ದೊಡ್ಡಬಳ್ಳಾಪುರದಲ್ಲಿ ಸಚಿವರಿಂದ ನೂತನ ನಗರಸಭಾ ಕಟ್ಟಡ ಉದ್ಘಾಟನೆ: ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ 

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

  ದೊಡ್ಡಬಳ್ಳಾಪುರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಸ್ಪತ್ರೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಕಾಮಗಾರಿಗೆ ಶ್ರೀಘ್ರದಲ್ಲಿ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿಯವರಿಂದ ನೆರವೇರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಕೆ.ಸುಧಾಕರ್ ಅವರು ತಿಳಿಸಿದರು. ಇಂದು ದೊಡ್ಡಬಳ್ಳಾಪುರ ನಗರಸಭೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಹಾಗೂ ನಗರಸಭೆಯ ಖಾಯಂ ಪೌರ ಕಾರ್ಮಿಕರಿಗೆ ಜಿ+2 ಮಾದರಿ ಮನೆಗಳ ನಿರ್ಮಾಣದ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

CHETAN KENDULI

  ಜಿಲ್ಲೆಯ ದೇವನಹಳ್ಳಿ, ಹೊಸಕೋಟೆ ಹಾಗೂ ನೆಲಮಂಗಲ ತಾಲ್ಲೂಕುಗಳಲ್ಲಿ ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮೂರು ಹಂತದ ಚಿಕಿತ್ಸೆ ನೀಡುವಂತಹ ಆಸ್ಪತ್ರೆ ಇಲ್ಲದ ಕಾರಣ, ಬೆಂಗಳೂರು ಗ್ರಾಮಾಂತರ ಜಿಲ್ಲಾಸ್ಪತ್ರೆಯನ್ನು ದೊಡ್ಡಬಳ್ಳಾಪುರದಲ್ಲಿ ನಿರ್ಮಿಸಲು ಉದ್ದೇಶಿಸಿ ಕಡತವನ್ನು ಆರ್ಥಿಕ ಇಲಾಖೆಯ ಮಂಜೂರಾತಿಗಾಗಿ ಕಳುಹಿಸಲಾಗಿದೆ. ಅನುಮೋದನೆ ದೊರೆತ ಕೂಡಲೇ ಟೆಂಡರ್ ಕರೆದು ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು.  ದಿನದಿಂದ ದಿನಕ್ಕೆ ಬೆಳೆಯುತ್ತಿರುವ ದೊಡ್ಡಬಳ್ಳಾಪುರ ನಗರ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಜಕ್ಕಲಮಡುಗು ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಚಿವರು, ಜಿಲ್ಲಾಧಿಕಾರಿಗಳನ್ನೊಳಗೊಂಡ ಸಮಿತಿಯು ಕಾರ್ಯನಿವರ್ಹಿಸುತ್ತಿದೆ ಎಂದರು.

  ಸರ್ಕಾರವು ಅಭಿವೃದ್ಧಿ ಕಡೆಗೆ ಒತ್ತು ನೀಡುತ್ತಿದ್ದು, ರೂ. 6.77 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ದೊಡ್ಡಬಳ್ಳಾಪುರ ನಗರಸಭೆ ಕಟ್ಟಡವು ಸುಸಜ್ಜಿತವಾಗಿ ನಿರ್ಮಾಣವಾಗಿದ್ದು, ದೊಡ್ಡಬಳ್ಳಾಪುರ ನಗರಸಭೆಯು ಸ್ವಚ್ಚತೆಗೆ ಆದ್ಯತೆ ನೀಡಬೇಕು. ವೈಜ್ಞಾನಿಕವಾಗಿ ತ್ಯಾಜ್ಯ ವಿಂಗಡಣೆ ಹಾಗೂ ಪ್ರತಿ ಮನೆಯಲ್ಲೂ ಕಸ ವಿಂಗಡಣೆಗೆ ಮಾಡುವಂತೆ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಒಂದು ನಗರದ ಸ್ವಚ್ಛತೆಯಲ್ಲಿ ಜನರ ಸಹಭಾಗಿತ್ವವೂ ಮುಖ್ಯವಾಗಿದೆ ಎಂದರಲ್ಲದೆ, ನಗರದ ನೈರ್ಮಲ್ಯ ಕಾಪಾಡುವಿಕೆಯಲ್ಲಿ ಪೌರ ಕಾರ್ಮಿಕರ ಸೇವೆ ಗಣನೀಯವಾದುದು. ಇವರ ಸೇವೆ ಪರಿಗಣಿಸಿ ದೊಡ್ಡಬಳ್ಳಾಪುರ ನಗರಸಭೆಯ 34 ಖಾಯಂ ಪೌರ ಕಾರ್ಮಿಕರ ಕುಟುಂಬಗಳಿಗೆ ರೂ. 3.37 ಕೋಟಿ ವೆಚ್ಚದ ಮನೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿರುವುದು ಪವಿತ್ರ ಕೆಲಸವೆಂದೇ ಭಾವಿಸುತ್ತೇನೆ ಎಂದು ಹೇಳಿದರು.  ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಉದ್ಯಮಗಳ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ನಾಗರಾಜು(ಎಂ.ಟಿ.ಬಿ.) ಅವರು ಮಾತನಾಡಿ ದೊಡ್ಡಬಳ್ಳಾಪುರ ನಗರವು ಅತೀ ವೇಗವಾಗಿ ಬೆಳೆಯುತ್ತಿದ್ದು ಅಂತರರಾಷ್ಟ್ರೀಯ ಮಟ್ಟದ ಕೈಗಾರಿಕೆಗಳು, ಕಾರ್ಖಾನೆಗಳು, ಖಾಸಗಿ ಶಾಲಾ-ಕಾಲೇಜು ಕೇಂದ್ರಗಳು, ಖಾಸಗಿ ಬಡಾವಣೆಗಳು ತಲೆ ಎತ್ತುತ್ತಿದೆ. ದೊಡ್ಡಬಳ್ಳಾಪುರ ನಗರಸಭೆಯ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಾಕಷ್ಟು ಅನುದಾನವನ್ನು ನೀಡಲಾಗಿದ್ದು, ಸಮರ್ಪಕವಾಗಿ ಬಳಸಬೇಕು ಎಂದರು.

  ಸ್ವಚ್ಛತಾ ಕಾರ್ಯನಿರ್ವಹಿಸುವ ಪೌರಕಾರ್ಮಿಕರ ಸೇವೆಯು ಎಲ್ಲಕ್ಕಿಂತ ಮಿಗಿಲಾದುದು. ಪೌರಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡಿದರೂ ಕಡಿಮೆಯೇ. ಖಾಯಂ ಪೌರ ಕಾರ್ಮಿಕರಿಗಾಗಿ 34 ಮನೆಗಳಿರುವ ಎರಡು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿರುವುದು ಉತ್ತಮ ಕಾರ್ಯವಾಗಿದೆ ಎಂದರು.  ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಐದು ಪೌರ ಕಾರ್ಮಿಕರನ್ನು ಸಚಿವರುಗಳು ಸನ್ಮಾನಿಸಿದರು.  ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷರಾದ ಸುಧಾರಾಣಿ, ಉಪಾಧ್ಯಕ್ಷರಾದ ಫರ್ಹಾನಾ ತಾಜ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರೇವಣಪ್ಪ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೋನ ವಂಶಿಕೃಷ್ಣ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶಾಲಿನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*