸಾಬೀತುಗೊಂಡ ಹಿನ್ನೆಲೆಯಲ್ಲಿ ಈಗ ಅವರು ಜೈಲು ಹಕ್ಕಿಯಾಗಿದ್ದಾರೆ.2014ರ ಜೂ.24ರಂದು ವಾಸ್ತವ್ಯದ ಮನೆಯನ್ನು ಸಕ್ರಮಗೊಳಿಸಲು ಬೆಳ್ತಂಗಡಿ ತಾಲೂಕಿನ ಮೂರುಗೋಳಿ ಗ್ರಾ.ಪಂ.ಕಚೇರಿಗೆ ಅಲ್ಲಿನ ಗ್ರಾಮಸ್ಥರೊಬ್ಬರು ಅರ್ಜಿ ಸಲ್ಲಿಸಿದ್ದರು. ಆಗ ತೆಕ್ಕಾರು ಬಾರ್ಯ ಪುತ್ತಿಲ ಗ್ರಾಮದ ಗ್ರಾಮಕರಣಿಕರಾಗಿದ್ದ ಎನ್.ಶೇಷಾದ್ರಿ ಮತ್ತು ಗ್ರಾಮ ಸಹಾಯಕ ತಿಮ್ಮಪ್ಪ ಪೂಜಾರಿಯವರು ಮನೆ ಸಕ್ರಮಗೊಳಿಸಲು 15 ಸಾವಿರ ರೂ., ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಗ್ರಾಮಸ್ಥರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

CHETAN KENDULI

ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು ಈ ವೇಳೆ ಲಂಚ ಸ್ವೀಕರಿಸುತ್ತಿದ್ದ ಗ್ರಾಮಕರಣಿಕ ಶೇಷಾದ್ರಿ ಹಾಗೂ ಸಹಾಯಕ ತಿಮ್ಮಪ್ಪ ಪೂಜಾರಿಯವರು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆಗಿನ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಎಸ್.ವಿಜಯಪ್ರಸಾದ್ರವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಪಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿಯವರು ಜೂ.15ರಂದು ಅಂತಿಮ ತೀರ್ಪು ಪ್ರಕಟಿಸಿದ್ದಾರೆ. ಆರೋಪಿಗಳಿಗೆ ಸಿಆರ್ಪಿಸಿ ಕಲಂ 235 ಅಡಿಯಲ್ಲಿ ಭ್ರಷ್ಟಾಚಾರ ತಡೆ ಕಾಯಿದೆ 1988 ಕಲಂ 7ರಂತೆ ಮೂರು ವರ್ಷಗಳ ಸಾದಾ ಶಿಕ್ಷೆ ಮತ್ತು 20 ಸಾವಿರ ರೂ.ದಂಡ ವಿಧಿಸಿದ್ದಾರೆ.ಈ ಸುದ್ದಿಯನ್ನೂ ಓದಿ ಕಡಬ:ರಸ್ತೆ ದುರಸ್ತಿಗೆ ಗ್ರಾಮಸ್ಥರ ಅಸಹಕಾರ: ಗ್ರಾ.ಪಂ ಸಿಬ್ಬಂದಿಗಳೇ ಕೆಸರುಮಯ ರಸ್ತೆಗೆ ಕಲ್ಲು ಹಾಸಿದ್ರುಆರೋಪಿಗಳು ದಂಡ ಕಟ್ಟಲು ವಿಫಲವಾದರೆ ಹೆಚ್ಚುವರಿ 8 ತಿಂಗಳ ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ. ಇದರ ಜೊತೆಗೆ ಭ್ರಷ್ಟಾಚಾರ ನಿಗ್ರಹ ಕಾಯಿದೆ ಕಲಂ 13(1)(ಡಿ)ಹಾಗೂ 13(2)ರಲ್ಲಿ ನಾಲ್ಕು ವರ್ಷಗಳ ಸಾದಾ ಸಜೆ ಹಾಗೂ 30 ಸಾವಿರ ರೂ.ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 8 ತಿಂಗಳ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ವಾದಿಸಿದ್ದರು.

Be the first to comment

Leave a Reply

Your email address will not be published.


*