ಶಿವಮೊಗ್ಗದಲ್ಲಿ ನಿರ್ಮಾಣವಾಗಲಿರುವ ವಿಮಾನನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರ ಹೆಸರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…!

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು 

ಶಿವಮೊಗ್ಗ, ಏಪ್ರಿಲ್ 20: 

CHETAN KENDULI

ಶಿವಮೊಗ್ಗದಲ್ಲಿ ನಿರ್ಮಾಣವಾಗಲಿರುವ ವಿಮಾನನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಇಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

 ಡಿಸೆಂಬರ್ ತಿಂಗಳಲ್ಲಿ ಈ ವಿಮಾನ ನಿಲ್ದಾನದ ಉದ್ಘಾಟನೆಗೆ ಸಜ್ಜಾಗಲಿದೆ. ಅದಕ್ಕೂ ಮುನ್ನ ಎಲ್ಲಾ ಕಾಮಗಾರಿಗಳನ್ನು ಜೊತೆಯಾಗಿ ನಿರ್ವಹಿಸಿ ಜನರಿಗೆ ಲೋಕಾರ್ಪಣೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಶಿವಮೊಗ್ಗದ ವಿಮಾನ ನಿಲ್ದಾಣ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕೇಂದ್ರ ವಿಮಾನಯಾನ ಸಚಿವರಿಗೆ ಪ್ರಸ್ತಾವನೆ ಕಳುಹಿಸಿ ಅಲ್ಲಿಂದ ಅನುಮೋದನೆ ಪಡೆದ ಕೂಡಲೇ ವಿಮಾನ ನಿಲ್ದಾಣಕ್ಕೆ ನಾಮಕರಣದ ಆದೇಶವನ್ನು ಪಡೆದುಕೊಳ್ಳುತ್ತೇವೆ. ಉಡಾನ್ ಯೋಜನೆಯಡಿ ಕಾಮಗಾರಿಯಲ್ಲಿ ಕೈಗೊಂಡಿದ್ದು, ವಿಮಾನನಿಲ್ದಾಣ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳಲಾಗುವುದು. ಎಟಿಸಿ ಪರಿಕರಗಳನ್ನು ಅಳವಡಿಸಿ, ಸೌಲಭ್ಯಗಳನ್ನು ನಿರ್ಮಿಸಲಾಗುವುದು ತಿಳಿಸಿದರು.



ಕರ್ನಾಟಕದ ಹೆಮ್ಮೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ:

ಶಿವಮೊಗ್ಗದ ಕೈಗಾರಿಕೋದ್ಯಮ, ಶಿಕ್ಷಣ, ಆರೋಗ್ಯ ಎಲ್ಲ ಅಭಿವೃದ್ಧಿಗೆ ವಿಮಾನ ಸೌಲಭ್ಯ ಬಹಳ ಪ್ರಮುಖವಾಗಿದ್ದು, ಜನರ ಸಮಯ ಹಾಗೂ ಹಣದ ಉಳಿತಾಯವೂ ಆಗುತ್ತದೆ. ಬೆಂಗಳೂರು ನಂತರ ವಿವಿಧ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಬಿಜಾಪುರ ಮತ್ತು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮಕ್ಕೆ ಇಂಬು ನೀಡಲು ವಿಮಾನನಿಲ್ದಾಣದ ಅವಶ್ಯಕತೆ ಬಹಳ ವರ್ಷಗಳಿಂದ ಇದೆ.

ನಮ್ಮ ನಾಯಕರಾದ ಯಡಿಯೂರಪ್ಪನವರು ಶಿವಮೊಗ್ಗ ಏರ್‍ಪೋರ್ಟ್ 2006-07 ರಿಂದ ಪ್ರಾರಂಭ ಮಾಡಲು ಯೋಜನೆ ರೂಪಿಸಿದ್ದರು. 2020 ರಲ್ಲಿ ಯೋಜನೆಗೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ನಂತರ ಶಿವಮೊಗ್ಗ ವಿಮಾನನಿಲ್ದಾಣದಲ್ಲಿ 3200 ಮಿ ಉದ್ದದ ರನ್ ವೇ ಇರಲಿದೆ. ಏರ್ ಬಸ್ ಲ್ಯಾಂಡ್ ಆಗುವ ವ್ಯವಸ್ಥೆ ಆಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ವಿಮಾನನಿಲ್ದಾಣವಾಗಲು ಎಲ್ಲ ಮೂಲಸೌಕರ್ಯಗಳು ಇಲ್ಲಿ ಸಿಗಲಿವೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೈಯಕ್ತಿಕವಾಗಿ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿ ಅವರ ಆಡಳಿತದ ಅವಧಿಯಲ್ಲಿ ಹಲವಾರು ಮೂಲಭೂತ ಸೌಕರ್ಯಗಳನ್ನು ಶಿವಮೊಗ್ಗ ಜಿಲ್ಲೆಗೆ ಕಲ್ಪಿಸಿದ್ದಾರೆ. ವಿಮಾನ ನಿಲ್ದಾಣ ಬರುವ ದಿನಗಳಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿ ಈ ಭಾಗದ ಕೈಗಾರಿಕಾ, ವಾಣಿಜ್ಯ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಲಿದೆ. ಕರ್ನಾಟಕದ ಹೆಮ್ಮೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಲಿದೆ ಎಂದರು.

ರೈತರ ಸಹಕಾರ:

ವಿಮಾನನಿಲ್ದಾಣಕ್ಕೆ ಜಿಲ್ಲೆಯ ಹಲವಾರು ರೈತರು ಈಗಾಗಲೇ ಸಹಕಾರ ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ರೈತರ ಸಭೆಯನ್ನು ನಡೆಸಲಾಗಿದೆ. ಮುಂದೆ ಅವಶ್ಯಕತೆ ಇರುವ ಜಮೀನನ್ನು ನೀಡಲು ರೈತರು ಒಪ್ಪಿ ಸಹಕರಿಸಿದ್ದಾರೆ. ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು. ರೈತರಿಗೆ ಪರಿಹಾರವನ್ನು ನೀಡಬೇಕಿದೆ

ಹೆಚ್ಚುವರಿ ಅನುದಾನ ಬಿಡುಗಡೆ:

ವಿಮಾನನಿಲ್ದಾಣ ಕಾಂಪೌಂಡ್ ಸುತ್ತಲಿನ ಸರ್ವಿಸ್ ರಸ್ತೆಗೆ ಡಾಂಬರು ಹಾಕಬೇಕಾಗಿದೆ. ರಾತ್ರಿ ವೇಳೆಯಲ್ಲಿ ವಿಮಾನಗಳನ್ನು ಇಳಿಸಲು (ನೈಟ್ ಲ್ಯಾಂಡಿಂಗ್) ಸೌಲಭ್ಯ ಕಲ್ಪಿಸಬೇಕಿದೆ. ಈ ಎಲ್ಲಾ ಕಾಮಗಾರಿಗಳಿಗೆ ಹೆಚ್ಚುವರಿ ಹಣ ಸುಮಾರು 40-50 ಕೋಟಿ ರೂ.ಗಳ ಅಗತ್ಯವಿದೆ. ಅದನ್ನು ರಾಜ್ಯ ಸರ್ಕಾರ ಅನುಮೋದನೆ ಮಾಡಿ ಬಿಡುಗಡೆ ಮಾಡಲಿದೆ. ಕಾಂಪೌಂಡಿನ ಹೊರಗೆ ರೈತರು ಹೊಲಗಳನ್ನು ಬಿಟ್ಟುಕೊಟ್ಟಿದ್ದು ಅವರು ಓಡಾಡಲು ತೊಂದರೆಯಾಗುತ್ತದೆ. ಅದಕ್ಕಾಗಿ ಕಾಂಪೌಂಡಿನ ಆಚೆಗೂ ಡಾಂಬರು ರಸ್ತೆ ನಿರ್ಮಿಸಲಾಗುವುದು. ಶಿವಮೊಗ್ಗದಿಂದ ವಿಮಾನ ನಿಲ್ದಾಣದ ರಸ್ತೆಯನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಟ್ಟಕ್ಕೆ ಅಬಿವೃದ್ಧಿ ಮಾಡಲಾಗುವುದು. ಇದರಿಂದ ಪ್ರವಾಸೋದ್ಯಮಕ್ಕೂ ಬಹಳ ದೊಡ್ಡ ಸಹಾಯಾಗಲಿದೆ.

ಜೋಗದ ಅಭಿವೃದ್ಧಿಗೂ 300 ಕೊಟಿ ರೂ.ಗಳ ಅನುಮೋದನೆ ನೀಡಲಾಗಿದೆ. ಕೇಬಲ್ ಕಾರ್, ಓಡಾಡಲು ವ್ಯವಸ್ಥೆ, ವೀಕ್ಷಣಾ ಪಾಯಿಂಟ್, ಹೋಟೇಲ್, ಡಾರ್ಮೆಟರಿಗಳನ್ನು ನಿರ್ಮಿಸಲಾಗುವುದು. ಮಳೆಗಾಲದಲ್ಲಿ ಮಾತ್ರ ಪ್ರವಾಸಿಗರನ್ನು ಜೋಗ ಆಕರ್ಷಿಸುತ್ತದೆ ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಆದರೆ ವರ್ಷದಲ್ಲಿ 10 ತಿಂಗಳು ಜೋಗ ಜಲಪಾತವನ್ನು ಬಳಕೆ ಮಾಡಬಹುದಾಗಿದೆ ಎಂದರು.

ಮೂಲಸೌಕರ್ಯ ಅಭಿವೃದ್ಧಿಯಿಂದ ಆರ್ಥಿಕ ಬೆಳವಣಿಗೆ :

ಅಭಿವೃದ್ಧಿಯ ಪಥದಲ್ಲಿ ಮುಂದುವರಿಯಲು ಮೂಲಭೂತ ಸೌಕರ್ಯ ಅಭಿವೃದ್ಧಿ ಬಹಳ ಮುಖ್ಯ. ಇದರ ಮುಖಾಂತರ ಆರ್ಥಿಕ ಬೆಳವಣಿಗೆ ಸಾಧ್ಯ. ಈ ವರ್ಷ ಕೇಂದ್ರ ಸರ್ಕಾರ ಶಿವಮೊಗ್ಗ-ರಾಣಿಬೆನ್ನೂರು ಮಾರ್ಗ ಸೇರಿದಂತೆ 8 ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಒಪ್ಪಂದ ಮಾಡಿಕೊಂಡು, ಜಿಎಸ್‍ಟಿ ತೆರಿಗೆ, ಅಗ್ರಿಗೇಟರ್ಸ್ ರಾಯಲ್ಟಿಯನ್ನು ಬಿಟ್ಟುಕೊಡುವ ವಿಚಾರಕ್ಕೆ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದರಿಂದ ಭೂ ಸ್ವಾಧೀನ ದರ 50 ರಿಂದ 25% ಕ್ಕೆ ಇಳಿಯಲಿದೆ. ಇದರಿಂದಾಗಿ ಬಾಕಿಯಿರುವ ರಿಂಗ್ ರಸ್ತೆ ನಿರ್ಮಾಣವನ್ನು ಸಹ ಕೈಗೆತ್ತಿಕೊಳ್ಳಲಾಗುವುದು. ಮೇಲ್ಸೇತುವೆಗಳ ನಿರ್ಮಾಣವನ್ನು ಪ್ರಾರಂಭಿಸಲಾಗುವುದು ಎಂದರು.

Be the first to comment

Leave a Reply

Your email address will not be published.


*