ಚುನಾವಣಾ ಆಯೋಗವು ಎಲ್ಲ ವಿವಿಪ್ಯಾಟ್‌ಗಳ ಪರಿಶೀಲನೆ ನಡೆಸಬೇಕು

 

ವಾರ್ತಾ ಭಾರತಿ : 18 Mar, 2022
ಇ.ಎ.ಎಸ್. ಶರ್ಮಾ

ರಿಗೆ,

ಶ್ರೀ ಸುಶೀಲ್ ಚಂದ್ರ
ಮುಖ್ಯ ಚುನಾವಣಾ ಆಯುಕ್ತ
ಭಾರತೀಯ ಚುನಾವಣಾ ಆಯೋಗ

ಶ್ರೀ ರಾಜೀವ್ ಕುಮಾರ್
ಚುನಾವಣಾ ಆಯುಕ್ತ
ಭಾರತೀಯ ಚುನಾವಣಾ ಆಯೋಗ

ಶ್ರೀ ಅನೂಪ್ ಚಂದ್ರ ಪಾಂಡೆ
ಚುನಾವಣಾ ಆಯುಕ್ತ
ಭಾರತೀಯ ಚುನಾವಣಾ ಆಯೋಗ

ಪ್ರಿಯ ಸತೀಶ್ ಚಂದ್ರ, ರಾಜೀವ್ ಕುಮಾರ್, ಪಾಂಡೆ

ನ್ಯಾಯಮೂರ್ತಿ ಮದನ್ ಬಿ. ಲೋಕುರ್ ಅಧ್ಯಕ್ಷತೆಯ ಸಿಟಿಝನ್ಸ್ ಕಮಿಶನ್ ಆನ್ ಇಲೆಕ್ಷನ್ಸ್ (ಸಿಸಿಇ)ನ ವರದಿಯ ಬಗ್ಗೆ ನಾನು ತಮ್ಮ ಗಮನ ಸೆಳೆಯುತ್ತಿದ್ದೇನೆ. ಈ ವರದಿಯ ಅಂಶಗಳು ದೂರಗಾಮಿ ಪರಿಣಾಮಗಳನ್ನು ಹೊಂದಿವೆ. ಭಾರತೀಯ ಚುನಾವಣಾ ಆಯೋಗವು ಈ ವರದಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆಯೇ ಹಾಗೂ ಅದಕ್ಕೆ ಪ್ರತಿಕ್ರಿಯೆ ನೀಡಿದೆಯೇ ಎನ್ನುವುದು ನನಗೆ ಗೊತ್ತಿಲ್ಲ.

ಭಾರತೀಯ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯು ಅದರ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆಯನ್ನು ಅವಲಂಬಿಸಿದೆ. ಇಲೆಕ್ಟ್ರಾನಿಕ್ ಮತ ಯಂತ್ರ (ಇವಿಎಮ್)ಗಳ ತಂತ್ರಜ್ಞಾನದ ದೋಷಗಳ ಬಗ್ಗೆ ಭಾರತದಲ್ಲಿ ಮಾತ್ರವಲ್ಲ, ಇತರ ಹಲವಾರು ದೇಶಗಳಲ್ಲೂ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ತಮ್ಮ ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಇವಿಎಮ್‌ಗಳ ಬಳಕೆಯ ವಿಷಯದಲ್ಲಿ ಇನ್ನೊಂದು ಕಳವಳವನ್ನೂ ವ್ಯಕ್ತಪಡಿಸಲಾಗುತ್ತಿದೆ. ಮೊದಲು ಪ್ರತಿ ಕ್ಷೇತ್ರಗಳಲ್ಲಿನ ವಿವಿಧ ಮತಗಟ್ಟೆಗಳ ಮತಪತ್ರಗಳನ್ನು ಮಿಶ್ರಗೊಳಿಸಿದ ಬಳಿಕ ಲೆಕ್ಕ ಮಾಡುವ ಪದ್ಧತಿ ಇತ್ತು. ಆಗ ಯಾವ ಪ್ರದೇಶವು ಯಾರಿಗೆ ಮತ ಹಾಕಿದೆ ಎನ್ನುವುದು ತಿಳಿಯುತ್ತಿರಲಿಲ್ಲ. ಆದರೆ, ಈಗಿನ ಇವಿಎಮ್‌ಗಳು ಮತದಾನದ ಗೌಪ್ಯತೆಯನ್ನು ಉಲ್ಲಂಘಿಸುತ್ತಿವೆ. ತಮ್ಮ ವಿರುದ್ಧ ಯಾವ ಗುಂಪುಗಳು ಮತ ಹಾಕಿವೆ ಎನ್ನುವುದನ್ನು ಅಭ್ಯರ್ಥಿಗಳು ಇವಿಎಮ್ ಮೂಲಕ ಗುರುತಿಸಬಹುದಾಗಿದೆ.

ಇವಿಎಮ್‌ಗಳ ದೋಷಗಳ ಕುರಿತ ಮೊದಲ ಕಳವಳವು ತಂತ್ರಜ್ಞಾನಕ್ಕೆ ಸಂಬಂಧಿಸಿದೆ. ಇವಿಎಮ್‌ನಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಸಂಶಯಾತೀತವಾಗಿ ಸ್ವತಃ ತನಗೆ ಮತ್ತು ಮತದಾರರಿಗೆ ಮನವರಿಕೆ ಮಾಡುವ ಜವಾಬ್ದಾರಿ ಭಾರತೀಯ ಚುನಾವಣಾ ಆಯೋಗದ್ದಾಗಿದೆ. ಸಾಕಷ್ಟು ತಾಂತ್ರಿಕ ಪುರಾವೆಯಿಲ್ಲದೆ ಹಾಗೂ ಸಾರ್ವಜನಿಕರಿಗೆ ಕಾಣುವ ಭೌತಿಕ ಪರಿಶೀಲನೆಯ ಪ್ರಕ್ರಿಯೆಯಿಲ್ಲದೆ, ಇವಿಎಮ್‌ಗಳ ಪರವಾಗಿ ಸಾಮಾನ್ಯ ಹೇಳಿಕೆಯೊಂದನ್ನು ಚುನಾವಣಾ ಆಯೋಗವು ನೀಡಿದರೆ ಸಾಕಾಗುವುದಿಲ್ಲ. ಸಾರ್ವಜನಿಕರಲ್ಲಿ ವಿಶ್ವಾಸ ಹುಟ್ಟಿಸಬಲ್ಲ ಇಂಥ ಏಕೈಕ ವಿಶ್ವಾಸಾರ್ಹ ವಿಧಾನವೆಂದರೆ, ಇವಿಎಮ್ ನೀಡಿದ ಲೆಕ್ಕವನ್ನು ವಿವಿಪ್ಯಾಟ್ ಲೆಕ್ಕದೊಂದಿಗೆ ತಾಳೆ ನೋಡುವುದು. ಈ ಪ್ರಕ್ರಿಯೆಯಿಂದಾಗಿ ಮತ ಎಣಿಕೆ ಸ್ವಲ್ಪ ವಿಳಂಬಗೊಂಡರೂ ಸರಿಯೇ.

ಈ ಜವಾಬ್ದಾರಿಯನ್ನು ನಿಭಾಯಿಸಲು ಚುನಾವಣಾ ಆಯೋಗವು ಪ್ರಾಮಾಣಿಕವಾಗಿ ಸಿದ್ಧವಾಗಿದೆಯಾದರೆ, ಈ ಪ್ರಕ್ರಿಯೆಯನ್ನು ಅದು ತಕ್ಷಣ ಉತ್ತರಪ್ರದೇಶದಲ್ಲಿ ಕೈಗೆತ್ತಿಕೊಳ್ಳಬೇಕು. ಚಲಾವಣೆಯಾದ ಮತಗಳ 5 ಶೇಕಡಕ್ಕಿಂತಲೂ ಕಡಿಮೆ ಅಂತರದ ಗೆಲುವುಗಳ ದಾಖಲಾದ 131 ಕ್ಷೇತ್ರಗಳಲ್ಲಿ ವಿವಿಪ್ಯಾಟ್‌ಗಳನ್ನು 100 ಶೇಕಡ ಲೆಕ್ಕ ಮಾಡಬೇಕು. ಇಂಥ ಪರಿಶೀಲನೆಯನ್ನು ಎಲ್ಲ ರಾಜಕೀಯ ಪಕ್ಷಗಳ ಎದುರೇ ಮಾಡಬೇಕು ಹಾಗೂ ಸಾರ್ವಜನಿಕರಿಗೂ ನೋಡಲು ಲಭ್ಯವಿರಬೇಕು. ಒಂದೇ ಒಂದು ಕ್ಷೇತ್ರದಲ್ಲಿ ವಿವಿಪ್ಯಾಟ್ ಲೆಕ್ಕವು ಇವಿಎಮ್ ಲೆಕ್ಕಕ್ಕೆ ಹೊಂದಿಕೊಳ್ಳದಿದ್ದರೂ, ಇತರ ಎಲ್ಲ ಕ್ಷೇತ್ರಗಳಲ್ಲೂ ಇಂಥದೇ ಪರಿಶೀಲನೆ ನಡೆಸುವ ಧೈರ್ಯವನ್ನು ಚುನಾವಣಾ ಆಯೋಗ ಪ್ರದರ್ಶಿಸಬೇಕು. ಉಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇಂಥದೇ ತಪಾಸಣೆ ನಡೆಯುವುದು ಅಗತ್ಯವಾಗಿದೆ.

 

ಈ ಸಲಹೆಗೆ ಪ್ರತಿಕ್ರಿಯಿಸಲು ಚುನಾವಣಾ ಆಯೋಗ ವಿಫಲವಾದರೆ, ಇವಿಎಮ್‌ಗಳ ಪರಿಣಾಮಕಾರಿತ್ವದ ಕುರಿತ ಸಾರ್ವಜನಿಕರ ಆತಂಕವು ಇನ್ನಷ್ಟು ಹೆಚ್ಚುತ್ತದೆ.

ಒಂದು ಕ್ಷೇತ್ರದ ಎಲ್ಲ ಮತಗಟ್ಟೆಗಳ ಮತಪತ್ರ ಗಳನ್ನು ಮಿಶ್ರ ಮಾಡಿ ಮತದಾನದ ಗೌಪ್ಯತೆಯನ್ನು 100 ಶೇಕಡ ಕಾಪಾಡಿಕೊಳ್ಳುವುದಕ್ಕೆ ಸಂಬಂಧಿಸಿದ ಎರಡನೇ ಕಳವಳದ ಬಗ್ಗೆ ಹೇಳುವುದಾದರೆ, ಮುಕ್ತ ಮತ್ತು ನ್ಯಾಯೋಚಿತ ರೀತಿಯಲ್ಲಿ ಚುನಾವಣೆಗಳನ್ನು ನಡೆಸುವುದು 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ 128ನೇ ವಿಧಿಯು ಚುನಾವಣಾ ಆಯೋಗಕ್ಕೆ ನೀಡಿದ ಪ್ರಧಾನ ಆಣತಿಯಾಗಿದೆ. ಯಾವುದೇ ವೆಚ್ಚದಲ್ಲಿ, ಅಗತ್ಯ ಬಿದ್ದರೆ ಮತದಾರರನ್ನು ಜಾತಿ ಮತ್ತು ಧರ್ಮದ ಆಧಾರದಲ್ಲಿ ವಿಭಜಿಸಿಯಾದರೂ ಚುನಾವಣೆಗಳನ್ನು ಗೆಲ್ಲಲು ರಾಜಕೀಯ ಪಕ್ಷಗಳು ತಮ್ಮೆಳಗೆ ಸ್ಪರ್ಧಿಸುತ್ತಿರುವ ಇಂದಿನ ಸಂದರ್ಭದಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆಯ 128ನೇ ವಿಧಿಯು ಹೆಚ್ಚು ಪ್ರಸ್ತುತವಾಗಿದೆ. ಇಂದಿನ ಮಟ್ಟಿಗೆ ಹೇಳುವುದಾದರೆ, ಇವಿಎಮ್ ವ್ಯವಸ್ಥೆಯು ಈ ಕಳವಳಗಳನ್ನು ಬಗೆಹರಿಸುವುದಿಲ್ಲ. ಚುನಾವಣಾ ಆಯೋಗವು ಒಂದೋ ಇವಿಎಮ್ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ತೊರೆಯಬೇಕು ಅಥವಾ ಕ್ಷೇತ್ರವೊಂದರ ಮತದಾನದ ಶೇ. 100 ಶೇಕಡ ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇವಿಎಮ್ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಬೇಕು. ಈ ನಿಟ್ಟಿನಲ್ಲಿ, ಇವಿಎಮ್‌ಗಳ ನೆರವಿನಿಂದ ಈವರೆಗೆ ನಡೆಸಲಾದ ಎಲ್ಲ ಚುನಾವಣೆಗಳು ಗೌಪ್ಯ ಮತದಾನದ ಮೂಲ ಅಗತ್ಯವನ್ನು ಉಲ್ಲಂಘಿಸಿವೆ ಎಂಬುದಾಗಿ ಪರಿಗಣಿಸಬೇಕು. ಸದ್ಯೋಭವಿಷ್ಯದಲ್ಲಿ ತಾಂತ್ರಿಕ ಪರಿಹಾರ ಲಭ್ಯವಾಗುವ ಸಾಧ್ಯತೆಯಿಲ್ಲದಿದ್ದರೆ, ಇವಿಎಮ್‌ಗಳ ಆಧಾರದಲ್ಲಿ ಮತಗಳನ್ನು ಲೆಕ್ಕ ಮಾಡುವ ವ್ಯವಸ್ಥೆಯನ್ನು ರದ್ದುಪಡಿಸುವ ನಿರ್ಧಾರವನ್ನು ಚುನಾವಣಾ ಆಯೋಗವು ತಕ್ಷಣ ತೆಗೆದುಕೊಳ್ಳಬೇಕು. ಬದಲಿಗೆ, ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಮತ ಪತ್ರಗಳನ್ನು ಕೈಯಿಂದ ಲೆಕ್ಕ ಮಾಡುವ ಹಳೆಯ ಪದ್ಧತಿಯನ್ನೇ ತರಬೇಕು.

ಈ ವಿಷಯವನ್ನು ನ್ಯಾಯಾಂಗವು ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಂಡು, ಈವರೆಗೆ ನಡೆದ ಚುನಾವಣೆಗಳು ಗೌಪ್ಯತೆಯ ನಿಯಮವನ್ನು ಉಲ್ಲಂಘಿಸಿವೆ ಎಂಬ ನೆಲೆಯಲ್ಲಿ ಅವುಗಳನ್ನು (ಚುನಾವಣೆಗಳನ್ನು) ನ್ಯಾಯಾಂಗ ಪರಿಶೀಲನೆಗೆ ಒಳಪಡಿಸುತ್ತದೆ ಎಂಬುದಾಗಿ ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ.

ವಿಶ್ವಾಸಾರ್ಹ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿ ಉಳಿಯಲು ಭಾರತೀಯ ಚುನಾವಣಾ ಆಯೋಗವು ಬಯಸಿದರೆ, ಅದು ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗದೆ ಈ ಎರಡು ಸಲಹೆಗಳನ್ನು ವಸ್ತುನಿಷ್ಠವಾಗಿ ಪರಿಶೀಲಿಸಬೇಕು ಹಾಗೂ ಚುನಾವಣೆಗಳನ್ನು ಮುಕ್ತ ಮತ್ತು ನ್ಯಾಯೋಚಿತವಾಗಿ ನಡೆಸುವ ತನ್ನ ಸಾಂವಿಧಾನಿಕ ಬದ್ಧತೆಯನ್ನು ಪೂರೈಸುವಂತೆ ದೃಢ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಭಾರತೀಯ ಚುನಾವಣಾ ಆಯೋಗವು ನ್ಯಾಯಮೂರ್ತಿ ಲೋಕುರ್ ಸಮಿತಿಯ ವರದಿಯ ಆಧಾರದಲ್ಲಿ ಇನ್ನಷ್ಟು ವಿಳಂಬವಿಲ್ಲದೆ ಪಾರದರ್ಶಕವಾಗಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದಾಗಿ ನಾನು ಭಾವಿಸುತ್ತೇನೆ. ಬೃಹತ್ ಪ್ರಜಾಪ್ರಭುತ್ವವೊಂದರ ಕಾವಲುಗಾರನಾಗಿ, ಈ ವಿಷಯಗಳಲ್ಲಿ ಭಾರತೀಯ ಚುನಾವಣಾ ಆಯೋಗವು ಹಿಂಜರಿಕೆಯಿಂದ ವರ್ತಿಸಲಾಗದು. ಚುನಾವಣೆಗಳನ್ನು ಮುಕ್ತ, ನ್ಯಾಯೋಚಿತ ಮತ್ತು ಪಾರದರ್ಶಕವಾಗಿ ನಡೆಸುವ ಅಗತ್ಯಕ್ಕೆ ಭಾರತೀಯ ಚುನಾವಣಾ ಆಯೋಗವು ಎಷ್ಟು ಬದ್ಧವಾಗಿದೆ ಎನ್ನುವುದೇ ಇದರಲ್ಲಿದೆ.

-ಇ.ಎ.ಎಸ್ ಶರ್ಮಾ
ಭಾರತ ಸರಕಾರದ ಮಾಜಿ ಕಾರ್ಯದರ್ಶಿ
ವಿಶಾಖಪಟ್ಟಣಂ

Be the first to comment

Leave a Reply

Your email address will not be published.


*