ರಾಜ್ಯ ಸುದ್ದಿಗಳು
ದೇವನಹಳ್ಳಿ
*ಬೀರಸಂದ್ರಗ್ರಾಮ , ಜಿಲ್ಲಾಡಳಿತಭವನ, ದೇವನಹಳ್ಳಿ ತಾಲ್ಲೂಕು:* ಬೇಸಿಗೆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.ಕೊಳವೆಬಾವಿ ಕೊರೆದು ಮೋಟರ್ ಅಳವಡಿಕೆ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಬೇಕಿರುವ 46 ಪ್ರಕರಣಗಳಲ್ಲಿ 15 ದಿನದಲ್ಲಿ ತ್ವರಿತವಾಗಿ ಸಂಪರ್ಕ ನೀಡುವಂತೆ ಕೆಡಿಪಿ ಸಭೆಯಲ್ಲಿ ಶುಕ್ರವಾರ ಸೂಚನೆ ನೀಡಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಎರಡು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಅವುಗಳಿಗೆ ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿಸಲಾಗುವುದು. ನೆಲಮಂಗಲದ ಒಂದು ಯೋಜನೆಗೆ ಅನುಮೋದನೆ ಸಿಕ್ಕಿದೆ. ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕುಡಿಯುವ ನೀರಿನ ಕಾಮಗಾರಿಗಳಿಗೆ ಟಾಸ್ಕ್‌ಫೋರ್ಸ್ ಕಮಿಟಿಗೆ ಪ್ರಸ್ತಾವನೆ ಸಲ್ಲಿಸಿದ ಬಳಿಕವೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದರು.
*ಅಧಿಕಾರಿಗಳೇ ಹೊಣೆ :* ಇಲಾಖೆ ಅಧಿಕಾರಿಗಳು ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಮುಗಿಸದಿದ್ದರೆ ಗುತ್ತಿಗೆದಾರ ಗುಣಮಟ್ಟದ ಕೆಲಸ ಮಾಡುವುದಿಲ್ಲ. ವಿಳಂಬದಿಂದ ದರ ಏರಿಕೆ ಆಗುತ್ತದೆ. ಈ ರೀತಿ ಕಾಮಗಾರಿ ಅರ್ಧಕ್ಕೆ ನಿಂತರೆ ಸಂಬಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.ಸದ್ಯ ವಿಳಂಬಗತಿಯಲ್ಲಿ ಸಾಗಿರುವ ಹೊಸಕೋಟೆ ತಾಲ್ಲೂಕಿನ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿಗೆ ನೀಡಿರುವ ಅನುದಾನದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ವಿವರ ನೀಡಲು ವಿಫಲರಾದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವರು, ಇನ್ನು ಮುಂದೆ ಮಾಹಿತಿ ಇಲ್ಲದೆ ಸಭೆಗೆ ಬಂದರೆ ಶಿಸ್ತುಕ್ರಮಕ್ಕೆ ಸೂಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.*ವೈದ್ಯರ ಕೊರತೆ ಇಲ್ಲ :* 48 ಪಿಎಚ್‌ಸಿಗಳಲ್ಲಿ ವೈದ್ಯರ ಕೊರತೆ ಇಲ್ಲ. ನಿನ್ನೆ ಒಬ್ಬ ವೈದ್ಯರ ವರ್ಗಾವಣೆ ಆಗಿದೆ. ತಜ್ಞರ ಹುದ್ದೆಗಳು ಕೊರತೆ ಇಲ್ಲ. ಹೊಸಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುವ ಒಬ್ಬಅರವಳಿಕೆ ತಜ್ಞರಿಗೆ ಒತ್ತಡ ಇರುವುದರಿಂದ ಎನ್‌ಎಚ್‌ಎಂ ಮೂಲಕ ಹೆಚ್ಚುವರಿಯಾಗಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಕೋವಿಡ್ ಲಸಿಕಾಕರಣ ತೃಪ್ತಿಕರವಾಗಿದೆ. ಮಕ್ಕಳ ಲಸಿಕಾಕರಣ ಇನ್ನಷ್ಟು ಚುರುಕಗೊಳಿಸಬೇಕು. 11.65 ಲಕ್ಷದಷ್ಟಿರುವ ಜನಸಂಖ್ಯೆ ಪೈಕಿ 3.90 ಜನರಿಗೆ ಎಬಿ-ಎಆರ್‌ಕೆ ಕಾರ್ಡುಗಳನ್ನು ವಿತರಿಸಲಾಗಿದೆ. ಬಾಕಿಯಿರುವವರಿಗೆ ಚುರುಕಿನಿಂದ ವಿತರಿಸುವ ಕೆಲಸ ಆಗಬೇಕು. ಡಿಸಿ ಮತ್ತು ಸಿಇಒ ಅವರು ಸಮನ್ವಯದೊಂದಿಗೆ ಕೆಲಸ ಮಾಡಬೇಕು. ಅತ್ಯುತ್ತಮ ಕಾರ್ಯಕ್ರಮ, ಚುನಾಯಿತ ಪ್ರತಿನಿಧಿಗಳ ಸಹಕಾರವು ಬೇಕಾಗುತ್ತದೆ. ಐದು ಲಕ್ಷ ರೂ. ಮೌಲ್ಯದ ಚಿಕಿತ್ಸೆ ಪಡೆಯಲು ಅವಕಾಶವಿದೆ. ಇದನ್ನುಆದ್ಯತೆ ಮೇರೆಗೆ ಸಮರೋಪಾದಿಯಲ್ಲಿ ವಿತರಿಸಬೇಕು ಎಂದು ಸೂಚಿಸಿದರು.
*ಜನೌಷಧಿ ಕೇಂದ್ರ :*
ಜನೌಷಧಿ ಕೇಂದ್ರಗಳಲ್ಲಿ ಸಮರ್ಪಕವಾಗಿ ಔಷಧಿಗಳು ಇರುವುದಿಲ್ಲ ಮತ್ತು ನಿಯಮಿತವಾಗಿ ತೆರೆಯುವುದಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಅವರ ದೂರಿನ ಹಿನ್ನಲೆಯಲ್ಲಿ ಎಲ್ಲಾ ಜನೌಷಧಿ ಕೇಂದ್ರಗಳ ಮಾಲೀಕರ ಸಭೆ ಕರೆದು ನಿಯಮಿತವಾಗಿ ತೆರೆಯದ ಮತ್ತು ದಾಸ್ತಾನು ಇಟ್ಟುಕೊಳ್ಳದವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಬೇಕು. ಗುರಿ ನಿಗದಿ ಪಡಿಸುವ ಜತೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಾಕೀತು ನೀಡಿದರು.
ಆದಷ್ಟು ಬೇಗ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಾಗುವುದು. ನೆಲಮಂಗಲ ಮತ್ತು ಹೊಸಕೋಟೆಯಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆಗೆ ಮಂಜೂರಾತಿ ನೀಡಲಾಗಿದೆ ಎಂದರು. ಸಚಿವ ನಾಗರಾಜು ಅವರು ಇದಕ್ಕೆ ದನಿಗೂಡಿಸಿ ಈ ಹಿಂದೆಯೇ ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೆರಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
*ಬೆಳೆವಿಮೆ ಯೋಜನೆಯ ಲಾಭ ರೈತರಿಗೆ ಸಿಗಬೇಕು*
*ಕಾಲಮಿತಿಯಲ್ಲಿ ಗುರಿ ತಲುಪಲು ಸಚಿವ ಸುಧಾಕರ್ ಸೂಚನೆ*
*ಬೀರಸಂದ್ರಗ್ರಾಮ, ಜಿಲ್ಲಾಡಳಿತ ಭವನ, ದೇವನಹಳ್ಳಿ ತಾಲ್ಲೂಕು :* ನಿರೀಕ್ಷಿತ ಪ್ರಮಾಣದಲ್ಲಿ ಬೆಳವಿಮೆ ಯೋಜನೆಯಡಿ ನೋಂದಣಿ ಮಾಡಿಸದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಸಚಿವ ಸುಧಾಕರ್ ಅವರು ಕೆಡಿಪಿ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ರೈತರಲ್ಲಿ ಅರಿವು ಮೂಡಿಸಿ ಗರಿಷ್ಠ ಪ್ರಮಾಣದಲ್ಲಿ ನೋಂದಣಿ ಮಾಡಿಸಬೇಕು. ಜಿಲ್ಲೆಯಲ್ಲಿ ಸದ್ಯ ಶೇಕಡಾ ಒಂದರಷ್ಟು ಮಾತ್ರ ನೋಂದಣಿ ಮಾಡಲಾಗಿದೆ. ದೂರದ ಬೀದರ್ ಜಿಲ್ಲೆ ಈ ವಿಷಯದಲ್ಲಿ ದೊಡ್ಡ ಸಾಧನೆ ಮಾಡಿದೆ. ಅದೇ ರೀತಿ ಕಾಲಮಿತಿಯಲ್ಲಿ ಗುರಿ ಹಾಕಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚುನಾಯಿತ ಪ್ರತಿನಿಧಿಗಳ ಸಹಕಾರದೊಂದಿಗೆ ರೈತರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಿ ಕನಿಷ್ಟ ಶೇಕಡಾ 25ರಷ್ಟು ಮಂದಿಯನ್ನಾದರೂ ನೋಂದಣಿ ಮಾಡಿಸಬೇಕು. ರಸಗೊಬ್ಬರಗಳ ಕೊರತೆ ಇರದಂತೆ ಎಚ್ಚರವಹಿಸಿ, ಸಾವಯವ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. 1.93 ಲಕ್ಷ ಕೃಷಿ ಕುಟುಂಬಗಳಿಗೆ 171 ಕೋಟಿ ರೂ. ಹಣ ರೈತರ ಖಾತೆಗಳಿಗೆ ಜಮೆ ಆಗಿದೆ. ಈ ಬಗ್ಗೆಯೂ ರೈತರಿಗೆ ಮಾಹಿತಿ ನೀಡಬೇಕು ಎಂದರು.
*ಸಂಸ್ಕರಣಾ ಘಟಕ :*
ಕೆಪೆಕ್‌ನಿಂದ ದೇವನಹಳ್ಳಿ ತಾಲ್ಲೂಕಿನ ಪೂಜೇನಹಳ್ಳಿಯಲ್ಲಿ ಶೈತ್ಯಾಗಾರ, ಸಂಸ್ಕರಣಾ ಘಟಕ ನಾಲ್ಕು ಎಕರೆ ಪ್ರದೇಶದಲ್ಲಿ ನಿರ್ಮಾಣ ಆಗುತ್ತಿದೆ. ಶೀಘ್ರದಲ್ಲೇ ಅದು ಕಾರ್ಯಾರಂಭ ಮಾಡಲಿದೆ. ಈ ಭಾಗದ ಬೆಳೆಗಾರರಿಗೆ ಹೆಚ್ಚು ಅನುಕೂಲ ಆಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.ನೆಲಮಂಗಲ ಬಳಿಯ ಖಾಸಗಿ ಶೈತ್ಯಾಗಾರಕ್ಕೆ ಸರ್ಕಾರದಿಂದ ಸಬ್ಸಿಡಿ ನೀಡಲಾಗಿದೆ. ಅದು ದೊಡ್ಡ ಕಂಪನಿಗಳಿಗಿಂತ ಹೆಚ್ಚಾಗಿ ರೈತರಿಗೆ ಅನುಕೂಲ ಆಗುವಂತೆ ನೋಡಿಕೊಳ್ಳಬೇಕು. ರೇಷ್ಮೆಮನೆ ನಿರ್ಮಾಣಕ್ಕೆ ನರೇಗಾ ಯೋಜನೆ ಅಡಿಯಲ್ಲಿ ನೆರವು ಯೋಜನೆಗೆ ಜಿಲ್ಲೆಯನ್ನು ಸೇರಿಸಲು ಪ್ರಸ್ತಾವನೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆ ಸೌಲಭ್ಯದ ನೆರವು ಪಡೆಯಲಾಗುತ್ತಿದೆ ಎಂದು ವಿವರಿಸಿದರು.
*ಅಪೌಷ್ಟಿಕತೆಯಿಂದ ನರಳಬಾರದು :* ಗ್ರಾಮಾಂತರ ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದೆ. ಹಾಗೆಯೇ ಬಹು ದೊಡ್ಡ ಸಂಖ್ಯೆಯಲ್ಲಿ ಸಿಎಸ್‌ಆರ್ ನಿಧಿ ಅಡಿಯಲ್ಲೂ ತೆಗೆದುಕೊಳ್ಳಬೇಕು. ಅಂಗನವಾಡಿ, ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಅಪೌಷ್ಟಿಕತೆಯಿಂದ ಮಕ್ಕಳು ನರಳದಂತೆ ಎಚ್ಚರವಹಿಸಬೇಕು. ರಾಜಧಾನಿ ಸೆರಗಿನಲ್ಲಿರುವ ಈ ಜಿಲ್ಲೆಯಲ್ಲಿ ಒಬ್ಬ ಮಗುವು ಅಪೌಷ್ಟಿಕತೆಯಿಂದ ನರಳದಂತೆ ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
———————————–
*ಸಾರ್ವಜನಿಕ ಸ್ಮಶಾನ ನಿರ್ಮಾಣಕ್ಕೆ ಸಚಿವ ಸುಧಾಕರ್ ಸೂಚನೆ*
*ಬೀರಸಂದ್ರಗ್ರಾಮ, ಜಿಲ್ಲಾಡಳಿತ ಭವನ, ದೇವನಹಳ್ಳಿ ತಾಲ್ಲೂಕು :* ಎಲ್ಲಾ ತಾಲ್ಲೂಕು ಕೇಂದ್ರಗಳ ಸಮೀಪ ಸಾರ್ವಜನಿಕ ಸ್ಮಶಾನ ನಿರ್ಮಾಣಕ್ಕೆ ಆದ್ಯತೆ ನೀಡಿ ಕಾಮಗಾರಿ ಪೂರ್ಣಗೊಳಿಸುವಂತೆ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರಾದ ಡಾ. ಕೆ. ಸುಧಾಕರ್ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಎಲ್ಲ ಆರು ತಾಲ್ಲೂಕುಗಳಲ್ಲಿ ಈ ಯೋಜನೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಬೇಕು. ಜಾತಿವಾರು ಸ್ಮಶಾನಕ್ಕೆ ಅವಕಾಶ ಸಾಧ್ಯವಿಲ್ಲ. ಹೀಗಾಗಿ ಸಾರ್ವಜನಿಕ ಸ್ಮಶಾನಗಳನ್ನು ಆದ್ಯತೆ ಮೇರೆಗೆ ಬಳಕೆಗೆ ನೀಡಬೇಕು ಎಂದು ತಿಳಿಸಿದರು.ತ್ಯಾಜ್ಯ ವಿಲೇವಾರಿ ವಿಷಯದಲ್ಲಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ಇದಕ್ಕಾಗಿ ಚುನಾಯಿತ ಪ್ರತಿನಿಧಿಗಳ ಸಹಕಾರ ಪಡೆದುಕೊಳ್ಳಬೇಕು. ವೈಜ್ಞಾನಿಕ ವಿಲೇವಾರಿಯಿಂದ ಹೆಚ್ಚಿನ ಸಮಸ್ಯೆ ಉದ್ಭವಿಸುವುದಿಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
*ನಕಲಿ ದಾಖಲೆ ಸೃಷ್ಟಿ, ಅಕ್ರಮಗಳಲ್ಲಿ ಭಾಗಿಯಾದರೆ ತಕ್ಕ ಶಾಸ್ತಿ*
*ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಸುಧಾಕರ್ ಎಚ್ಚರಿಕೆ*
*ಬೀರಸಂದ್ರ ಗ್ರಾಮ, ಜಿಲ್ಲಾಡಳಿತ ಭವನ, ದೇವನಹಳ್ಳಿ ತಾಲ್ಲೂಕು :* ದೇವನಹಳ್ಳಿ ತಾಲ್ಲೂಕಿನ ರೆವಿನ್ಯೂ ದಾಖಲೆಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ತಪ್ಪಿತಸ್ಥ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಕೆಡಿಪಿ ಸಭೆಯಲ್ಲಿ ಸಚಿವ ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದರು.ನಕಲಿ ದಾಖಲೆ ಸೃಷ್ಟಿ ಮತ್ತು ಕಳವು ಪ್ರಕರಣಗಳ ಬಗ್ಗೆ ದೂರುಗಳಿವೆ. ಭೂಮಿ ಖರೀದಿಗೆ ಮೀನಾಮೇಷ ಎಣಿಸುವ ಸನ್ನಿವೇಶ ನಿರ್ಮಾಣ ಆಗಿದೆ. ಈ ಬಗ್ಗೆ ನಿರ್ದಿಷ್ಟ ದೂರುಗಳು ಬಂದಿವೆ. ತನಿಖೆ ಸಂದರ್ಭದಲ್ಲಿ ಯಾರೇ ಆದರೂ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.ಕಂದಾಯ ಇಲಾಖೆಯ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಬೇಕು. ಪ್ರಮುಖ ದಾಖಲೆಗಳು ಇರುವ ಕೊಠಡಿಗಳಿಗೆ ಅಧಿಕೃತ ಸಿಬ್ಬಂದಿ ಹೊರತು ಬೇರೆಯವರ ಪ್ರವೇಶ ನಿರ್ಬಂಧಿಸಬೇಕು. ನಿಯಮಿತವಾಗಿ ಪರಿಶೀಲನೆ ನಡೆಸಬೇಕು. ನಕಲಿ ದಾಖಲೆ ಸೃಷ್ಟಿಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿದರೆ ಇಂತಹ ಪ್ರಕರಣಗಳು ಮರುಕಳಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸಭೆಯಲ್ಲಿ ನಕಲಿ ದಾಖಲೆ ಮತ್ತು ಅಕ್ರಮಗಳ ಬಗ್ಗೆ ಚುನಾಯಿತ ಪ್ರತಿನಿಧಿಗಳಿಂದ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರವಹಿಸುವ ಜತೆಗೆ ಅಕ್ರಮಗಳಿಗೂ ಕಡಿವಾಣ ಹಾಕಬೇಕು ಎಂದು ಸೂಚಿಸಿದರು. ನಾಲ್ಕು ಮಂದಿ ತಹಸೀಲ್ದಾರ್‌ಗಳ ವ್ಯಾಪ್ತಿಗೆ ಸೇರಿದ ದಾಖಲೆಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಮತ್ತು ಲೋಪಗಳು ಕಂಡು ಬಂದಿಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಮತ್ತು ತಮ್ಮ ಗಮನಕ್ಕೂ ತರಬೇಕು ಎಂದು ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಜನಸಂದಣಿ ದಟ್ಟಣೆ ಹೆಚ್ಚಿರುವ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮತ್ತು ನೆಲಮಂಗಲಗಳಲ್ಲಿ ಅತ್ಯುತ್ತಮ ಸೌಲಭ್ಯದ ರಿಜಿಸ್ಟ್ರಾರ್ ಕಚೇರಿಗಳನ್ನು ನಿರ್ಮಿಸಿಕೊಡುವ ಬಗ್ಗೆ ಕಂದಾಯ ಸಚಿವರ ಜತೆ ಮಾತುಕತೆ ನಡೆಸುವುದಾಗಿ ಸಚಿವರು ಸ್ಪಷ್ಟಪಡಿಸಿದರು.
Be the first to comment