ಜಿಲ್ಲಾ ಸುದ್ದಿಗಳು
ಶಿರಸಿ
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದ ಅಲಿಬಾಬಾ ಮತ್ತು ಚಾಲೀಸ್ ಚೋರ್ ಗುಂಪು ಕಾರಣ ಎಂದು ಹೇಳುವ ಮೂಲಕ ಯಾರ ಹೆಸರನ್ನೂ ಹೇಳದೆ ತನ್ನ ವಿರೋಧಿಗಳಿಗೆ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ್ ಟಾಂಗ್ ನೀಡಿದ್ದಾರೆ.ನಗರದಲ್ಲಿ ಸುದ್ಧಿಗಾರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಸೋಲಿಗೆ ಕಾಂಗ್ರೆಸ್‌ನವರೇ ಕಾರಣ. ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪು ಇದ್ದು, ಒಂದು ಕಾಂಗ್ರೆಸ್ ಗೆಲ್ಲಿಸಲು ರಾತ್ರಿ ಹಗಲು ದುಡಿಯುತ್ತದೆ. ಇನ್ನೊಂದು ಗುಂಪು ಒಳಗಿನಿಂದ ರಾಜಕೀಯ ಮಾಡಿ ಒಬ್ಬರನ್ನು ಸೋಲಿಸುವ ಚೋರರ ಗುಂಪು ಇದೆ. ಅದರ ಕ್ಯಾಪ್ಟನ್ ಇಡೀ ಜಿಲ್ಲೆಯ ಜನತೆಗೆ ತಿಳಿದಿದೆ. ಯಾರೂ ಬೆಳೆಯಬಾರದು ಎನ್ನುವ ಮನೋಧರ್ಮ ಹೊಂದಿದ ದೊಡ್ಡ ಜನರೇ ಇದರ ಕ್ಯಾಪ್ಟನ್ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ರಾಜಕೀಯವಾಗಿ ನನ್ನನ್ನು ತುಳಿಯಲು ಎಲ್ಲ ಸುಳ್ಳು ಆರೋಪ ಮಾಡಲಾಗುತ್ತಿದೆ. ಮರಾಠಾ ಸಮುದಾಯದ ಬಗ್ಗೆ ಅವ್ಯವಹಾರ ಆಗಿದೆ ಎನ್ನುವುದೂ ಸುಳ್ಳು. ಜೈಲಿಗೆ ಹೋಗಿ ಬಂದ ಬ್ಲ್ಯಾಕ್ ಮೇಲ್ ಮಾಡುವ ಎನ್ ಎಸ್ ಜೀವೊಜಿ ಮಾಡುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಸ್ವತಃ ಆತನ ಮೇಲೆ ಜೀವಿಜಿ ಮೇಲೆ ಸಾಕಷ್ಟು ಚೆಕ್ ಬೌನ್ಸ್ ಪ್ರಕರಣಗಳಿವೆ. ಅಲ್ಲದೇ ಲೋಕಾಯುಕ್ತದಲ್ಲಿ ನನ್ನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸರಕಾರಕ್ಕೆ ನಿರ್ದೇಶ ನೀಡಿದೆ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದೆ. ಆಗೊಮ್ಮೆ ನನ್ನ ವಿರುದ್ಧ ಆದೇಶವಾಗಿದ್ದರೆ ತಾಕತ್ತಿದ್ದರೆ ಅದರ ದಾಖಲೆ ಪತ್ರಗಳನ್ನು ನನ್ನ ಮುಂದೆ ಹಾಜರು ಪಡಿಸಲಿ ಎಂದು ಸವಾಲು ಹಾಕಿದ ಘೋಟ್ನೇಕರ್, ತಾನು ವಿಧಾನ ಸಭೆ ಚುನಾವಣೆಗೆ ನಿಲ್ಲುವ ಸೂಚನೆ ದೊರೆತ ಹಿನ್ನೆಲೆಯಲ್ಲಿ ಈ ಆರೋಪ ಸೃಷ್ಟಿಯಾಗಿದೆ. ಇದರ ಹಿಂದೆ ದೊಡ್ಡ ಶಕ್ತಿಗಳು ಕೈವಾಡವಿದ್ದು, ಮಾಜಿ ಸಚಿವ ಸೇರಿದಂತೆ ನನ್ನ ವಿರೋಧಿಗಳೆಲ್ಲ ಒಟ್ಟಾಗಿ ಸೇರಿ ಇದನ್ನು ರೂಪಿಸಿದ್ದಾರೆ ಎಂದು ಆರೋಪಿಸಿದರು.
ಮುಂದಿನ ವಿಧಾನ ಸಭಾ ಚುನಾವಣೆಗೆ ಹಳಿಯಾಳ ಕ್ಷೇತ್ರದಿಂದ ಆಕಾಂಕ್ಷಿ ಎನ್ನುವ ವಿಚಾರ ತಿಳಿದಾಗಿನಿಂದ ನಾನು ಎಲ್ಲಿರುತೇನೆ ಅಲ್ಲೆಲ್ಲ ಬೇಡದ ಆರೋಪ ಮಾಡುತ್ತಿದ್ದಾರೆ. ನನ್ನನ್ನು ರಾಜಕೀಯವಾಗಿ ಕುಗ್ಗಿಸಲು ಸಾಕಷ್ಟು ಪ್ರಯತ್ನ ನಡೆದಿದೆ. ಆದರೆ ನನ್ನ ಬಗ್ಗೆ ಜನರಿಗೆ ತಿಳಿದಿದೆ. ಇಲ್ಲಿಯವರೆಗೆ ಮಾಡಿದ ಎಲ್ಲ ಆರೋಪಗಳಿಗೆಲ್ಲ ಸುಳ್ಳಾಗಿದ್ದು, ಎಲ್ಲ ಪ್ರಕರಣದಲ್ಲಿಯೂ ನನ್ನ ಪರವಾಗಿಯೇ ಆದೇಶವಾಗಿದೆ. ಇದರಲ್ಲಿ ದೊಡ್ಡ ದೊಡ್ಡ ಮಹನೀಯರು, ಗೋಲ್ಡ್ ಮೆಡಲ್ ತೆಗೆದುಕೊಂಡ ವಕೀಲರ ಕುಮ್ಮಕ್ಕು ಇದೆ ಎಂದ ಅವರು ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಚೋರರ ಗುಂಪು ಸೇರಿ ಈ ರೀತಿ ಮಾಡುತ್ತಿದೆ. ಇದಕ್ಕೆ ಸಧ್ಯದಲ್ಲೇ ಜನರು ಉತ್ತರ ಕೊಡಲಿದ್ದಾರೆ ಎಂದರು.
Be the first to comment